
ಬೆಂಗಳೂರು: ರಾಜ್ಯ ಸರ್ಕಾರ ಆರಂಭಿಸಿದ ಕಣ್ಣಿನ ಆರೈಕೆಗೆ ಸಂಬಂಧಿಸಿದ ಆಶಾ ಕಿರಣ ಯೋಜನೆಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ(WHO) ಮೆಚ್ಚುಗೆ ವ್ಯಕ್ತಪಡಿಸಿದ್ದು, ಯೋಜನೆಯ ಸಮಗ್ರ ಮೌಲ್ಯಮಾಪನ ಮತ್ತು ಜನ-ಕೇಂದ್ರಿತ ಕಣ್ಣಿನ ಆರೋಗ್ಯಕ್ಕಾಗಿ ಜಾಗತಿಕ ಮಾದರಿಯಾಗಿ ದಾಖಲಿಸುವ ಪ್ರಸ್ತಾಪ ಮಾಡಿದೆ.
ಈ ಸಂಬಂಧ WHOನ ಭಾರತದ ಪ್ರತಿನಿಧಿ ಡಾ. ರೊಡೆರಿಕೊ ಎಚ್ ಆಫ್ರಿನ್ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ್ ಗುಪ್ತಾ ಅವರಿಗೆ ಪತ್ರ ಬರೆದಿದ್ದು, ವಿಶ್ವ ಆರೋಗ್ಯ ಸಂಸ್ಥೆಯು ತನ್ನ ಪ್ರಮಾಣಿತ ಸಾಧನಗಳಾದ ಕಣ್ಣಿನ ಆರೈಕೆ ಪರಿಸ್ಥಿತಿ ವಿಶ್ಲೇಷಣೆ ಪರಿಕರ(ECSAT) ಮತ್ತು ಕಣ್ಣಿನ ಆರೈಕೆ ಸೂಚಕ ಮೆನು(ECIM) ಬಳಸಿಕೊಂಡು ಕಾರ್ಯಕ್ರಮದ ಸಮಗ್ರ ಮೌಲ್ಯಮಾಪನ ಮಾಡುತ್ತದೆ ಎಂದು ಹೇಳಿದ್ದಾರೆ.
ಯೋಜನೆಯ ಪ್ರಕ್ರಿಯೆಗಳು, ಫಲಿತಾಂಶಗಳು ಮತ್ತು ಉತ್ತಮ ಅಭ್ಯಾಸಗಳನ್ನು ನಿರ್ಣಯಿಸುವುದು ಮತ್ತು ಕಣ್ಣಿನ ಆರೈಕೆಯಲ್ಲಿ ಜಾಗತಿಕ ಜ್ಞಾನ ಹಂಚಿಕೆಗೆ ಕೊಡುಗೆ ನೀಡುವುದು ಇದರ ಉದ್ದೇಶವಾಗಿದೆ. ಈ ಮೌಲ್ಯಮಾಪನವನ್ನು WHO ರಾಜ್ಯಕ್ಕೆ ಯಾವುದೇ ವೆಚ್ಚವಿಲ್ಲದೆ ಸ್ವತಂತ್ರವಾಗಿ ನಡೆಸುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಮೌಲ್ಯಮಾಪನ ಪ್ರಕ್ರಿಯೆ ನಡೆಸಲು ನೋಡಲ್ ಅಧಿಕಾರಿಯನ್ನು ನಾಮನಿರ್ದೇಶನ ಮಾಡುವಂತೆ ವಿಶ್ವ ಆರೋಗ್ಯ ಸಂಸ್ಥೆ ರಾಜ್ಯ ಸರ್ಕಾರವನ್ನು ಕೇಳಿಕೊಂಡಿದೆ.
ಸಮಗ್ರ ಕಣ್ಣಿನ ಆರೈಕೆಗಾಗಿ ಆಶಾ ಕಿರಣ ಮಾದರಿ ಯೋಜನೆಯಾಗಿದ್ದು, ಮನೆ ಬಾಗಿಲಿನಲ್ಲಿ ಕಣ್ಣಿನ ಆರೈಕೆ ಎಂಬ ಆಶಾ ಕಿರಣ ಪರಿಕಲ್ಪನೆ ಅನುಕರಣೀಯವಾಗಿದೆ. ಈ ನವೀನ ಮಾದರಿಯು, ಕುರುಡುತನವನ್ನು ತೊಡೆದುಹಾಕುವ ಮತ್ತು ರಾಜ್ಯಾದ್ಯಂತ ಸಮಗ್ರ ಕಣ್ಣಿನ ಆರೈಕೆ ಸೇವೆಗಳಿಗೆ ಗಮನಾರ್ಹ ಪ್ರಗತಿಯನ್ನು ಪ್ರತಿನಿಧಿಸುತ್ತದೆ ಎಂದು ಅವರು ಶ್ಲಾಘಿಸಿದ್ದಾರೆ.
Advertisement