
ಬೆಂಗಳೂರು: ಕಳೆದ ತಿಂಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ಅವರ ಅಮಾನತು ರದ್ದುಗೊಳಿಸಿದ ಕೇಂದ್ರ ಆಡಳಿತ ನ್ಯಾಯಮಂಡಳಿ(ಸಿಎಟಿ) ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಬುಧವಾರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ.
ಜುಲೈ 1 ರಂದು ನ್ಯಾಯಮಂಡಳಿಯು ವಿಕಾಶ್ ಕುಮಾರ್ ಅವರ ಅಮಾನತು ಆದೇಶವನ್ನು ರದ್ದುಗೊಳಿಸಿತ್ತು. ಇದರಿಂದಾಗಿ ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿತ್ತು. ಹೀಗಾಗಿ ಇದೀಗ ಸಿಎಟಿ ಆದೇಶದ ವಿರುದ್ಧ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಇದಕ್ಕೆ ಪ್ರತಿಕ್ರಿಯೆಯಾಗಿ, ರಾಜ್ಯ ಸರ್ಕಾರ ಇಂದು ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದು, ಇಂದೇ ಅರ್ಜಿ ವಿಚಾರಣೆ ನಡೆಸಬೇಕು ಎಂದು ಕೋರಿದೆ. ಆದರೆ ಇಂದೇ ವಿಚಾರಣೆಯಾಗಬೇಕೆಂಬ ತರಾತುರಿ ಯಾಕೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಅವರಿದ್ದ ವಿಭಾಗೀಯ ಪೀಠ ಪ್ರಶ್ನಿಸಿತು.
ಇದಕ್ಕೆ ಉತ್ತರಿಸಿದ ಎಜಿ ಶಶಿಕಿರಣ್ ಶೆಟ್ಟಿ, ಸಿಎಟಿ ಆದೇಶದ ಕಾರಣ ಅಧಿಕಾರ ವಹಿಸಿಕೊಳ್ಳಲು ಅಧಿಕಾರಿ ಮುಂದಾಗಿದ್ದಾರೆ. ಹೀಗಾಗಿ ತುರ್ತು ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದರು. ಕೊನೆಯದಾಗಿ, ಗುರುವಾರ ವಿಚಾರಣೆ ನಡೆಸಲಾಗುವುದು ಎಂದು ವಿಭಾಗೀಯ ಪೀಠ ತಿಳಿಸಿದೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭವಿಸಿದ್ದ ಕಾಲ್ತುಳಿತದ ನಂತರ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿದ್ದ ಸರ್ಕಾರ, ಆಗಿನ ಪೊಲೀಸ್ ಆಯಕ್ತ ಬಿ.ದಯಾನಂದ, ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ವಿಕಾಸ್ ಕುಮಾರ್ ವಿಕಾಸ್ ಸೇರಿದಂತೆ ಹಲವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿತ್ತು. ಇದರ ವಿರುದ್ಧ ವಿಕಾಸ್ ಕುಮಾರ್ ಕೇಂದ್ರ ಆಡಳಿತಾತಕ ನ್ಯಾಯಮಂಡಳಿ ಮೊರೆ ಹೋಗಿದ್ದರು.
Advertisement