ರಾಜ್ಯದ ಕೃಷಿ ವಲಯದಲ್ಲಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹ್ಹಾಣ್ ರಾಜ್ಯದ ಕೃಷಿ ಸಚಿವ ಚಲುವರಾಯ ಸ್ವಾಮಿ, ಸಚಿವರಾದ ಪ್ರಿಯಾಂಕ್ ಖರ್ಗೆ, ಕೃಷ್ಣ ಬೈರೇಗೌಡ ಸೇರಿದಂತೆ ರಾಜ್ಯದ ಉನ್ನತ ಅಧಿಕಾರಿಗಳು ಜೊತೆ ಚರ್ಚೆ ನಡೆಸಿದರು. ನಂತರ ಮಾತನಾಡಿದ ಶಿವರಾಜ್ ಸಿಂಗ್ ಚೌಹ್ಹಾಣ್, ಕೃಷಿ ಕ್ಷೇತ್ರದಲ್ಲಿ ಯಾಂತ್ರೀಕರಣ ಯೋಜನೆಗಳಿಗಾಗಿ ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನವನ್ನು ಕೇಳಿದ್ದಾರೆ. ಅದಕ್ಕೆ ಸಚಿವರು ಈ ಹಿಂದೆ ಬಿಡುಗಡೆಯಾದ ಹಣವನ್ನು ಬಳಸಿಕೊಳ್ಳಿ, ಹೆಚ್ಚುವರಿ ಹಣವನ್ನು ಬಿಡುಗಡೆ ಮಾಡುವ ಕೆಲಸ ಮಾಡುತ್ತೇವೆ ಎಂದು ಹೇಳಿದರು. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 4 ಲಕ್ಷಕ್ಕೂ ಹೆಚ್ಚಿನ ಮನೆ ಮಂಜೂರು ಮಾಡಲಾಗುತ್ತಿದೆ. ಈ ಆರ್ಥಿಕ ವರ್ಷದಲ್ಲಿ ಕರ್ನಾಟಕಕ್ಕೆ ಸುಮಾರು 7.5 ಲಕ್ಷ ಮನೆಗಳನ್ನು ನೀಡಿದ್ದೇವೆ ಎಂದರು. ಈ ಹಿಂದಿನ ಅನುದಾನ ಬಳಕೆಯಾಗಿರುವುದರಿಂದ ಇಂದು ಜಲಾನಯನ ಯೋಜನೆಗಳಾಗಿ ರೂ. 97 ಕೋಟಿಯನ್ನು ಬಿಡುಗಡೆ ಮಾಡಿದ್ದೇವೆ ಎಂದರು.
ರಾಜ್ಯ ಬಿಜೆಪಿಯಲ್ಲಿ ಆಂತರಿಕ ಸಂಘರ್ಷ ಮುಂದುವರೆದಿದೆ. ಇದರ ಮಧ್ಯೆ ರಾಜ್ಯ ಬಿಜೆಪಿ ಆಂತರಿಕ ಚುನಾವಣೆ ಉಸ್ತುವಾರಿ ಶಿವರಾಜ್ ಸಿಂಗ್ ಚೌಹಾಣ್ ಅವರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೀಘ್ರದಲ್ಲಿಯೇ ಚುನಾವಣಾ ಪ್ರಕ್ರಿಯೆಗಳು ಆರಂಭವಾಗಲಿವೆ ಎಂದು ಹೇಳಿರುವುದು ಬಿ.ವೈ. ವಿಜಯೇಂದ್ರ ಬಣದಲ್ಲಿ ತಳಮಳ ಸೃಷ್ಟಿಸಿದೆ. ರಾಜ್ಯಕ್ಕೆ ಆಗಮಿಸಿರುವ ಶಿವರಾಜ್ ಸಿಂಗ್ ಚೌಹಾಣ್ ಅವರು, ರಾಜ್ಯ ಘಟಕದ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಎಲ್ಲರೂ ಚರ್ಚಿಸಿಯೇ ಆಯ್ಕೆ ಮಾಡುತ್ತೇವೆ. ಬೂತ್ ಸಮಿತಿ ಅಧ್ಯಕ್ಷದಿಂದ ರಾಜ್ಯ ಘಟಕದವರೆಗೂ ಚುನಾವಣೆ ನಡೆಯಲಿದೆ ಎಂದರು. ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರರನ್ನು ಕೆಳಗಿಳಿಸುವಂತೆ ಶಾಸಕರಾದ ಬಸನಗೌಡ ಪಾಟೀಲ ಯಾತ್ನಾಳ್, ರಮೇಶ್ ಜಾರಕಿಹೊಳಿ ತಂಡ ಪಟ್ಟು ಹಿಡಿದಿದೆ. ಆದರೆ ಅಧ್ಯಕ್ಷನಾಗಿ ನಾನೇ ಮುಂದುವರೆಯುವೆ ಎಂದು ವಿಜಯೇಂದ್ರ ಬಹಿರಂಗ ಹೇಳಿಕೆ ನೀಡಿರುವುದು ಹೈಕಮಾಂಡ್ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.
