
ಹುಬ್ಬಳ್ಳಿ: ಯುವಕನ ಬೆತ್ತಲೆಗೊಳಿಸಿದ ಗುಂಪೊಂದು ಮನಬಂದಂತೆ ಥಳಸಿರುವ ಘಟನೆಯೊಂದು ಟಿಪ್ಪುನಗರದ ಕಸಬಾ ಪೊಲೀಸ್ ಠಾಣೆ ಬಳಿ ಮಂಗಳವಾರ ಘಟನೆ ವರದಿಯಾಗಿದೆ.
ಮುಜಾಫರ್ ಕಲ್ಬುರ್ಗಿ (28) ಹಲ್ಲೆಗೊಳಗಾದ ಯುವಕ. ಪ್ರಕರಣ ಸಂಬಂಧ 8 ಮಂದಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಮೆಹಬೂಬ್ ಅಲಿ ತಾರಿಹಾಳ್ ಎಂಬಾತ ಕೆಲಸದ ನೆಪದಲ್ಲಿ ಯುವಕನ ಕರೆಸಿಕೊಂಡು ಅಹರಿಸಿದ್ದಾನೆ. ಬಳಿಕ ಹುಬ್ಬಳ್ಳಿ ನಗರದ ಹೊರವಲಯದಲ್ಲಿರುವ ವರೂರು ಗ್ರಾಮದ ಬಳಿಯ ದರ್ಗಾಕ್ಕೆ ಕರೆದೊಯ್ದಿದ್ದು, ಅಲ್ಲಿ ಬೆತ್ತಲೆಗೊಳಿಸಿ, ಮನಬಂದಂತೆ ಥಳಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮೆಹಬೂಬ್ ಜೊತೆಗೆ ಇನ್ನೂ 10 ಮಂದಿ ನನ್ನ ಮೇಲೆ ಹಲ್ಲೆ ನಡೆಸಿದರು. ಬಳಿಕ ಆಟೋರಿಕ್ಷಾದಲ್ಲಿ ಕಟ್ಟಿ ಹಾಕಿ ಹುಬ್ಬಳ್ಳಿಗೆ ಕರೆದೊಯ್ದು ಮೆರವಣಿಗೆ ಮಾಡಿದರು ಎಂದು ಯುವಕ ತಿಳಿಸಿದ್ದಾನೆ.
ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದೇನೆಂದು ಶಂಕಿಸಿ ನನ್ನ ಮೇಲೆ ಹಲ್ಲೆ ನಡೆಸಿದರು. ಯಾವುದೇ ಸಂಬಂಧವಿಲ್ಲ ಎಂದು ಮನವರಿಕೆ ಮಾಡಿಕೊಡಲು ಯತ್ನಿಸಿದರೂ ನನ್ನ ಮಾತನ್ನು ಕೇಳಲಿಲ್ಲ. ರಕ್ಷಣೆಗೆ ಬಂದ ತಾಯಿ ಮೇಲೂ ಹಲ್ಲೆ ನಡೆಸಿದ್ದಾರೆ. ತಾಯಿ ಕೂಡ ದಾಳಿಯಲ್ಲಿ ಗಾಯಗೊಂಡಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಹೇಳಿದ್ದಾನೆ.
ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹುಡುಕಾಟ ಆರಂಭಿಸಿದ್ದಾರೆ. ಅಕ್ರಮ ಸಂಬಂಧದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ತನಿಖಾಧಿಕಾರಿಯೊಬ್ಬರು ಹೇಳಿದ್ದಾರೆ.
Advertisement