
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಬಿಎಂ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಜಾರಿ ನಿರ್ದೇಶನಾಲಯದಿಂದ (ಇ.ಡಿ) ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಬಿಜೆಪಿ ಸೋಮವಾರ ಹೇಳಿದೆ.
ಮಂಗಳವಾರ ತನಿಖಾಧಿಕಾರಿ ಮುಂದೆ ವಿಚಾರಣೆಗೆ ಹಾಜರಾಗುವಂತೆ ಪಾರ್ವತಿ ಹಾಗೂ ಬೈರತಿ ಸುರೇಶ್ ಅವರಿಗೆ ಇ.ಡಿ ನೋಟಿಸ್ ನೀಡಿದೆ. ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಅವರ ಸೋದರ ಮಾವ ಮಲ್ಲಿಕಾರ್ಜುನ ಸ್ವಾಮಿ ಮತ್ತಿತರರು ಆರೋಪಿಗಳಾಗಿದ್ದಾರೆ.
ಮೈಸೂರಿನ ಕೆಸರೆ ಗ್ರಾಮದಲ್ಲಿ ಸ್ವಾಧೀನಪಡಿಸಿಕೊಂಡ ಪಾರ್ವತಿ ಅವರ ಮೂರು ಎಕರೆ 16 ಗುಂಟೆ ಭೂಮಿಗೆ ಬದಲಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಮೈಸೂರಿನ ಹೃದಯ ಭಾಗದಲ್ಲಿನ 14 ನಿವೇಶನಗಳನ್ನು ಪಡೆದ ಆರೋಪವಿದೆ. ಲೋಕಾಯುಕ್ತ ಪೊಲೀಸರಲ್ಲದೆ, ಜಾರಿ ನಿರ್ದೇಶನಾಲಯವೂ ಈ ಪ್ರಕರಣದಲ್ಲಿ ತನಿಖೆ ನಡೆಸುತ್ತಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು, ‘ಮುಖ್ಯಮಂತ್ರಿ ಪತ್ನಿ ಪಾರ್ವತಿ ಹಾಗೂ ಬೈರತಿ ಸುರೇಶ್ ಅವರು ತನಿಖಾ ಸಂಸ್ಥೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಹಾಗೂ ಇತರರಿಗೆ ಕ್ಲೀನ್ ಚಿಟ್ ನೀಡಿ ಲೋಕಾಯುಕ್ತ ಪೊಲೀಸರು ಹೈಕೋರ್ಟ್‌ಗೆ ಕ್ಲೋಸರ್ ರಿಪೋರ್ಟ್ ಸಲ್ಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ’ ಎಂದರು.
ಪ್ರಕರಣ ರಾಜಕೀಯ ಪ್ರೇರಿತ ಎಂಬ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹೇಳಿಕೆಯನ್ನು ಗಮನಿಸಿದ್ದೇನೆ. ಆದರೆ, ಹಾಗೆ ಹೇಳುವಾಗ ಶಿವಕುಮಾರ್ ಮುಖದಲ್ಲಿ ಮಂದಹಾಸ ಎದ್ದು ಕಾಣುತ್ತಿತ್ತು. ವಿಷಯ ಏನೇ ಆಗಿರಬಹುದು ಆದರೆ, ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದು ಭಾರಿ ಹಿನ್ನಡೆಯಾಗಿದೆ ಎಂದು ಹೇಳಿದರು.
ಪಾರ್ವತಿ ಅವರು ನಿವೇಶನಗಳನ್ನು ಹಿಂದಿರುಗಿಸುವಂತೆ ಮುಡಾ ಆಯುಕ್ತರಿಗೆ ಪತ್ರ ಬರೆದ ನಂತರ ಮುಖ್ಯಮಂತ್ರಿ ಅವರು ಮುಡಾ ಹಗರಣದಿಂದ ಹೊರಬರುತ್ತೇನೆ ಎಂದು ಭಾವಿಸಿದ್ದಾರೆ. ಆದರೆ, ಇ.ಡಿ ನೋಟಿಸ್ ನೀಡಿರುವುದರಿಂದ ಅವರಿಗೆ ನೋವಾಗಿದೆ ಎಂದರು.
Advertisement