
ಮಂಡ್ಯ: ಬೃಂದಾವನ ಉದ್ಯಾನವನ್ನು ಅತ್ಯಂತ ಹೆಚ್ಚು ಆಕರ್ಷಣೀಯಗೊಳಿಸುವುದು ನಮ್ಮ ಉದ್ದೇಶ. ಮೈಸೂರು ದಸರಾ ರೀತಿ ಅತ್ಯುತ್ತಮ ದೀಪಾಲಂಕಾರ ಮಾಡಲಾಗಿದೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, ಅತ್ಯುತ್ತಮ ಕಾರಂಜಿಗಳನ್ನು ತರಿಸಲಾಗಿದೆ. ವಿದೇಶಗಳಿಂದ ಅಲಂಕಾರಿಕ ಸಸ್ಯಗಳನ್ನು ತರಿಸಲಾಗಿದೆ. ನಮ್ಮ ಮುಖ್ಯಮಂತ್ರಿಗಳು ಇದನ್ನು ಅತ್ಯುತ್ತಮ ಪ್ರವಾಸಿ ಕೇಂದ್ರ ಮಾಡಬೇಕು ಎಂದು ಸಂಕಲ್ಪ ಮಾಡಿದ್ದಾರೆ. ಇದಕ್ಕೆ ಖಾಸಗಿಯವರು ಬಂಡವಾಳ ಹೂಡಬಹುದು ಎಂದು ಆಹ್ವಾನ ಮಾಡಿದ್ದೇವೆ" ಎಂದು ಹೇಳಿದರು.
"ರಾಜ್ಯದ ಅಣೆಕಟ್ಟುಗಳ ಗೇಟ್ ಗಳನ್ನು ದುರಸ್ತಿಗೊಳಿಸಲು ಈಗಾಗಲೇ ತಾಂತ್ರಿಕ ಸಮಿತಿಯನ್ನು ರಚನೆ ಮಾಡಿದ್ದೇವೆ. ಆ ಸಮಿತಿಯಿಂದ ವರದಿ ತೆಗೆದುಕೊಂಡು ಹಂತ, ಹಂತವಾಗಿ ರಾಜ್ಯದ ಅಣೆಕಟ್ಟುಗಳ ಗೇಟ್ ದುರಸ್ತಿಯನ್ನು ಮಾಡಬೇಕು ಎಂದು ಮುಂದಾಗಿದ್ದೇವೆ. ಕೃಷ್ಣ ಟ್ರಿಬ್ಯೂನಲ್ ಅವಾರ್ಡ್ ಗೆ ಒಮ್ಮೆ ಮಹಾರಾಷ್ಟ್ರದವರು ಅಡ್ಡಗಾಲು ಹಾಕಿದ್ದರು. ಈಗ ಆಂಧ್ರ ಪ್ರದೇಶದವರು ಇದನ್ನು ಮುಂದೂಡಿಸಿದ್ದಾರೆ" ಎಂದರು.
"ಬಜೆಟ್ ಮಂಡಿಸಿ ಒಂದು ತಿಂಗಳಾಗಿದೆ ತಾಳ್ಮೆಯಿಂದ ಇದ್ದರೆ ಅನುದಾನ ಬಂದೇ ಬರುತ್ತದೆ. ನಾವು ಕೊಟ್ಟ ಮಾತನ್ನು ತಪ್ಪುವವರಲ್ಲ. ಆರ್ಥಿಕ ಇಲಾಖೆಯವರು ಆರ್ಥಿಕ ಶಿಸ್ತಿಗಾಗಿ ಹಂತ, ಹಂತವಾಗಿ ಹಣ ಬಿಡುಗಡೆ ಮಾಡುತ್ತಾರೆ. ಯಡಿಯೂರಪ್ಪ, ಕುಮಾರಸ್ವಾಮಿ, ಬೊಮ್ಮಾಯಿ ಕಾಲದಲ್ಲಿ ಬಜೆಟ್ ಗಿಂತ ಹೆಚ್ಚು ಕಾಮಗಾರಿಗಳಿಗೆ ಅನುಮೋದನೆ ನೀಡಿದ್ದಾರೆ. ಅದಕ್ಕಾಗಿ ಗುತ್ತಿಗೆದಾರರು ಸ್ವಲ್ಪ ತಾಳ್ಮೆಯಿಂದ ವರ್ತನೆ ಮಾಡಬೇಕು. ನಮ್ಮನ್ನು ಟೀಕೆ ಮಾಡುವವರಿಗೆ ಮಾಧ್ಯಮಗಳು ಪ್ರಶ್ನೆ ಮಾಡಬೇಕು. ಮಂಡ್ಯ, ಮೈಸೂರು, ಬೆಂಗಳೂರು ಭಾಗಕ್ಕೆ ಅವರ ಕೊಡುಗೆ ಏನು ಎಂದು ಕೇಳಬೇಕು" ಎಂದು ಹೇಳಿದರು.
