
ಮೈಸೂರು: ಮೈಕ್ರೊಫೈನಾನ್ಸ್ ಸಂಸ್ಥೆಗಳಿಗೆ ಹೆದರಿ ಯಾರೂ ಜೀವ ಕಳೆದುಕೊಳ್ಳಬೇಡಿ ಮತ್ತು ಅವರ ಪ್ರತಿನಿಧಿಗಳು ಕಿರುಕುಳ ನೀಡಿದರೆ ಅಂತಹ ಸಂಸ್ಥೆಗಳ ವಿರುದ್ಧ ದೂರು ದಾಖಲಿಸಿದರೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಕಿರುಕುಳ ನೀಡುವ ಸಂಸ್ಥೆಗಳ ವಿರುದ್ಧ ಪೊಲೀಸರಿಗೆ ದೂರು ಕೊಡಿ, ಸರ್ಕಾರ ನಿಮ್ಮೊಂದಿಗಿದೆ. ಮೈಕ್ರೋಫೈನಾನ್ಸ್ ಸಂಸ್ಥೆಗಳ ಅಕ್ರಮ ವಸೂಲಿ ಪದ್ಧತಿಯಿಂದ ಯಾರೂ ಆತ್ಮಹತ್ಯೆ ಮಾಡಿಕೊಳ್ಳಬಾರದು. ನೀವು ಯಾವುದೇ ರೀತಿಯ ಕಿರುಕುಳವನ್ನು ಎದುರಿಸಿದರೆ, ಕೂಡಲೇ ದೂರು ನೀಡಿ. ನಾವು ಕಾನೂನು ಕ್ರಮ ಕೈಗೊಳ್ಳುತ್ತೇವೆ' ಎಂದು ಹೇಳಿದರು.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿಯಮಗಳನ್ನು ಉಲ್ಲಂಘಿಸುವ, ಅಧಿಕ ಬಡ್ಡಿ ದರ ವಿಧಿಸುವ ಅಥವಾ ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುವ ಮೈಕ್ರೋಫೈನಾನ್ಸ್ ಸಂಸ್ಥೆಗಳ ವಿರುದ್ಧ ರಾಜ್ಯ ಸರ್ಕಾರ ಕಾನೂನು ಕ್ರಮ ಕೈಗೊಳ್ಳಲಿದೆ. ಈ ಸಂಸ್ಥೆಗಳನ್ನು ನಿಯಂತ್ರಿಸಲು ಶೀಘ್ರವೇ ನಿರ್ದೇಶನ ನೀಡಲಾಗುವುದು ಎಂದರು.
ಮೈಕ್ರೋಫೈನಾನ್ಸ್ ಸಂಸ್ಥೆಗಳಿಂದ ಜನರು ಎದುರಿಸುತ್ತಿರುವ ತೊಂದರೆ ಮತ್ತು ರಾಜ್ಯದಲ್ಲಿ ಗೂಂಡಾ ರಾಜ್ ಆಡಳಿತವಿದೆ ಎಂಬ ಬಿಜೆಪಿ ಆರೋಪಗಳಿಗೆ ಪ್ರತಿಕ್ರಿಯಿಸಿದ ಸಿಎಂ, ಜನರು ತಮಗೆ ಲಭ್ಯವಿರುವ ಮೂಲಗಳಿಂದ ಸಾಲ ತೆಗೆದುಕೊಳ್ಳುತ್ತಾರೆ. ಆದರೆ, ಖಾಸಗಿ ಹಣಕಾಸು ಸಂಸ್ಥೆಗಳು ಮತ್ತು ಲೇವಾದೇವಿಗಾರರು ಹೆಚ್ಚಿನ ಬಡ್ಡಿ ದರ ಹೇರುತ್ತಾರೆ ಮತ್ತು ಜನರನ್ನು ಬೆದರಿಸಲು ಗೂಂಡಾಗಳನ್ನು ಬಳಸುತ್ತಾರೆ ಎಂದು ದೂರಿದರು.
