
ಮಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾನೂನು ಹೋರಾಟ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತರಾದ ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜು ಅವರಿಗೆ ಶಕ್ತಿ ತುಂಬುವ ಉದ್ದೇಶದಿಂದ ಪ್ರಾಣಿ ಬಲಿ ನೀಡಿರುವ ಘಟನೆ ಬೆಳಕಿಗೆ ಬಂದಿದೆ.
ಮಸಾಜ್ ಪಾರ್ಲರ್ ಮೇಲೆ ದಾಳಿ ಪ್ರಕರಣ ಸಂಬಂಧ ಬಂಧಿತರಾಗಿರುವ ರಾಮಸೇನೆಯ ನಾಯಕ ಪ್ರಸಾದ್ ಅತ್ತಾವರ್ ಅವರ ಫೋನ್ ಅನ್ನು ಮಂಗಳೂರು ನಗರ ಪೊಲೀಸರು ಪರಿಶೀಲಿಸಿದಾಗ ದೇವಸ್ಥಾನವೊಂದರಲ್ಲಿ ಕುರಿಗಳನ್ನು ಬಲಿಕೊಡುವ ದೃಶ್ಯ ಮತ್ತು ಸ್ನೇಹಮಯಿ ಕೃಷ್ಣ ಹಾಗೂ ಗಂಗರಾಜು ಅವರ ಫೋಟೋಗೆ ರಕ್ತಾಭಿಷೇಕ ಮಾಡುತ್ತಿರುವ ಮಾಟಮಂತ್ರದ ವಿಡಿಯೋಗಳು ಕಂಡುಬಂದಿವೆ.
ಇದೀಗ ವಿಡಿಯೋ ಆಧಾರದ ಮೇಲೆ ಮಂಗಳೂರು ಪೊಲೀಸರು ಅತ್ತಾವರ್ ವಿರುದ್ಧ ಕರ್ನಾಟಕ ಅಮಾನವೀಯ ದುಷ್ಟ ಪದ್ಧತಿಗಳ ತಡೆಗಟ್ಟುವಿಕೆ ಮತ್ತು ನಿರ್ಮೂಲನೆ ಹಾಗೂ ಮಾಟಮಂತ್ರ ತಡೆ ಕಾಯ್ದೆ, 2017 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒಳಗೊಂಡ ಮುಡಾ ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣ ಅವರಿಗೆ ಶಕ್ತಿ ತುಂಬಲು ಪ್ರಸಾದ್ ಈ ಮಾಟಮಂತ್ರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕೆಲವು ದಿನಗಳ ಹಿಂದೆ ಬಿಜೈನಲ್ಲಿ ಮಸಾಜ್ ಪಾರ್ಲರ್ ಮೇಲೆ ದಾಳಿ ಪ್ರಕರಣದಲ್ಲಿ ಪ್ರಸಾದ್ ಅತ್ತಾವರ್ ಅವರನ್ನು ಬಂಧಿಸಲಾಗಿದೆ. "ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಿದ ನಂತರ, ನಾವು ಸಿಇಎನ್ ಲ್ಯಾಬ್‌ನಲ್ಲಿ ಆರೋಪಿ ಪ್ರಸಾದ್ ಅವರ ಮೊಬೈಲ್ ಫೋನ್‌ಗಳನ್ನು ಪರಿಶೀಲಿಸಿದ್ದೇವೆ ಮತ್ತು ಸಂದೇಶಗಳನ್ನು ಪಡೆದುಕೊಂಡಿದ್ದೇವೆ. ಹಲವಾರು ಅನುಮಾನಾಸ್ಪದ ಮಾಹಿತಿಗಳು ಕಂಡುಬಂದಿವೆ. ಪ್ರಸಾದ್ ಅವರು ಪ್ರಾಣಿ ಬಲಿ ನೀಡಿದ್ದು ಮತ್ತು ರಕ್ತವನ್ನು ದೇವತೆಗಳಿಗೆ ಅರ್ಪಿಸುವ ವಿಡಿಯೋವನ್ನು ಅನಂತ್ ಭಟ್ ಅವರೊಂದಿಗೆ ಹಂಚಿಕೊಂಡಿದ್ದಾರೆ ಎಂದರು.
ಪ್ರಸಾದ್ ಅತ್ತಾವರ್, ಸ್ನೇಹಮಯಿ ಕೃಷ್ಣ, ಗಂಗರಾಜು, ಶ್ರೀನಿಧಿ ಮತ್ತು ಸುಮಾ ಆಚಾರ್ಯ ಸೇರಿದಂತೆ ಐದು ಜನರ ಹೆಸರುಗಳಿರುವ ಕಾಗದದ ತುಂಡು ಮತ್ತು ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜು ಅವರ ಫೋಟೋಗಳನ್ನು ದೇವರ ಮುಂದೆ ಇರಿಸಿ, ಬಲಿ ನೀಡಿದ ಪ್ರಾಣಿಗಳ ರಕ್ತವನ್ನು ಫೋಟೋಗಳಿಗೆ ಭಿಷೇಕ ಮಾಡಿರುವುದು ನಮಗೆ ಕಂಡುಬಂದಿದೆ ಎಂದು ಅಗರವಾಲ್ ತಿಳಿಸಿದ್ದಾರೆ.
ಅವರು ಎಲ್ಲಿ ಪ್ರಾಣಿ ಬಲಿ ನೀಡಿದ್ದಾರೆಂದು ನಮಗೆ ತಿಳಿದಿಲ್ಲ ಮತ್ತು ಪ್ರಸಾದ್ ಹಾಗೂ ಅನಂತ್ ಅವರನ್ನು ವಶಕ್ಕೆ ಪಡೆದ ನಂತರ ನಾವು ಹೆಚ್ಚಿನ ತನಿಖೆ ನಡೆಸುತ್ತೇವೆ. ನಗದು ಇರುವ ಚೀಲದ ಛಾಯಾಚಿತ್ರವೂ ನಮಗೆ ಕಂಡುಬಂದಿದೆ ಮತ್ತು ಲಭ್ಯವಿರುವ ಚಾಟ್‌ಗಳ ಪ್ರಕಾರ, ಪ್ರಸಾದ್ ಅದರಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ" ಎಂದು ಆಯುಕ್ತರು ಹೇಳಿದ್ದಾರೆ.
ಅನಂತ್ ಒಬ್ಬ ಅರ್ಚಕ ಎಂದು ಹೇಳಲಾಗುತ್ತಿದ್ದು, ಪ್ರಸಾದ್ ಮತ್ತು ಅನಂತ್ ನಡುವೆ ಹಣಕಾಸಿನ ವಹಿವಾಟು ನಡೆದಿತ್ತು ಎಂದು ಹೇಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement