
ಬೆಳಗಾವಿ: ಜನರ ಆರೋಗ್ಯದ ಹಿತದೃಷ್ಟಿಯಿಂದ ‘ಗೃಹ ಆರೋಗ್ಯ’ ಮತ್ತು ‘ಆಶಾಕಿರಣ’ ಎಂಬ ಹೊಸ ಯೋಜನೆಗಳನ್ನು ಜಾರಿ ಮಾಡಲಾಗುತ್ತಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಬುಧವಾರ ಹೇಳಿದರು.
ಸುವರ್ಣ ವಿಧಾನಸೌಧದಲ್ಲಿ ಬುಧವಾರ ಬೆಳಗಾವಿ ವಿಭಾಗಮಟ್ಟದ ಅಧಿಕಾರಿಗಳ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವರ್ಷ ಬೆಳಗಾವಿ, ಗದಗ ಸೇರಿ ರಾಜ್ಯದ ಎಂಟು ಜಿಲ್ಲೆಗಳಲ್ಲಿ ‘ಗೃಹ ಆರೋಗ್ಯ’ ಜಾರಿ ಮಾಡಲಾಗುವುದು. ಮುಂದಿನ ವರ್ಷ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು. ಪ್ರತಿ ಜಿಲ್ಲೆಯ, ಪ್ರತಿ ಮನೆಯ, ಪ್ರತಿಯೊಬ್ಬ ಸದಸ್ಯರನ್ನೂ ಅವರ ಮನೆಗೆ ಹೋಗಿ ತಪಾಸಣೆ ಮಾಡಲಾಗುವುದು’ ಎಂದು ಹೇಳಿದರು.
ತಾಯಿ ಮತ್ತು ಮಕ್ಕಳ ಆರೋಗ್ಯ ಬಹಳ ಮುಖ್ಯ. ಈ ಹಿನ್ನೆಲೆಯಲ್ಲಿ ತಾಯಿ ಹಾಗೂ ಮಗುವಿನ ಆರೋಗ್ಯದ ಕಡೆಗೆ ವಿಶೇಷ ಗಮನ ನೀಡಬೇಕು ಎಂದು ಇಲಾಖೆಯ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ. ಮಕ್ಕಳ ಹಾಗೂ ತಾಯಿಯ ಮರಣದ ಅನುಪಾತವನ್ನು ಗಣನೀಯವಾಗಿ ಕಡಿಮೆ ಮಾಡಬೇಕಿದ್ದು, ಈ ನಿಟ್ಟಿನಲ್ಲಿ ವಿವಿಧ ಸುಧಾರಣಾ ಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
‘ಅಧಿಕ ರಕ್ತದೊತ್ತಡ, ಮಧುಮೇಹ, ಕಿಡ್ನಿ ವೈಫಲ್ಯ, ಕ್ಯಾನ್ಸರ್ ಮುಂತಾದ ರೋಗ ಬಂದಿದ್ದರೂ ಲಕ್ಷಣಗಳು ಕಾಣಿಸಲ್ಲ. ಶೀಘ್ರ ಪತ್ತೆ ಮಾಡಿದರೆ ಮುಂದಾಗುವ ಅಪಾಯ ತಪ್ಪಿಸಬಹುದು ಎಂಬುದು ಕಾರ್ಯಕ್ರಮದ ಉದ್ದೇಶ. ರೋಗ ಕಂಡು ಬಂದರೆ ಜನರ ಮನೆಗೇ ಔಷಧಿ ತಲುಪಿಸಲಾಗುವುದು. ಅಗತ್ಯ ಇದ್ದವರನ್ನು ಆಸ್ಪತ್ರೆಗೆ ದಾಖಲಿಸಲಾಗುವುದು’ ಎಂದರು.
ಎಲ್ಲಾ ಜಿಲ್ಲಾಸ್ಪತ್ರೆಗಳು ಮತ್ತು ನಿಮ್ಹಾನ್ಸ್ ಸಹಯೋಗದೊಂದಿಗೆ ಕರ್ನಾಟಕ ಬ್ರೇನ್ ಹೆಲ್ತ್ ಇನಿಸಿಯೇಟಿವ್ (ಕಭಿ) ಕಾರ್ಯಕ್ರಮ ಆರಂಭಿಸುತ್ತಿದ್ದೇವೆ. ಟೆಲಿ ಸಂದರ್ಶನ ಮೂಲಕ ಮಾನಸಿಕ ಅಸ್ವಸ್ತರು ತಜ್ಞರಿಂದ ಸೂಕ್ತ ಸಲಹೆ, ಮಾರ್ಗದರ್ಶನ, ಪರಿಹಾರ ಪಡೆಯಬಹುದಾಗಿದೆ. ಅಲ್ಲದೇ ಮುಂದಿನ ಚಿಕಿತ್ಸೆ ಕುರಿತು ಅವರಿಗೆ ತಿಳಿಸುತ್ತಾರೆ ಎಂದು ಹೇಳಿದರು.
ಈ ಕಾರ್ಯಕ್ರಮದಡಿಯಲ್ಲಿ ರಾಜ್ಯ ಎಂಟು ಜಿಲ್ಲೆಗಳಾದ ರಾಮನಗರ, ತುಮಕೂರು, ಬೆಳಗಾವಿ, ಗದಗ, ಮೈಸೂರು, ಚಿಕ್ಕಮಗಳೂರು, ಬಳ್ಳಾರಿ ಮತ್ತು ಯಾದಗಿರಿ ವ್ಯಾಪ್ತಿಯ ನಮ್ಮ ಆರೋಗ್ಯ ಕಾರ್ಯಕರ್ತರಿಗೆ ಬುದ್ಧಿಮಾಂದ್ಯತೆ ಪತ್ತೆ ಹಚ್ಚುವ ಕುರಿತು ತರಬೇತಿ ನೀಡಲಾಗುವುದು ಎಂದರು.
Advertisement