'ಮೈಕ್ರೋಫೈನಾನ್ಸ್ ಸಂಸ್ಥೆಗಳು ವಾರ್ಷಿಕ ಶೇ 28-30 ರಷ್ಟು ಬಡ್ಡಿ ದರವನ್ನು ವಿಧಿಸುತ್ತಿದ್ದು, ಇದರಿಂದ ಸಾಲಗಾರರು ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮೈಕ್ರೋಫೈನಾನ್ಸ್ ಸಂಸ್ಥೆಗಳು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಆರ್‌ಬಿಐ ಮಾರ್ಗಸೂಚಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುವುದರಿಂದ, ಅವುಗಳನ್ನು ನಿಯಂತ್ರಿಸಲು ಮತ್ತು ಸಾಲಗಾರರಿಗೆ ಕಿರುಕುಳ ನೀಡುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಶೀಘ್ರದಲ್ಲೇ ನಿರ್ದೇಶನ ನೀಡಲಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಮೈಕ್ರೊ ಫೈನಾನ್ಸ್ ಸಂಸ್ಥೆಗಳ ಕಿರುಕುಳ ತಪ್ಪಿಸಲು ಹಾಗೂ ಸಾಲಗಾರರ ಹಿತರಕ್ಷಣೆಗಾಗಿ ಸುಗ್ರೀವಾಜ್ಞೆ ಮೂಲಕ ಹೊಸ ಕಾನೂನು ಜಾರಿಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ನಿಯಮ ಮೀರಿದ ವ್ಯವಹಾರ ಮತ್ತು ಬಲವಂತದ ಸಾಲ ವಸೂಲಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ನಿರ್ಣಯ ಮಾಡಿದೆ.
ಸುತ್ತೂರು ಮಠಕ್ಕೆ ಭೇಟಿ
ಇದಕ್ಕೂ ಮುನ್ನ ಮೈಸೂರಿನ ಸುತ್ತೂರಿನಲ್ಲಿ ನಡೆದ ಶಿವರಾತ್ರಿ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಹದೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಭಾರತೀಯ ಸಂವಿಧಾನದಲ್ಲಿ ಅಡಕವಾಗಿರುವ ಬಸವಣ್ಣನವರ ಎಲ್ಲ ಆದರ್ಶಗಳನ್ನು ಸಮಾಜ ಗುರುತಿಸಬೇಕು. ಜಾತಿ, ಧರ್ಮ ಆಧಾರಿತ ತಾರತಮ್ಯ ಮತ್ತು ಮೂಢನಂಬಿಕೆಗಳನ್ನು ಹೋಗಲಾಡಿಸಬೇಕು ಎಂದು ಕರೆ ನೀಡಿದರು.
ಅಂಬೇಡ್ಕರ್ ಅವರು ಸಾಂವಿಧಾನಿಕ ಸಭೆಯ ಚರ್ಚೆಗಳ ಸಂದರ್ಭದಲ್ಲಿ ರಾಜಕೀಯ ಸ್ವಾತಂತ್ರ್ಯವೊಂದೇ ಸಾಕಾಗುವುದಿಲ್ಲ. ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯ ಸಮಾನವಾಗಿ ಅಗತ್ಯ ಎಂದು ಹೇಳಿದ್ದರು. ಆ ಮಾತು ಇಂದಿಗೂ ಸತ್ಯವಾಗಿದೆ. 850 ವರ್ಷಗಳ ಹಿಂದೆ ಬಸವಣ್ಣ ಅವರು, ‘ಯಾರು ಎಂದು ಕೇಳಬೇಡಿ, ಬದಲಿಗೆ ಅವರು ನಮ್ಮಲ್ಲಿ ಒಬ್ಬರು’ ಎಂದು ಹೇಳಿದ್ದರು. ಆದರೆ, ಇಂದಿಗೂ ಜಾತಿ ತಾರತಮ್ಯ ಮುಂದುವರಿದಿದೆ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ಸಿದ್ದರಾಮಯ್ಯ ಅವರು ಬಸವಣ್ಣನವರ ಬೋಧನೆಗಳ ಕಟ್ಟಾ ಅನುಯಾಯಿಯಾಗಿದ್ದು, ಅದಕ್ಕಾಗಿಯೇ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಹಾಕುವುದನ್ನು ಕಡ್ಡಾಯಗೊಳಿಸಿದ್ದಾರೆ.