ತುಂಗಾಭದ್ರಾ ಅಣೆಕಟ್ಟಿನ ಗೇಟ್ ಒಡೆದು ಹೋದಾಗ ಪ್ರತಿ ಪಕ್ಷಗಳು ಇಲ್ಲ ಸಲ್ಲದ ಟೀಕೆ ಮಾಡಿದರು. ಇಡೀ ಡ್ಯಾಂ ಒಡೆದು ಹೋಗುತ್ತದೆ ಎಂದು ಆರೋಪ ಮಾಡಿದರು. ನಾವು ತಕ್ಷಣ ತೀರ್ಮಾನ ತೆಗೆದುಕೊಂಡು ಆ ಗೇಟ್ ಅನ್ನು ದುರಸ್ತಿಗೊಳಿಸಿ ರೈತರ ಎರಡನೇ ಬೆಳೆಗೂ ನೀರು ನೀಡಿದ ಇತಿಹಾಸ ಈ ಕಾಂಗ್ರೆಸ್ ಸರ್ಕಾರಕ್ಕಿದೆ. ಆ ಗೇಟ್ ದುರಸ್ತಿಗೆ ದುಡಿದ ಪ್ರತಿಯೊಬ್ಬ ಕಾರ್ಮಿಕನಿಗೂ ನಾನು ಹಾಗೂ ಸಿದ್ದರಾಮಯ್ಯ ಅವರು ಸನ್ಮಾನಿಸಿದೆವು. ಮುಖ್ಯ ಎಂಜಿನಿಯರ್ ಒಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದೆವು" ಎಂದು ಹೇಳಿದರು.
ತಮಿಳುನಾಡಿಗೆ ಹೆಚ್ಚುವರಿ ನೀರು ಹರಿದು ಹೋಗುತ್ತಿದೆ ಹಾಗೂ ಅವರ ಅಚ್ಚುಕಟ್ಟು ಪ್ರದೇಶ ಹೆಚ್ಚಳವಾಗುತ್ತಿದೆ ಎಂದು ಕೇಳಿದಾಗ, " ನಮ್ಮ ಅಚ್ಚುಕಟ್ಟು ಪ್ರದೇಶವೂ ಶೇ.6 ರಷ್ಟು ಹೆಚ್ಚಾಗಿದೆ. ಯೋಜನೆ ಜಾರಿಗೆ ನಾವು ಸನ್ನದ್ಧರಾಗಿದ್ದೇವೆ. ನ್ಯಾಯಾಲಯದಲ್ಲಿಯೂ ನಮಗೆ ನ್ಯಾಯ ಸಿಗುತ್ತದೆ. ಈಗಾಲೇ ಕನಕಪುರದಲ್ಲಿ ಮೇಕೆದಾಟು ಕಚೇರಿ ತೆರೆದಿದ್ದೇವೆ. ಭೂಸ್ವಾಧೀನ, ಮುಳುಗಡೆಯಾಗುವ ಅರಣ್ಯ ಭೂಮಿಗೆ ಪರ್ಯಾಯವಾಗಿ ಎಲ್ಲಿ ಭೂಮಿ ನೀಡಬೇಕು ಎಂದು ನಾವು ತಯಾರಾಗಿದ್ದೇವೆ" ಎಂದು ತಿಳಿಸಿದರು.
ಕಾವೇರಿ ಹಾಗೂ ಕಬಿನಿ ನೀರಾವರಿ ಪ್ರದೇಶದಲ್ಲಿ ಅಭಿವೃದ್ಧಿಯಾಗಿಲ್ಲ ಎನ್ನುವ ಪ್ರಶ್ನೆಗೆ, "ಮಂಡ್ಯ ಜಿಲ್ಲೆಗೆ ನೀರಾವರಿ ಇಲಾಖೆಯಿಂದ 1 ಸಾವಿರ ಕೋಟಿ ಅನುದಾನ ನೀಡಿದ್ದೇವೆ. ಕಾಲುವೆ ಸ್ವಚ್ಚತೆ, ನೀರಿನ ಸೋರಿಕೆ ತಡೆಗಟ್ಟುವಿಕೆ, ಕೊನೆ ಪ್ರದೇಶಕ್ಕೆ ನೀರು ತಲುಪಿಸುವುದು ಹೀಗೆ ಅನೇಕ ಕೆಲಸಗಳನ್ನು ಮಾಡಿದ್ದೇವೆ. ಕಬಿನಿ ಪ್ರದೇಶಕ್ಕೆ ರೂ.400 ಕೋಟಿ ನೀಡಿದ್ದೇವೆ" ಎಂದರು.
ಕಾವೇರಿ ಆರತಿ ಘೋಷಣೆ ಮಾಡಿ ಒಂದು ವರ್ಷವಾಗಿರುವ ಬಗ್ಗೆ ಕೇಳಿದಾಗ, "ಒಂದಷ್ಟು ರೈತರು ಆತಂಕದಲ್ಲಿದ್ದಾರೆ. ಅವರು ಆತಂಕಕ್ಕೆ ಒಳಗಾಗುವ ಪ್ರಮೇಯವಿಲ್ಲ. ಪೂಜೆ ಹಾಗೂ ಪ್ರಾರ್ಥನೆ ಮಾಡುವುದರಲ್ಲಿ ಏನಿದೆ? ಪೂಜೆಯನ್ನು ಚಿಕ್ಕದಾಗಿಯೂ ದೊಡ್ಡದಾಗಿಯೂ ಮಾಡಬಹುದು. ಸುಮಾರು 1500 ಜನಕ್ಕೆ ಪ್ರತ್ಯಕ್ಷವಾಗಿ ಉದ್ಯೋಗ ದೊರೆಯುತ್ತದೆ" ಎಂದರು.
ಕೆಆರ್ ಎಸ್, ಕಬಿನಿಗೆ ಒಟ್ಟಾಗಿ ಬಾಗಿನ ಅರ್ಪಣೆ ಮಾಡುವಿರಾ ಎಂದು ಕೇಳಿದಾಗ, "ಈಗ ಕೆಆರ್ ಎಸ್ ಜೂನ್ ತಿಂಗಳಲ್ಲಿ ತುಂಬಿ ಇತಿಹಾಸದ ಪುಟ ಸೇರಿದೆ" ಎಂದರು.
Advertisement