
ಬೆಂಗಳೂರು: ಗಾರ್ಮೆಂಟ್ ಮತ್ತು ಜವಳಿ ವಲಯಕ್ಕೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳನ್ನು ಪರಿಷ್ಕರಿಸುವ ಸಾಧ್ಯತೆ ಇದೆ ಎಂದು ವರದಿಯಾದ ನಂತರ, ಕರ್ನಾಟಕ ಜವಳಿ ಮತ್ತು ಗಾರ್ಮೆಂಟ್ ಅಸೋಸಿಯೇಷನ್ (KHAGA) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದು, ಪ್ರಸ್ತಾವನೆಯನ್ನು ಕೈಬಿಡುವಂತೆ ಒತ್ತಾಯಿಸಿದೆ.
ದೇಶೀಯ ಉಡುಪು ಮತ್ತು ಜವಳಿ ಉದ್ಯಮವನ್ನು ಪ್ರತಿನಿಧಿಸುವ KHAGA, ಜಿಎಸ್‌ಟಿ ಪರಿಷ್ಕರಣೆಯು ಉತ್ಪಾದನೆ, ಬೆಲೆ ಮತ್ತು ಗ್ರಾಹಕರ ಬೇಡಿಕೆ ಮೇಲೆ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮ ಬೀರುತ್ತದೆ ಎಂದಿದೆ.
ಜಿಎಸ್‌ಟಿ ದರಗಳನ್ನು ಹೆಚ್ಚಿಸಿದರೆ ಕ್ಷೇತ್ರವು ಎದುರಿಸಬಹುದಾದ ಸಂಭಾವ್ಯ ಉದ್ಯೋಗ ನಷ್ಟದ ಬಗ್ಗೆ ಸಂಘವು ಕಳವಳ ವ್ಯಕ್ತಪಡಿಸಿದೆ. ಗಮನಾರ್ಹ ಸಂಖ್ಯೆಯ ಕೌಶಲ್ಯರಹಿತ ಮತ್ತು ಅರೆ-ಕುಶಲ ಕೆಲಸಗಾರರನ್ನು ನೇಮಿಸಿಕೊಳ್ಳುವ ಗಾರ್ಮೆಂಟ್ ಮತ್ತು ಜವಳಿ ಉದ್ಯಮವು ಈಗಾಗಲೇ ಆರ್ಥಿಕ ಒತ್ತಡದಲ್ಲಿದೆ. ತೆರಿಗೆ ಹೆಚ್ಚಳವು ಈ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ ಮತ್ತು ಅನೇಕ ಜನರ ಜೀವನೋಪಾಯವನ್ನು ಅಪಾಯಕ್ಕೆ ತಳ್ಳುತ್ತದೆ ಎಂದು KHAGA ಹೇಳಿದೆ.
ಜಿಎಸ್‌ಟಿ ದರಗಳನ್ನು ಪರಿಷ್ಕರಿಸುವುದು ಗ್ರಾಹಕರು ಮತ್ತು ವ್ಯವಹಾರಗಳನ್ನು ಅನೌಪಚಾರಿಕ ಮಾರುಕಟ್ಟೆಗಳತ್ತ ತಳ್ಳಬಹುದು ಎಂದು ಸಂಘವು ಎಚ್ಚರಿಸಿದೆ. ಈ ಬದಲಾವಣೆಯಿಂದಾಗಿ ಕಾನೂನುಬದ್ಧ ಚಿಲ್ಲರೆ ವ್ಯಾಪಾರಿಗಳಿಗೆ ಹಾನಿ ಮಾಡುತ್ತದೆ ಮತ್ತು ಅಕ್ರಮವಾಗಿ ನಡೆಸುವ ವ್ಯಾಪಾರಸ್ಥರಿಗೆ ಉಪಯೋಗವಾಗುತ್ತದೆ. 2 ದಶಲಕ್ಷಕ್ಕೂ ಹೆಚ್ಚು ನೇಕಾರರನ್ನು ನೇಮಿಸಿಕೊಂಡಿರುವ ಕೈಮಗ್ಗ ಉದ್ಯಮದ ಮೇಲೆಯೂ ಇದು ಗಂಭೀರ ಪರಿಣಾಮಗಳನ್ನು ಬೀರುತ್ತದೆ ಎಂದಿದೆ.
'ಹೆಚ್ಚಿನ ತೆರಿಗೆ ದರಗಳು ಕೈಮಗ್ಗ ಉತ್ಪನ್ನಗಳು ಗ್ರಾಹಕರಿಗೆ ಕೈಗೆಟುಕದಂತೆ ಮಾಡುತ್ತವೆ, ಸಾಂಪ್ರದಾಯಿಕ ಕರಕುಶಲಗಳನ್ನು ಬೆಂಬಲಿಸುವ ಸರ್ಕಾರದ ಪ್ರಯತ್ನಗಳ ಮೇಲೆ ಪರಿಣಾಮ ಬೀರುತ್ತದೆ. ಸುಮಾರು 1.2 ಮಿಲಿಯನ್ ಜನರನ್ನು ಬೆಂಬಲಿಸುವ ಉಣ್ಣೆ ಉದ್ಯಮವು ಚೀನಾದಿಂದ ಅಗ್ಗದ ಆಮದುಗಳಿಂದ ಈಗಾಗಲೇ ಹೆಣಗಾಡುತ್ತಿದೆ ಎಂದು ಅಸೋಸಿಯೇಷನ್ ಹೇಳಿದೆ.
'ಮದುವೆ ಮತ್ತು ಆಚರಣೆಗಳಿಗಾಗಿ ಹೆಚ್ಚಾಗಿ ಖರೀದಿಸುವ ಉಡುಪುಗಳನ್ನು ಐಷಾರಾಮಿ ತೆರಿಗೆ ಅಡಿಯಲ್ಲಿ ವರ್ಗೀಕರಿಸಿದರೆ, ಅನೇಕರಿಗೆ ಅವುಗಳು ಕೈಗೆಟುಕದಂತಾಗುತ್ತವೆ. ಇದು ಪ್ರತಿಯಾಗಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಹಬ್ಬದ ಸಮಯದಲ್ಲಿ ಉಡುಪುಗಳ ಬಳಕೆಯನ್ನು ಕಡಿಮೆ ಮಾಡುತ್ತದೆ. ಆರ್ಥಿಕತೆಯನ್ನು ಮತ್ತಷ್ಟು ನಿಧಾನಗೊಳಿಸುತ್ತದೆ' ಎಂದು KHAGA ಅಧ್ಯಕ್ಷ ಪ್ರಕಾಶ್ ಭೋಜಾನಿ ಹೇಳಿದರು.
Advertisement