ಮೈಕ್ರೋಫೈನಾನ್ಸ್ ಕಿರುಕುಳಕ್ಕೆ ಮಂಡ್ಯ, ಹಾಸನದಲ್ಲೂ ತಲಾ ಒಬ್ಬರು ಸಾವು: ಓರ್ವ ಮಹಿಳೆ ಸ್ಥಿತಿ ಗಂಭೀರ!
ಬೆಂಗಳೂರು: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ರಾಜ್ಯದಲ್ಲಿ ಮತ್ತಿಬ್ಬರು ಬಲಿಯಾಗಿದ್ದಾರೆ. ಮೃತರನ್ನು ಪ್ರೇಮಾ ಮತ್ತು ಹೇಮಂತ್ ಎಂದು ತಿಳಿದುಬಂದಿದೆ. ಮಳವಳ್ಳಿ ತಾಲೂಕಿನ ಕೊನ್ನಾಪುರ ಗ್ರಾಮದ ಪ್ರೇಮಾ ಎಂಬುವರು ಚನ್ನಪಟ್ಟಣದ ಉಜ್ಜೀವನ್ ಬ್ಯಾಂಕ್ನಲ್ಲಿ 6 ಲಕ್ಷ ರೂ. ಸಾಲ ಪಡೆದಿದ್ದರು. ಮೂರು ತಿಂಗಳ ಕಂತು ಕಟ್ಟದ ಹಿನ್ನೆಲೆ ವಾರದ ಹಿಂದೆಯಷ್ಟೇ ಪ್ರೇಮಾ ಮನೆ ಸೀಜ್ ಮಾಡಲಾಗಿತ್ತು. ಇದರಿಂದ ಮನನೊಂದು ಪ್ರೇಮಾ ಅವರು ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಪ್ರೇಮಾ ಮೃತಪಟ್ಟಿದ್ದಾರೆ.
ಮತ್ತೊಂದೆಡೆ ಹಾಸನ ಜಿಲ್ಲೆ ಆಲೂರು ತಾಲೂಕಿನ ಬಂಡಿತಿಮ್ಮನಹಳ್ಳಿಯಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳ ಆರೋಪ ಹಿನ್ನಲ್ಲೆ ರೈತ 52 ವರ್ಷದ ಹೇಮಂತ್ ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೇಮಂತ್ ಅವರು ಪತ್ನಿಯ ಹೆಸರಲ್ಲಿ ವಿವಿಧ ಸಂಘಟನೆಗಳಲ್ಲಿ 2 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಆದರೆ ಸಾಲಗಾರರ ಕಿರುಕುಳದಿಂದ ವಿಷ ಸೇವಿಸಿ ಹೇಮಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ತುಮಕೂರಿನಲ್ಲಿ ಕೂಡ ಮೈಕ್ರೋ ಫೈನಾನ್ಸ್ ಕಿರುಕುಳ ನಿಂತಿಲ್ಲ. ಸಿಬ್ಬಂದಿ ಕಿರುಕುಳಕ್ಕೆ 45 ವರ್ಷದ ಮಂಗಳಮ್ಮ ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಅಲ್ಲಾಳಸಂದ್ರ ಹನುಮಂತಪುರದಲ್ಲಿ ನಡೆದಿದೆ. ಸದ್ಯ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಂಗಳಮ್ಮ ಒಂದು ವರ್ಷದ ಹಿಂದೆ ಹೋಟೆಲ್ ಮಾಡಲೆಂದು ಗ್ರಾಮೀಣಾ ಕೂಟದಲ್ಲಿ 2 ಲಕ್ಷ ಸಾಲ, L&T ಫೈನಾನ್ಸ್ ನಲ್ಲಿ 70 ಸಾವಿರ ಹಾಗೂ ಆಶೀರ್ವಾದ ಫೈನಾನ್ಸ್ ನಲ್ಲಿ 80 ಸಾವಿರ ಸಾಲ ಪಡೆದಿದ್ದರಂತೆ. ಆದರೆ ಸಾಲ ತೀರಿಸೋದಕ್ಕಾಗಿ ಮಂಗಳಮ್ಮ, ಗಂಡ ಬಸವರಾಜು, ಮಗ ಪುನೀತ್ ಹರಸಾಹಸ ಪಡುತ್ತಿದ್ದರಂತೆ. ಆದ್ರೆ ಈಗಾಗಲೇ ಗ್ರಾಮೀಣ ಕೂಟದಲ್ಲಿ 40 ಕಂತು ಕಟ್ಟಿದ್ದಾರೆ. ಇನ್ನೂ 42 ಕಂತು ಹಣ ಬಾಕಿ ಉಳಿದಿತ್ತು. ಇದರಿಂದ ಸಿಬ್ಬಂದಿ ಕಿರುಕುಳ ನೀಡುತ್ತಿದ್ದರು. ಇದರಿಂದ ನೊಂದು ಮಂಗಮ್ಮ ಆತ್ಮಹತ್ಯೆಗೆ ಯತ್ನಿಸಿದ್ದಾರೆ.