
ಹುಬ್ಬಳ್ಳಿ: ಹುಬ್ಬಳ್ಳಿ ನಗರದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ವಿಡಿಯೋ ಮಾಡಿ ಬ್ಲಾಕ್‌ಮೇಲ್ ಮಾಡುತ್ತಿದ್ದ 38 ವರ್ಷದ ವ್ಯಕ್ತಿಯನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಶರಾವತಿನಗರದ ಕೆಇಬಿ ಲೇಔಟ್ ನಿವಾಸಿ ಅಶ್ಫಾಕ್ ಜೋಗನ್‌ಕೊಪ್ಪ ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಅಶ್ಫಾಕ್ ಟಿಪ್ಪುನಗರದಲ್ಲಿ ಝರಾಕ್ಸ್ ಮತ್ತು ಮೊಬೈಲ್ ರೀಚಾರ್ಜ್ ಅಂಗಡಿ ಇಟ್ಟುಕೊಂಡಿದ್ದಾನೆ.
ಆರೋಪಿಯು ಮೊಬೈಲ್ ರೀಚಾರ್ಜ್‌ಗಾಗಿ ತನ್ನ ಅಂಗಡಿಗೆ ಬಂದ ಅಪ್ರಾಪ್ತ ಬಾಲಕಿಯರು ಮತ್ತು ಮಹಿಳೆಯರೊಂದಿಗೆ ಬಣ್ಣ ಬಣ್ಣದ ಮಾತುಗಳನ್ನು ಆಡಿ, ಬುಟ್ಟಿಗೆ ಬೀಳಿಸಿಕೊಳ್ಳುತ್ತಿದ್ದನು. ಬಳಿಕ, ಅವರಿಗೆ ಹಣದಾಸೆ ತೋರಿಸಿ ಪ್ರೀತಿಸುವ ನಾಟಕವಾಡುತ್ತಿದ್ದನು. ನಂತರ, ಪ್ರೀತಿಯ ಹೆಸರಿನಲ್ಲಿ ಮಂಚಕ್ಕೆ ಕರೆಯುತ್ತಿದ್ದನು. ಅಲ್ಲಿ, ಖಾಸಗಿ ಕ್ಷಣಗಳ ದೃಶ್ಯಗಳನ್ನು ಮೊಬೈಲ್ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿಕೊಳುತ್ತಿದ್ದನು.
ನಂತರ, ರಾಸಲೀಲೆಯ ವಿಡಿಯೋಗಳನ್ನು ಇಟ್ಟುಕೊಂಡು “ನಾನು ಹೇಳಿದಂತೆ ಕೇಳಬೇಕು” ಎಂದು ಬ್ಲ್ಯಾಕ್‌ಮೇಲ್ ಮಾಡಿ, ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದನು ಎಂದು ಪೊಲೀಸರು ಹೇಳಿದ್ದಾರೆ.
ಅತ್ಯಾಚಾರಕ್ಕೆ ಒಳಗಾದ ಅಪ್ರಾಪ್ತ ಬಾಲಕಿಯ ಪೋಷಕರು ಅಶ್ಪಾಕ್ ಜೋಗನ್‌ಕೊಪ್ಪ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಕಸಬಾ ಠಾಣೆಯ ಇನ್ಸ್ಪೆಕ್ಟರ್ ರಾಘವೇಂದ್ರ ಹಳ್ಳೂರ, ಆರೋಪಿ ಅಶ್ಪಾಕ್ ಜೋಗನ್‌ಕೊಪ್ಪನನ್ನು ಬಂಧಿಸಿ, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ವಿಚಾರಣೆ ವೇಳೆ ಅಶ್ಪಾಕ್ ಜೋಗನ್‌ಕೊಪ್ಪ ಮೊಬೈಲ್‌ನಲ್ಲಿ 10ಕ್ಕೂ ಹೆಚ್ಚು ಮಹಿಳೆಯರೊಂದಿಗೆ ಆಡಿದ ರಾಸಲೀಲೆಯ ವಿಡಿಯೋಗಳು ಸಿಕ್ಕಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಆಶ್ಪಕ್ ಮಹಿಳೆಯರಿಗೆ ವಿಡಿಯೋ ಕರೆ ಮಾಡಿ, ಖಾಸಗಿ ಅಂಗಾಂಗಳನ್ನು ತೋರಿಸುವಂತೆ ಹೇಳುತ್ತಿದ್ದನು. ಮಹಿಳೆಯರು ನಗ್ನವಾದ ಬಳಿಕ, ಸ್ಕ್ರೀನ್ ರೆಕಾರ್ಡ್ ಮಾಡಿಕೊಳ್ಳುತ್ತಿದ್ದನು ಎಂಬುದು ತನಿಖೆಯಿಂದ ತಿಳಿದುಬಂದಿದೆ.
ವಿಷಯದ ಸೂಕ್ಷ್ಮತೆಯನ್ನು ಪರಿಗಣಿಸಿ, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಆರೋಪಿಯ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement