
ಬೆಂಗಳೂರು: ನಗರದ ಹೊರವಲಯದಲ್ಲಿರುವ 5678 ಎಕರೆ 32 ಗುಂಟೆ ಪ್ರದೇಶವನ್ನು ‘ಗ್ರೇಟರ್ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ’ ಎಂದು ಘೋಷಿಸಲು ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ.
ಈ ಮೂಲಕ ಸಂರಕ್ಷಣಾವಾದಿಗಳು, ಸಾರ್ವಜನಿಕರು ಮತ್ತು ರಾಜ್ಯ ಅರಣ್ಯ ಇಲಾಖೆ ಹೋರಾಟಕ್ಕೆ ಜಯ ಸಿಕ್ಕಿದೆ. ಗುರುವಾರ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟವು ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲ್ಲೂಕಿನಲ್ಲಿರುವ 5,678 ಎಕರೆ 32 ಗುಂಟೆ ಭೂಮಿಯನ್ನು (2298.18 ಹೆಕ್ಟೇರ್) ವನ್ಯಜೀವಿ (ರಕ್ಷಣೆ) ಕಾಯ್ದೆ, 1972 ರ ಸೆಕ್ಷನ್ 36 (ಎ) ಅಡಿಯಲ್ಲಿ 'ಗ್ರೇಟರ್ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು' (GHC) ಎಂದು ಘೋಷಿಸಲು ನಿರ್ಧರಿಸಿತು. ರಾಜಕೀಯ ವಿವಾದದಿಂದಾಗಿ ಸ್ಥಗಿತಗೊಂಡಿದ್ದ ದಶಕದ ಹಳೆಯ ಬೇಡಿಕೆಯನ್ನು ಸರ್ಕಾರ ಈಡೇರಿಸಿದೆ.
ಈ ಪ್ರದೇಶವು ಬೆಂಗಳೂರಿನ ಕೊನೆಯ 'ಸವನ್ನಾ' ಪರಿಸರ ವ್ಯವಸ್ಥೆಯಾಗಿತ್ತು. ಅಕ್ಟೋಬರ್ 2024 ರಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ವನ್ಯಜೀವಿ ಮಂಡಳಿಯು ಪ್ರಸ್ತಾವನೆಯನ್ನು ಅನುಮೋದಿಸಿತ್ತು, ಇದಕ್ಕೆ ಈಗ ಸಂಪುಟದ ಅನುಮೋದನೆ ಸಿಕ್ಕಿದೆ.
ಏತನ್ಮಧ್ಯೆ, ಹೊನ್ನಾವರ ಸಮುದ್ರ ತೀರದ 6 ಕಿಮೀ ಮತ್ತು ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಪ್ರದೇಶವನ್ನು ಒಳಗೊಂಡಂತೆ 5959.32 ಹೆಕ್ಟೇರ್ ಅನ್ನು 'ಅಪ್ಸರಕೊಂಡ-ಮುಗಳಿ ಸಮುದ್ರ ವನ್ಯಜೀವಿ ಅಭಯಾರಣ್ಯ' ಎಂದು ಘೋಷಿಸುವ ಪ್ರಸ್ತಾವನೆಯನ್ನು ಸಚಿವ ಸಂಪುಟ ಮುಂದೂಡಿದೆ.
ವಿಶ್ವ ಬ್ಯಾಂಕ್ ನೆರವಿನ ಕರ್ನಾಟಕ ಜಲ ಭದ್ರತೆ ಮತ್ತು ವಿಪತ್ತು ನಿರೋಧಕ ಕಾರ್ಯಕ್ರಮವನ್ನು 5 ಸಾವಿರ ಕೋಟಿ ರೂ.ಗಳ(ವಿಶ್ವಬ್ಯಾಂಕ್ ಸಾಲ-3500 ಕೋಟಿ, ರಾಜ್ಯ ಸರಕಾರ–1500 ಕೋಟಿ) ಅಂದಾಜು ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಸಚಿವ ಸಂಪುಟ ಅನುಮೋದಿಸಿದೆ.
ಹಾಸನ-ಹೊಳೆನರಸೀಪುರ ರೈಲು ಮಾರ್ಗದ ನಡುವಿನ ರೈಲ್ವೆ ಲೆವಲ್ ಕ್ರಾಸಿಂಗ್ ಗೇಟ್ ಸಂ: 3 ರ ಬದಲಿಗೆ ರಸ್ತೆ ಮೇಲ್ಸೇತುವೆ ಹಾಗೂ ಕೂಡು ರಸ್ತೆ ನಿರ್ಮಾಣ ಕಾಮಗಾರಿಯನ್ನು 83.72 ಕೋಟಿಗಳ ಪರಿಷ್ಕೃತ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
.ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕಡಣಿ ಗ್ರಾಮದ ಹತ್ತಿರ ಭೀಮಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾಮಗಾರಿಯನ್ನು 44.50 ಕೋಟಿಗಳ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಎಪಿಎಂಸಿಗಳು ಸಂಗ್ರಹಿಸಿದ ಮಾರುಕಟ್ಟೆ ಶುಲ್ಕ/ಬಳಕೆದಾರರ ಶುಲ್ಕವನ್ನು ಮರುಹಂಚಿಕೆ ಮಾಡಲು ನಿರ್ಧರಿಸಲಾಗಿದ್ದು, ಮಾರುಕಟ್ಟೆ ಅಭಿವೃದ್ಧಿ ಸಹಾಯ ನಿಧಿಗೆ ಮೂರು ಪೈಸೆ ಕೊಡುಗೆ ನೀಡಲು ನಿರ್ಧರಿಸಲಾಗಿದೆ.
ಹಿರಿಯ ಐಎಎಸ್ ಅಧಿಕಾರಿ ಎಲ್.ಕೆ. ಅತೀಕ್ ಅವರನ್ನು ನಿವೃತ್ತಿಯ ನಂತರ ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಲು ಪೂರ್ವಾನ್ವಯ ಅನುಮೋದನೆ ನೀಡಲಾಗಿದೆ.
ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಡಿ 19 ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಾಲೇಜು ಕಟ್ಟಡಗಳನ್ನು 304 ಕೋಟಿ ರೂ.ಗಳ ಅಂದಾಜು ಹಾಗೂ ಪ್ರಧಾನಮಂತ್ರಿ ಜನವಿಕಾಸ ಯೋಜನೆಯಡಿ 12 ವಸತಿ ಶಾಲೆ/ವಿದ್ಯಾರ್ಥಿನಿಲಯಗಳನ್ನು 191.19 ಕೋಟಿ ಅಂದಾಜು ಮೊತ್ತದಲ್ಲಿ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಆಪರೇಷನ್ ವೀರಪ್ಪನ್ ಗಾಗಿ ಎಸ್‌ಟಿಎಫ್‌ನಲ್ಲಿ ಸೇವೆ ಸಲ್ಲಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂವರು ವೈದ್ಯಕೀಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನಿವೇಶನಗಳನ್ನು ಹಂಚಿಕೆ ಮಾಡಲು ಸಂಪುಟ ಅನುಮೋದನೆ ನೀಡಿದೆ.
Advertisement