News Headlines 20-01-25 | ಗೋವುಗಳ ಮೇಲಿನ ಅಮಾನುಷ ಕೃತ್ಯ: ತನಿಖೆಗೆ ಆದೇಶ; ಕೇರಳ ಉದ್ಯಮಿ ಅಡ್ಡಕಟ್ಟಿ: ನಗದು, ಕಾರಿನೊಂದಿಗೆ ದರೋಡೆಕೋರರು ಎಸ್ಕೇಪ್; ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ!

News Headlines 20-01-25 | ಗೋವುಗಳ ಮೇಲಿನ ಅಮಾನುಷ ಕೃತ್ಯ: ತನಿಖೆಗೆ ಆದೇಶ; ಕೇರಳ ಉದ್ಯಮಿ ಅಡ್ಡಕಟ್ಟಿ: ನಗದು, ಕಾರಿನೊಂದಿಗೆ ದರೋಡೆಕೋರರು ಎಸ್ಕೇಪ್; ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ!

1. ಗೋವುಗಳ ಮೇಲಿನ ಅಮಾನುಷ ಕೃತ್ಯ: ತನಿಖೆಗೆ ರಾಜ್ಯ ಸರ್ಕಾರ ಆದೇಶ

ರಾಜ್ಯದಲ್ಲಿ ಗೋವುಗಳ ಮೇಲಿನ ಅಮಾನವೀಯ ಕೃತ್ಯಗಳು ಹೆಚ್ಚಾಗುತ್ತಲೇ ಇವೆ. ಇದೀಗ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ಗರ್ಭಿಣಿ ಹಸುವಿನ ತಲೆ-ಕಾಲು ಕಡಿದು, ಹೊಟ್ಟೆ ಸೀಳಿ ಕರುವನ್ನೂ ಹತ್ಯೆ ಮಾಡಿದ ಘೋರ ಘಟನೆ ನಡೆದಿದೆ. ಕೊಂಡಾಕುಳಿಯ ಕೃಷ್ಣ ಆಚಾರಿ ಎಂಬುವವರು ಹಸುವನ್ನು ಮೇಯಲು ಬಿಟ್ಟಿದ್ದರು. ರಾತ್ರಿ ಮನೆಗೆ ಬಾರದಿದ್ದರಿಂದ ಹಸುವನ್ನು ಹುಡುಕಿಕೊಂಡು ಹೋಗಿದ್ದಾಗ ಹತ್ಯೆ ಮಾಡಿರುವ ಕುರುಹು ಪತ್ತೆಯಾಗಿದೆ. ಕರುವನ್ನು ಕೊಂದು ಅದನ್ನೂ ಅಲ್ಲೇ ಎಸೆದು ದನದ ಮಾಂಸವನ್ನು ದುಷ್ಕರ್ಮಿಗಳು ಕೊಂಡೊಯ್ದಿದ್ದಾರೆ. ಈ ಸಂಬಂಧ ಎಲ್ಲೆಡೆ ತೀವ್ರ ವಿರೋಧ ಹಾಗೂ ಟೀಕೆಗಳು ವ್ಯಕ್ತವಾಗುತ್ತಿವೆ. ರಾಜ್ಯದಲ್ಲಿ ಗೋಹಿಂಸೆ ಹಾಗೂ ಗೋಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ. ಈ ಬಗ್ಗೆ ಮಾತನಾಡಿದ ಗೃಹ ಸಚಿವ ಡಾ. ಜಿ ಪರಮೇಶ್ವರ್, ಗೋವುಗಳ ರಕ್ಷಣೆಗೆ ಸರ್ಕಾರ ಮುಂದಾಗಿದೆ. ಗೋವುಗಳ ಮೇಲಿನ ದುಷ್ಕೃತ್ಯಗಳನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಪೊಲೀಸರಿಗೆ ಮತ್ತೊಮ್ಮೆ ಸೂಚಿಸಿದ್ದೇನೆ ಎಂದರು. ಈ ರೀತಿಯ ಮನಸ್ಥಿತಿ ಇರುವವರನ್ನು ಮೊದಲು ಗುರುತಿಸಬೇಕು. ಕೃತ್ಯದ ಹಿಂದೆ ಬೇರೆ ಯಾರಾದ್ದಾದರೂ ಪ್ರಚೋದನೆ ಇದೆಯೇ? ಅಥವಾ ವೈಯಕ್ತಿಕವಾಗಿ ಕೃತ್ಯ ಎಸಗುತ್ತಿದ್ದಾರೆಯೇ ಅಥವಾ ಸಂಘಟನೆಗಳಿವೆಯೇ ಎಂಬೆಲ್ಲಾ ವಿಚಾರಗಳನ್ನು ತನಿಖೆ ನಡೆಸುವಂತೆ ಸೂಚನೆ ನೀಡಿದ್ದೇನೆಂದು ತಿಳಿಸಿದರು.

