ಶಿಕ್ಷಣದ ಗುಣಮಟ್ಟ ಸುಧಾರಿಸಲು ಸರ್ಕಾರ ಕ್ರಮ: ತಾಲೂಕು ಮಟ್ಟದಲ್ಲಿ 'ಶಿಕ್ಷಣ ಸುಧಾರಣಾ ಸಮಿತಿ' ರಚನೆಗೆ ಸೂಚನೆ!

ಸ್ಥಳೀಯ ಮುಖಂಡರ ಪ್ರಭಾವ ಬಳಸಿ, ಪ್ರತಿ ಮಗುವಿಗೆ ಶಾಲಾ ಶಿಕ್ಷಣ ಮತ್ತು ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡುವುದು ಸಮಿತಿಗಳ ಉದ್ದೇಶವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ರಾಜ್ಯದಾದ್ಯಂತ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ತಾಲೂಕು ಮಟ್ಟದಲ್ಲಿ ಶಿಕ್ಷಣ ಸುಧಾರಣಾ ಸಮಿತಿಗಳ ರಚನೆಗೆ ಆದೇಶ ಹೊರಡಿಸಿದೆ.

ಆಯಾ ಕ್ಷೇತ್ರಗಳ ಶಾಸಕರ ಅಧ್ಯಕ್ಷತೆಯಲ್ಲಿ ಸಮಿತಿಗಳನ್ನು ರಚಿಸಲಾಗುತ್ತಿದ್ದು, ಸಮಿತಿಯು ಶಾಲೆಗಳಲ್ಲಿ ಮಕ್ಕಳ ದಾಖಲಾತಿ, ಹಾಜರಾತಿ, ಕಲಿಕೆ, ಮಾನವ ಸಂಪನ್ಮೂಲದ ಸಮರ್ಪಕ ಬಳಕೆ ಇತ್ಯಾದಿ ಅಂಶಗಳ ಕುರಿತು ಚರ್ಚಿಸಿ, ಸುಧಾರಣೆ ತರುವತ್ತ ಕೆಲಸ ಮಾಡಲಿದೆ. ಇದರ ಭಾಗವಾಗಿ, ಅತ್ಯಂತ ಕಡಿಮೆ ದಾಖಲಾತಿಯುಳ್ಳ ಶಾಲೆಗಳನ್ನು ಇತರೆ ಶಾಲೆಗಳೊಂದಿಗೆ ಸಂಯೋಜಿಸಿ ‘ಹಬ್‌ ಆ್ಯಂಡ್‌ ಸ್ಪೋಕ್‌ ಮಾಡೆಲ್‌’ ರೀತಿ ಅಭಿವೃದ್ಧಿಪಡಿಸಲು ಸೂಚನೆ ನೀಡಿದೆ.

ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರನ್ನು ಸಂಪರ್ಕಿಸಿ ಈ ಸಮಿತಿ ರಚಿಸಬೇಕು. ಆಯಾ ತಾಲ್ಲೂಕು ವ್ಯಾಪ್ತಿಯ ಶಾಸಕರು ಈ ಸಮಿತಿಯ ಅಧ್ಯಕ್ಷರಾಗಲಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಸದಸ್ಯ ಕಾರ್ಯದರ್ಶಿ ಆಗಿ ಇರಲಿದ್ದಾರೆಂದು ಎಲ್ಲ ಉಪ ನಿರ್ದೇಶಕರಿಗೆ (ಆಡಳಿತ) ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕರು (ಪ್ರೌಢ ಶಿಕ್ಷಣ) ಸೂಚನೆ ನೀಡಿದ್ದಾರೆ.

ತಹಶೀಲ್ದಾರ್, ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ, ಪಂಚಾಯತ್‌ರಾಜ್‌ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್, ತಾಲ್ಲೂಕಿನಲ್ಲಿ ಅತೀ ಹೆಚ್ಚು ದಾಖಲಾತಿ ಇರುವ ಪ್ರೌಢ ಶಾಲೆ ಮತ್ತು ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು, ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು, ಡಯಟ್‌ನ ಹಿರಿಯ ಉಪನ್ಯಾಸಕರು (ಒಬ್ಬರು– ತಾಲ್ಲೂಕು ನೋಡಲ್‌ ಅಧಿಕಾರಿ), ತಾಲ್ಲೂಕಿನಲ್ಲಿ ಹೆಚ್ಚಿನ ದಾಖಲಾತಿ ಇರುವ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಎಸ್‌ಡಿಎಂ ಪ್ರತಿನಿಧಿಗಳು (ತಲಾ ಒಬ್ಬರು), ಸರ್ಕಾರ ನಾಮ ನಿರ್ದೇಶಿತ ಐವರು ಈ ಸಮಿತಿಯಲ್ಲಿ ಸದಸ್ಯರಾಗಿರುತ್ತಾರೆ.

ಸಂಗ್ರಹ ಚಿತ್ರ
ರಾಜ್ಯ ಉನ್ನತ ಶಿಕ್ಷಣ ಪ್ರವೇಶಾತಿ ಉತ್ತಮಪಡಿಸುವಲ್ಲಿ ಯೋಜನೆಗಳ ರೂಪಿಸಿ: ಅಧಿಕಾರಿಗಳಿಗೆ ಸಿಎಂ ಸೂಚನೆ

ಸರ್ಕಾರ ನಾಮನಿರ್ದೇಶನ ಮಾಡುವ ಐವರಲ್ಲಿ ಒಬ್ಬರು ಪದವೀಧರರು, ಉಳಿದಂತೆ ಎಸ್‌ಸಿ/ ಎಸ್‌ಟಿ, ಮಹಿಳೆ, ಹಿಂದುಳಿದ ಮತ್ತು ಸಾಮಾನ್ಯ ಗುಂಪಿನ ಇಬ್ಬರು ಇರಬೇಕು ಎಂದೂ ಆದೇಶದಲ್ಲಿ ವಿವರಿಸಲಾಗಿದೆ.

ಒಟ್ಟು 14 ಜನರನ್ನೊಳಗೊಂಡ ಸಮಿತಿ ಇದಾಗಿದ್ದು, ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲು ಸಮಿತಿ ರಚನೆ ಮಾಡಿದ್ದು, ಶಾಲಾ ದಾಖಲಾತಿ, ಗುಣಮಟ್ಟದ ಶಿಕ್ಷಣ, ವಿದ್ಯಾರ್ಥಿಗಳ ಹಾಜರಾತಿ, ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಸಮಿತಿ ಕಾರ್ಯ ನಿರ್ವಹಣೆ ಮಾಡಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಸಮಿತಿಯು ತಾನು ನಡೆಸಿದ ಚಟುವಟಿಕೆಗಳು ಮತ್ತು ಪ್ರಗತಿಯ ವರದಿಗಳನ್ನು ಶಿಕ್ಷಣ ಇಲಾಖೆಗೆ ಸಲ್ಲಿಸಬೇಕು. ಸ್ಥಳೀಯ ಮುಖಂಡರ ಪ್ರಭಾವ ಬಳಸಿ, ಪ್ರತಿ ಮಗುವಿಗೆ ಶಾಲಾ ಶಿಕ್ಷಣ ಮತ್ತು ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡುವುದು ಸಮಿತಿಗಳ ಉದ್ದೇಶವಾಗಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com