
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಫೆಬ್ರವರಿ 10 ರಿಂದ 14 ರವರೆಗೆ ಏರೋ ಇಂಡಿಯಾ ಏರ್ ಶೋ ನಡೆಯಲಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಯಲಹಂಕ ವ್ಯಾಪ್ತಿಯಲ್ಲಿ ಜನವರಿ 23 ರಿಂದ ಫೆಬ್ರವರಿ 17 ರವರೆಗೆ ಮಾಂಸ ಮಾರಾಟ ನಿಷೇಧಿಸಲಾಗಿದೆ.
ಜನವರಿ 23 ರಿಂದ ಫೆಬ್ರವರಿ 17 ರವರೆಗೆ ಯಲಹಂಕ ವಾಯುನೆಲೆಯ ಸುತ್ತ 13 ಕಿ.ಮೀ ವ್ಯಾಪ್ತಿಯೊಳಗಿನ ಮಾಂಸದ ಅಂಗಡಿಗಳು ಮತ್ತು ಮಾಂಸಾಹಾರಿ ರೆಸ್ಟೋರೆಂಟ್‌ಗಳನ್ನು ಬಂದ್ ಮಾಡುವಂತೆ ಹಾಗೂ ಕ್ರೇನ್ಗಳನ್ನು ಬಳಸದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಸೂಚನೆ ನೀಡಿದೆ.
ಯಲಹಂಕ ವಾಯುನೆಲೆಯಲ್ಲಿ ರಿಹರ್ಸಲ್ಗಾಗಿ ವಿಮಾನಗಳು ಹಾರಾಟ ನಡೆಸಲಿವೆ. ಈ ವೇಳೆ ವಿಮಾನಗಳಿಗೆ ಪಕ್ಷಿಗಳು ಡಿಕ್ಕಿ ಹೊಡೆಯುವುದನ್ನು ತಡೆಗಟ್ಟಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.
ಯಲಹಂಕ ವಲಯದ ಜಂಟಿ ಆಯುಕ್ತರ ಕಚೇರಿ ಜನವರಿ 17 ರಂದು ಹೊರಡಿಸಲಾದ ಸೂಚನೆಯ ಪ್ರಕಾರ, ನಿರ್ದಿಷ್ಟ ಪ್ರದೇಶದಲ್ಲಿನ ಎಲ್ಲಾ ಮಾಂಸಾಹಾರಿ ಅಂಗಡಿಗಳನ್ನು ಜನವರಿ 23 ರಿಂದ ಫೆಬ್ರವರಿ 17 ರವರೆಗೆ ಬಂದ್ ಮಾಡುವಂತೆ ಸೂಚಿಸಲಾಗಿದೆ.
ಈ ಅವಧಿಯಲ್ಲಿ ಮಾಂಸಾಹಾರಿ ಭಕ್ಷ್ಯಗಳನ್ನು ಬಡಿಸುವುದು ಅಥವಾ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ.
ಈ ಆದೇಶ ಉಲ್ಲಂಘಿಸಿದರೆ ಬಿಬಿಎಂಪಿ ಕಾಯ್ದೆ 2020 ಮತ್ತು ಭಾರತೀಯ ವಿಮಾನ ನಿಯಮಗಳು 1937, ನಿಯಮ 91 ರ ಅಡಿಯಲ್ಲಿ ದಂಡ ವಿಧಿಸಲಾಗುವುದು ಎಂದು ಬಿಬಿಎಂಪಿ ಎಚ್ಚರಿಸಿದೆ.
ದ್ವೈವಾರ್ಷಿಕ ಕಾರ್ಯಕ್ರಮವಾದ ಏರೋ ಇಂಡಿಯಾ 2025, ಅತ್ಯಾಧುನಿಕ ಏರೋಸ್ಪೇಸ್ ತಂತ್ರಜ್ಞಾನಗಳೊಂದಿಗೆ ವೈವಿಧ್ಯಮಯ ಮಿಲಿಟರಿ ಮತ್ತು ನಾಗರಿಕ ವಿಮಾನಗಳನ್ನು ಪ್ರದರ್ಶಿಸಲಾಗುತ್ತದೆ.
Advertisement