ಮುಡಾ ನಿವೇಶನಗಳ ಅಕ್ರಮ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಸುಮಾರು 300 ಕೋಟಿ ರೂ. ಮೌಲ್ಯದ 142 ಸ್ಥಿರಾಸ್ತಿಯನ್ನು ನಿನ್ನೆ ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿತ್ತು. ಭ್ರಷ್ಟರ ಬೇಟೆಯನ್ನು ಮುಂದುವರೆಸಿರುವ ಇಡಿ, ಮುಡಾದಿಂದ ಮತ್ತೊಂದು ಲಿಸ್ಟ್ ಕಳುಹಿಸುವಂತೆ ಪ್ರಾಧಿಕಾರಕ್ಕೆ ಸೂಚನೆ ನೀಡಿದೆ. ಅಕ್ರಮ ಸಂಬಂಧ ಸಿಕ್ಕ ದಾಖಲೆ ಆಧಾರದಲ್ಲಿ ಇಡಿ ಅಧಿಕಾರಿಗಳು ಲಿಸ್ಟ್ ಕೇಳಿದ್ದಾರೆ. ನಿನ್ನೆ 142 ಸ್ಥಿರಾಸ್ತಿ ಮುಟ್ಟುಗೋಲು ಹಾಕೊಂಡಿರುವ ಇಡಿ ಇದೀಗ 631 ಮುಡಾ ನಿವೇಶನಗಳ ಬಗ್ಗೆ ಮಾಹಿತಿ ಕೇಳಿದೆ. ಈ ಕುರಿತಾಗಿ ಮುಡಾಗೆ ಇಡಿ ಅಧಿಕಾರಿಗಳು ಪತ್ರ ಬರೆದಿದ್ದಾರೆ. ಈಮಧ್ಯೆ ಮುಡಾ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿರುವ ಸಂಬಂಧ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಮುಡಾ ಹಗರಣದ ವಿರುದ್ಧದ ಹೋರಾಟದಲ್ಲಿ ಇದು ಒಂದು ಪ್ರಮುಖ ಗೆಲುವು, ಮುಖ್ಯಮಂತ್ರಿಗಳು ತಮ್ಮ ಕುಟುಂಬಕ್ಕೆ ಅಕ್ರಮವಾಗಿ 14 ನಿವೇಶನಗಳನ್ನು ಪಡೆದುಕೊಂಡಿದ್ದಾರೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ, ಹೀಗಾಗಿ ಭಂಡತನ ಬಿಟ್ಟು ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜಿನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ವಿಚಿತ್ರ ಯಂತ್ರೋಪಕರಣಗಳನ್ನು ಹೊತ್ತಿದ್ದ ಏರ್ ಬಲೂನ್ ವೊಂದು ಬೀದರ್ ನಲ್ಲಿ ಪತನವಾಗಿದ್ದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಬೀದರ್ ನ ಹುಮ್ನಾಬಾದ್ ತಾಲೂಕಿನ ಜಲಸಂಗಿ ಗ್ರಾಮದಲ್ಲಿ ಏರ್ ಬಲೂನ್ ವೊಂದು ಬಿದ್ದಿತ್ತು. ಹೀಗಾಗಿ ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇನ್ನು ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದರು. ಈ ವೇಳೆ ಅದು ಹವಾಮಾನ ಅಧ್ಯಯನಕ್ಕಾಗಿ ಹೈದರಾಬಾದ್ ನಿಂದ ಆಕಾಶಕ್ಕೆ ಹಾರಿಸಿದ್ದ ಏರ್ ಬಲೂನ್ ಎಂದು ತಿಳಿದುಬಂದಿದೆ. ಹೈದರಾಬಾದ್ ನ Tata Institute of Fundamental Research ಕೇಂದ್ರದಿಂದ ಬಲೂನ್ ಅನ್ನು ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಹಾರಿ ಬಿಡಲಾಗಿತ್ತು. ಅದು ಇಂದು 6 ಗಂಟೆಯ ಸುಮಾರಿಗೆ ಜಲಸಂಗಿ ಗ್ರಾಮದಲ್ಲಿ ಬಂದು ಬಿದ್ದಿದೆ.
Advertisement