
ಬೆಂಗಳೂರು: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಬೆಳಗಾವಿಯ ನಾಲ್ವರು ಮೃತಪಟ್ಟಿದ್ದು, ಸಂತ್ರಸ್ತರ ಮೃತದೇಹಗಳನ್ನು ಇಂದು ಸಂಜೆ ರಾಜ್ಯಕ್ಕೆ ತರಲಾಗುವುದು. ಈ ಸಂಬಂಧ ಹಿರಿಯ ಅಧಿಕಾರಿಗಳು ಸಮನ್ವಯ ಸಾಧಿಸುತ್ತಿದ್ದಾರೆ ಎಂದು ಸಚಿವ ಕೃಷ್ಣ ಬೈರೇಗೌಡ ಗುರುವಾರ ಹೇಳಿದ್ದಾರೆ.
'ಐಪಿಎಸ್ ಅಧಿಕಾರಿ ಹರಿರಾಮ್ ಶಂಕರ್ ಅವರು ಕುಂಭಮೇಳದಿಂದ ನಾಲ್ವರ ಪಾರ್ಥಿವ ಶರೀರವನ್ನು ರಾಜ್ಯಕ್ಕೆ ತರುವ ವಿಚಾರವಾಗಿ ಅಲ್ಲಿನ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಎರಡು ಆಂಬ್ಯುಲೆನ್ಸ್‌ಗಳಲ್ಲಿ ದೆಹಲಿಯತ್ತ ಮೃತದೇಹಗಳನ್ನು ಕೊಂಡೊಯ್ಯಲಾಗುತ್ತಿದೆ. ಬೆಳಗಾವಿಯ ವಿಶೇಷ ಡಿಸಿ ಹರ್ಷ ದೆಹಲಿಯತ್ತ ತೆರಳಿದ್ದು, ಸಂಜೆ ವೇಳೆಗೆ ಪಾರ್ಥಿವ ಶರೀರದೊಂದಿಗೆ ಬೆಳಗಾವಿ ತಲುಪಲಿದ್ದಾರೆ' ಎಂದು ಸುದ್ದಿಸಂಸ್ಥೆ ಎಎನ್‌ಐಗೆ ತಿಳಿಸಿದರು.
'ಪಾರ್ಥೀವ ಶರೀರ ಮತ್ತು ನಾಲ್ವರು ಕುಟುಂಬ ಸದಸ್ಯರು ಹಾಗೂ ಅಧಿಕಾರಿಗಳಿಗಾಗಿ ದೆಹಲಿಯಲ್ಲಿ ಮಧ್ಯಾಹ್ನ 3:20ಕ್ಕೆ ಇಂಡಿಗೋ ವಿಮಾನದ ವ್ಯವಸ್ಥೆ ಮಾಡಲಾಗಿದೆ. ಸದ್ಯಕ್ಕೆ, ಯಾವುದೇ ಇತರ ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿರುವ ಕುರಿತು ವರದಿಯಾಗಿಲ್ಲ. ಆದಾಗ್ಯೂ, ಯಾವುದೇ ಗಾಯಾಳುಗಳು ಇದ್ದರೆ ಪತ್ತೆ ಮಾಡಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರ್ಕಾರದ ನೋಡಲ್ ಅಧಿಕಾರಿ ಹರ್ಷಲ್ ಬೋಯಾರ್ ಅವರಿಗೆ ಸೂಚಿಸಲಾಗಿದೆ' ಎಂದು ಅವರು ಹೇಳಿದರು.
ಬೆಳಗಾವಿಯ ಕನಿಷ್ಠ ನಾಲ್ವರು ಭಕ್ತರು ಕಾಲ್ತುಳಿತದಲ್ಲಿ ಸಾವಿಗೀಡಾಗಿದ್ದಾರೆ ಎಂದು ಕರ್ನಾಟಕ ಪೊಲೀಸರು ಬುಧವಾರ ಸ್ಪಷ್ಟಪಡಿಸಿದ್ದಾರೆ. ಬುಧವಾರದ ಮುಂಜಾನೆ ಸಂಭವಿಸಿದ ದುರಂತದಲ್ಲಿ 30 ಮಂದಿ ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿದ್ದಾರೆ.
Advertisement