2. Kerala ಉದ್ಯಮಿ ಅಡ್ಡಕಟ್ಟಿ; ನಗದು, ಕಾರಿನೊಂದಿಗೆ ದರೋಡೆಕೋರರು ಎಸ್ಕೇಪ್

ಮೈಸೂರಿನ ಜಯಪುರ ಹೋಬಳಿಯ ಹಾರೋಹಳ್ಳಿ ಗ್ರಾಮದ ಬಳಿ ಕೇರಳ ಉದ್ಯಮಿಯ ಮೇಲೆ ನಾಲ್ವರು ದರೋಡೆಕೋರರ ತಂಡವೊಂದು ಹಲ್ಲೆ ನಡೆಸಿ, ಕಾರು ಮತ್ತು ನಗದು ದೋಚಿ ಪರಾರಿಯಾಗಿದ್ದಾರೆ. ಹಗಲು ಹೊತ್ತಿನಲ್ಲಿ ಜನನಿಬಿಡ ರಸ್ತೆಯಲ್ಲಿ ಈ ಕೃತ್ಯ ನಡೆದಿದೆ. ಘಟನೆ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು ತೀವ್ರ ಕಳವಳ ಮೂಡಿಸಿದೆ. ನಾಲ್ವರು ಮುಸುಕುಧಾರಿಗಳ ತಂಡ, ಕೇರಳದ ಉದ್ಯಮಿ ಸೂಫಿಯನ್ನು ಅಡ್ಡಗಟ್ಟಿದೆ. ದರೋಡೆಕೋರರು ಉದ್ಯಮಿಯನ್ನು ವಾಹನದಿಂದ ಹೊರಗೆಳೆದು, ಬೆದರಿಸಿ ತಳ್ಳಿದ್ದಾರೆ. ನಂತರ ಅವರ ಬಳಿ 1.5 ಲಕ್ಷ ರೂಪಾಯಿ ನಗದು ಹಣವಿದ್ದ ಬ್ಯಾಗನ್ನು ಕಿತ್ತುಕೊಂಡು ಕಾರಿನೊಂದಿಗೆ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

3. ಕೆಲಸಕ್ಕೆ ತಡವಾಗಿ ಬಂದ ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ

ಹಬ್ಬ ಮುಗಿಸಿಕೊಂಡು ತಡವಾಗಿ ಕೆಲಸಕ್ಕೆ ಬಂದಿದ್ದ ಮೂವರು ಕಾರ್ಮಿಕರಿಗೆ ಮಾಲೀಕನು ಅಮಾನುಷವಾಗಿ ಥಳಿಸಿರುವ ಆಘಾತಕಾರಿ ಘಟನೆ ವಿಜಯಪುರದಲ್ಲಿ ನಡೆದಿದೆ. ಗಾಂಧಿನಗರದ ಸ್ಟಾರ್ ಚೌಕ್ ಬಳಿ ಇಟ್ಟಿಗೆ ಕಾರ್ಖಾನೆಯಲ್ಲಿ ಮೂವರು ಕಾರ್ಮಿಕರಿಗೆ ಪೈಪ್ ನಿಂದ ಹಲ್ಲೆ ನಡೆಸಿರುವ ವೀಡಿಯೊ ವೈರಲ್ ಆಗಿದೆ. ಸಂತ್ರಸ್ತರು ಬಾಗಲಕೋಟೆ ಜಿಲ್ಲೆಯ ಚಕ್ಕಲಿಕಿ ಗ್ರಾಮದ ಸದಾಶಿವ ಮಾದರ್, ಎಸ್. ಬಬಲಾದಿ ಮತ್ತು ಉಮೇಶ್ ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ಇಟ್ಟಿಗೆ ಕಾರ್ಖಾನೆಯ ಮಾಲೀಕ ಖೇಮು ರಾಥೋಡ್, ವಿಶಾಲ ಜುಮನಾಳ ಹಾಗೂ ಸಚಿನ್ ಮಾನವರನನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.