'ಯಾವ ದೇವರೂ ಬಡವರು, ಹಸಿದವರು, ಚಿಂದಿ ಉಟ್ಟವರು ಎಂದು ಯಾರ ಹಣೆಬರಹವನ್ನೂ ಬರೆಯುವುದಿಲ್ಲ. ಆದರೂ, ವಿದ್ಯಾವಂತರೂ ಇಂತಹ ಕುರುಡು ನಂಬಿಕೆಗಳನ್ನು ಅನುಸರಿಸುತ್ತಾರೆ. ಜಾತಿ ಆಧಾರದ ಮೇಲೆ ವ್ಯಕ್ತಿಯ ಮೌಲ್ಯವನ್ನು ನಿರ್ಣಯಿಸುವುದನ್ನು ಸಂವಿಧಾನವು ವಿರೋಧಿಸುತ್ತದೆ ಮತ್ತು ಎಲ್ಲರಿಗೂ ಸಮಾನ ಅವಕಾಶಗಳು ಸಿಗಬೇಕು. ಅವಕಾಶ ಸಿಕ್ಕಾಗ ಪ್ರತಿಯೊಬ್ಬರಲ್ಲೂ ಪ್ರತಿಭೆ ಹೊರಹೊಮ್ಮುತ್ತದೆ. ಆದ್ದರಿಂದ ಎಲ್ಲರಿಗೂ ಶಿಕ್ಷಣ ಅತ್ಯಗತ್ಯ ಎಂದರು.
ಉಚಿತ ಅಕ್ಕಿ ವಿತರಣೆಯಿಂದ ಬಡವರು, ಕೂಲಿಕಾರ್ಮಿಕರು ಸೋಮಾರಿಗಳಾಗುತ್ತಾರೆ ಎಂದು ಟೀಕಿಸಿದ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ದುಡಿಮೆ ಮಾಡದಿರುವವರು ಮತ್ತು ದುಡಿಮೆಯಿಲ್ಲದೆಯೇ ಕೊಬ್ಬಿದವರು ಮಾತ್ರ ಇಂತಹ ಹೇಳಿಕೆ ನೀಡಲು ಸಾಧ್ಯ. ರಾಜ್ಯದ ಖಾತರಿ ಯೋಜನೆಗಳಿಂದ ಕರ್ನಾಟಕದ ಆರ್ಥಿಕತೆ ಕುಸಿಯುತ್ತದೆ ಎಂದು ಹೇಳುತ್ತಿದ್ದ ಅದೇ ಪಕ್ಷ ಇದೀಗ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಅದೇ ರೀತಿಯ ಯೋಜನೆಗಳನ್ನು ಘೋಷಿಸುತ್ತಿದೆ ಎಂದು ಲೇವಡಿ ಮಾಡಿದರು.
ಆರ್ಥಿಕ ಮತ್ತು ಸಾಮಾಜಿಕ ಚಲನಶೀಲತೆ ಇದ್ದಾಗ ಮಾತ್ರ ಜಾತಿ ಆಧಾರಿತ ತಾರತಮ್ಯ ಕೊನೆಗೊಳ್ಳುತ್ತದೆ. ನಮ್ಮ ಖಾತರಿ ಯೋಜನೆಗಳು ಪ್ರತಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಕ್ಕೆ ಆರ್ಥಿಕ ಸ್ಥಿರತೆಯನ್ನು ಒದಗಿಸುತ್ತವೆ ಮತ್ತು ಜನರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ನಾವು ರಾಜ್ಯದ ಆರ್ಥಿಕತೆಯನ್ನು ಬಲಪಡಿಸಿದ್ದೇವೆ ಎಂದು ಅವರು ಹೇಳಿದರು.
Advertisement