
ಮಂಡ್ಯ: ರೈತರ ಜಮೀನುಗಳನ್ನು ವಕ್ಫ್ ಆಸ್ತಿ ಎಂದು ನಮೂದಿಸಿರುವುದನ್ನು ವಿರೋಧಿಸಿ ರೈತ ಸಂಘಟನೆಗಳು ಮತ್ತು ಹಿಂದೂ ಕಾರ್ಯಕರ್ತರು ಬಂದ್‌ಗೆ ಕರೆನೀಡಿರುವ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆಯಿಂದಲೇ ಶ್ರೀರಂಗಪಟ್ಟಣದಲ್ಲಿ ಅಂಗಡಿ-ಮುಂಗಟ್ಟುಗಳು ಬಂದ್ ಆಗಿವೆ.
ಜಮೀನುಗಳ ಪಹಣಿ, ಆರ್‌ಟಿಸಿ ದಾಖಲೆಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಿರುವುದನ್ನು ವಿರೋಧಿಸಿ ರೈತರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಕಿರಂಗೂರು, ಶೆಟ್ಟಿಹಳ್ಳಿ, ಬಾಬುರಾಯನಕೊಪ್ಪಲು, ದರಸಕುಪ್ಪೆ ಗ್ರಾಮಗಳ ಸುಮಾರು 50ಕ್ಕೂ ಹೆಚ್ಚು ರೈತರ ಜಮೀನು ದಾಖಲೆಗಳಲ್ಲಿ ಜಮೀನು ವಕ್ಫ್ ಮಂಡಳಿ ಒಡೆತನದಲ್ಲಿದೆ ಎಂದು ತೋರಿಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಬೆಳವಣಿಗೆ ಈ ಭಾಗದ ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಕೆಲವು ರೈತರು ಆಸ್ತಿ ಮಾರಾಟ ಅಥವಾ ಪಾಲು ಮಾಡುವ ಉದ್ದೇಶದಿಂದ ತಮ್ಮ ಆರ್‌ಟಿಸಿ ದಾಖಲೆಗಳನ್ನು ಪರಿಶೀಲಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ.
‘ಮದ್ದಿನ ಮನೆ’ (ಶಸ್ತ್ರಾಗಾರ) ಸೇರಿದಂತೆ ಶ್ರೀರಂಗಪಟ್ಟಣ ಮತ್ತು ಸುತ್ತಮುತ್ತಲಿನ ಹಲವಾರು ಐತಿಹಾಸಿಕ ಸ್ಮಾರಕಗಳನ್ನು ಸಹ ವಕ್ಫ್ ಮಂಡಳಿಯ ಆಸ್ತಿ ಎಂದು ಪಟ್ಟಿ ಮಾಡಲಾಗಿದೆ ಎಂದು ಹಿಂದೂ ಕಾರ್ಯಕರ್ತರು ಆರೋಪಿಸಿದ್ದಾರೆ.
ಈ ಬೆಳವಣಿಗೆಯನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ), ಬಜರಂಗದಳ, ರೈತ ಸಂಘ, ಮಂಡ್ಯ ರಕ್ಷಣಾ ವೇದಿಕೆ ಮತ್ತು ಇತರ ಸಂಘಟನೆಗಳು ಸೋಮವಾರ ಸ್ವಯಂಪ್ರೇರಿತ ಬಂದ್‌ಗೆ ಕರೆ ನೀಡಿವೆ. ಬಂದ್ ಕರೆಗೆ ಸ್ಪಂದಿಸಿ ಸ್ಥಳೀಯ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಮುಚ್ಚಿದ್ದಾರೆ.
ಬಿಜೆಪಿ ಈ ಹಿಂದೆ 'ನಮ್ಮ ಭೂಮಿ, ನಮ್ಮ ಹಕ್ಕು' ಎಂಬ ಘೋಷಣೆಯಡಿಯಲ್ಲಿ ವಕ್ಫ್ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯದಾದ್ಯಂತ ಪ್ರತಿಭಟನೆ ಪ್ರಾರಂಭಿಸಿತ್ತು. ಭಾರಿ ವಿರೋಧದ ನಂತರ, ಕಾಂಗ್ರೆಸ್ ಸರ್ಕಾರ ವಕ್ಫ್ ಮಂಡಳಿ ನೀಡಿದ್ದ ನೋಟಿಸ್‌ಗಳನ್ನು ಹಿಂಪಡೆಯುವುದಾಗಿ ಘೋಷಿಸಿತು.
Advertisement