4. ನಮ್ಮ ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆಗೆ ವ್ಯಕ್ತಿ ಯತ್ನ

ಬೆಂಗಳೂರಿನ ನಮ್ಮ ಮೆಟ್ರೋ ರೈಲಿನ ಮುಂದೆ ಹಾರಿ ಆತ್ಮಹತ್ಯೆಗೆ ಯತ್ನಿಸುವ ಘಟನೆಗಳು ಹೆಚ್ಚಾಗುತ್ತಿವೆ. ಇಂದು ಬೆಳಗ್ಗೆ ಜಾಲಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮೆಟ್ರೋ ರೈಲು ಬರುತ್ತಿದ್ದಂತೆ 49 ವರ್ಷದ ವಾಯುಪಡೆಯ ಮಾಜಿ ಅಧಿಕಾರಿ ಬಿಹಾರ ಮೂಲದ ಅನಿಲ್ ಕುಮಾರ್ ಪಾಂಡೆ ಎಂಬುವರು ಟ್ರ್ಯಾಕ್‌ಗೆ ಹಾರಿದ್ದಾರೆ. ಆದರೆ, ಮೆಟ್ರೋ ಮಹಿಳಾ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಅವರ ಜೀವ ಉಳಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ನಂತರ, ಹಸಿರು ಮಾರ್ಗದಲ್ಲಿ ಮೆಟ್ರೋ ರೈಲು ಸೇವೆಗಳು ಕೆಲಕಾಲ ಅಸ್ಥವಸ್ಥಗೊಂಡಿತ್ತು.

5. Mudascam ನಿವೇಶನ ED ಮುಟ್ಟುಗೋಲಿಗೂ ನನಗೂ ಸಂಬಂಧವಿಲ್ಲ: ಸಿದ್ದರಾಮಯ್ಯ

ಜಾರಿ ನಿರ್ದೇಶನಾಲಯ ಮುಡಾ ಸೈಟ್ಗಳನ್ನು ಮುಟ್ಟುಗೋಲು ಹಾಕಿಕೊಂಡಿರುವುದು ಮತ್ತು ಹಗರಣ ಸಂಬಂಧ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆ ಸಂಬಂಧ ಸಿಎಂ ಸಿದ್ದರಾಮಯ್ಯ ಮೊದಲ ಬಾರಿ ಪ್ರತಿಕ್ರಿಯಿಸಿದ್ದು ಹಗರಣಕ್ಕೂ ನನಗೂ ಸಂಬಂಧ ಇಲ್ಲ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಇಂದು ಮಾತನಾಡಿದ ಅವರು, ಇಡಿ ಅಧಿಕಾರಿಗಳ ಮಾಧ್ಯಮ ಪ್ರಕಟಣೆಗೂ ನನಗೂ ಸಂಬಂಧವಿಲ್ಲ. ರಾಜಕೀಯ ಉದ್ದೇಶದಿಂದ ತನಿಖೆ ಮಾಡುತ್ತಿದ್ದಾರೆ. 50:50 ಸೈಟ್ಗಳನ್ನು ಮುಟ್ಟುಗೋಲು ಹಾಕಿದ್ದೇವೆ ಎನ್ನುತ್ತಿದ್ದಾರೆ. ಆದರೆ, ಅದಕ್ಕೂ ನನಗೂ ಸಂಬಂಧ ಇಲ್ಲ ಎಂದು ಹೇಳಿದರು. ಇದಕ್ಕೂ ಮುನ್ನ ಮಾತನಾಡಿದ್ದ ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ, ಇಡಿ ಮುಟ್ಟುಗೋಲು ಹಾಕಿಕೊಂಡಿರುವ ನಿವೇಶನಗಳಲ್ಲಿ ತಾಯಿ ಪಾರ್ವತಿ ಅವರಿಗೆ ಹಂಚಿಕೆಯಾಗಿದ್ದ 14 ನಿವೇಶನಗಳು ಸೇರಿಲ್ಲ. ಆದರೂ ಬಿಜೆಪಿ ಸಿದ್ದರಾಮಯ್ಯ ಅವರ ಹೆಸರನ್ನು ಹಾಳುಮಾಡಲು ಈ ರೀತಿಯ ಪಿತೂರಿ ನಡೆಸುತ್ತಿದೆ ಎಂದು ಕಿರಿಕಾಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com