ರಾಯಚೂರು: ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಪತಿ ಸಾವು; ಸಚಿವರಿಗೆ ಮಂಗಳ ಸೂತ್ರ ಕಳಿಸಿದ ಪತ್ನಿ!
ರಾಯಚೂರು: ಆತ್ಮಹತ್ಯೆಗೆ ಶರಣಾದ ವ್ಯಕ್ತಿಯೊಬ್ಬನ ಪತ್ನಿ ಗುರುವಾರ ಗೃಹ ಸಚಿವ ಜಿ ಪರಮೇಶ್ವರ ಅವರಿಗೆ ಮಂಗಳಸೂತ್ರ ಕಳುಹಿಸಿದ್ದು, ಪತಿಯ ಸಾವಿಗೆ ಕಾರಣವಾದ ಕಂಪನಿಯ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ಗಳ ಕಿರುಕುಳ ಹೆಚ್ಚಾಗುತ್ತಲೇ ಇದೆ. ಈ ಕಾರಣದಿಂದ ಇದೇ ಜನವರಿ 17 ರಂದು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಕಪಗಲ್ ಗ್ರಾಮದ ಶರಣಬಸವ ಎನ್ನುವ ವ್ಯಕ್ತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಘಟನೆ ತಡವಾಗಿ ಬೆಳಕಿಗೆ ಬಂದಿತ್ತು.
ಶರಣಬಸವನಿಗೆ ಸಾಲ ಕೊಟ್ಟಿರುವ ಮೈಕ್ರೋ ಫೈನಾನ್ಸ್ ಸಿಬ್ಬಂದಿ ನಿತ್ಯ ಟಾರ್ಚರ್ ಕೊಡುತ್ತಿದ್ದರಂತೆ. ಈ ಬಗ್ಗೆ ಗೊತ್ತಾದ ಬಳಿಕ ಇದೇ ಗ್ರಾಮದ ಹಲವರು ಕೂಡ ಫೈನಾನ್ಸ್ ಕಂಪನಿ ಕಣ್ತಪ್ಪಿಸಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.
ಇದರ ಬೆನ್ನಲ್ಲೇ ಈಗ ಮೃತ ಶರಣಬಸವನ ಕುಟುಂಬ ನ್ಯಾಯಕ್ಕಾಗಿ ಹೋರಾಟಕ್ಕೆ ಸಜ್ಜಾಗಿದೆ. ಶರಣಬಸವ ಡ್ರೈವಿಂಗ್ ಜೊತೆ ಕೂಲಿ ಕೆಲಸವನ್ನೂ ಮಾಡುತ್ತಿದ್ದರು. ಆದರೆ ಕೆಲ ಖಾಸಗಿ ಕಂಪನಿಗಳಿಂದ ಸುಮಾರು 6-8 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಇತ್ತೀಚೆಗೆ ಕೆಲ ಕಂತುಗಳು ಬಾಕಿ ಇದ್ದ ಹಿನ್ನೆಲೆ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗುತ್ತಂತೆ. ಇದೇ ಕಾರಣಕ್ಕೆ ಶರಣಬಸವ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಾದ ಬಳಿಕ ಈಗ ಮೃತನ ಕುಟುಂಬ ಇಂದು ಸ್ಥಳೀಯ ಹೋರಾಟಗಾರರ ಜೊತೆಗೆ ಒಗ್ಗೂಡಿ ಹೋರಾಟಕ್ಕಿಳಿದಿದ್ದಾರೆ. ಘಟನೆ ನೆನೆದು ಮೃತನ ಪತ್ನಿ ಕಣ್ಣೀರಿಟ್ಟಿದ್ದಾರೆ.
ಪತಿ ಶರಣಬಸವ ಸಾವಿನ ಬಳಿಕ ಪತ್ನಿ ಪಾರ್ವತಿ ಎಲ್ಲಾ ಕಾರ್ಯಗಳನ್ನ ಮುಗಿಸಿಕೊಂಡಿದ್ದು, ಈಗ ಆಕೆಯ ಮಾಂಗಲ್ಯ ಸರವನ್ನ ಗೃಹ ಸಚಿವರಿಗೆ ರವಾನಿಸಿದ್ದಾರೆ. ನನ್ನ ಪತಿ ಸಾಲ ಮಾಡಿದ್ದಕ್ಕೆ ಸಿಬ್ಬಂದಿ ಕಿರುಕುಳ ನೀಡಿದ್ದಾರೆ. ಅದರ ವಿರುದ್ಧ ಕ್ರಮವಾಗಬೇಕು ಅಂತ ಪೋಸ್ಟ್ ಮೂಲಕ ಗೃಸಚಿವರಿಗೆ ಮಾಂಗಲ್ಯ ಸರವನ್ನ ರವಾನೆ ಮಾಡಿದ್ದಾರೆ.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಪರಮೇಶ್ವರ್ ಮೈಕ್ರೋ ಫೈನಾನ್ಸ್‌ನಿಂದ ತೊಂದರೆ ಆಗುತ್ತಿದೆ ಎಂದು ರಾಜ್ಯಾದ್ಯಂತ ದೂರು ದಾಖಲಾಗಿದೆ. ಮೈಕ್ರೋ ಫೈನಾನ್ಸ್ ಸಂಬಂಧ ಈಗ ಇರುವ ನಿಯಮಗಳು ಅಷ್ಟು ಕಠಿಣವಾಗಿ ಇಲ್ಲ ಎಂಬುದು ನಮ್ಮ ಗಮನಕ್ಕೆ ಬಂದಿದೆ ಎಂದರು. ಬ್ಯಾಂಕ್ ನಿಯಮಗಳ ಪ್ರಕಾರ ಹಣ ರಿಕವರಿ ಮಾಡಲು ಕಾನೂನು ಇದೆ. ಅದೇ ರೀತಿ ಅವರ ರಕ್ಷಣೆ ಮಾಡಲು ಕಾನೂನು ಇದೆ. ಈಗ ಇರುವ ಕಾನೂನು ಸಾಕಾಗುತ್ತಿಲ್ಲ. ಕಠಿಣವಾಗಿ ಇಲ್ಲ ಅಂತ ನಮ್ಮ ಇಲಾಖೆಯಿಂದ ಅನೇಕ ವರದಿಗಳು ಬಂದಿವೆ. ಅದಕ್ಕಾಗಿ ಮುಂದಿನ ದಿನಗಳಲ್ಲಿ ಕಠಿಣ ಕಾನೂನು ಮಾಡೋ ಅಗತ್ಯವಿದೆ. ಸರ್ಕಾರ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಕಡಿವಾಣಕ್ಕೆ ಕಠಿಣ ಕಾನೂನು ತರುತ್ತದೆ ಎಂದು ತಿಳಿಸಿದರು.