
ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ 'ಭ್ರಷ್ಟಾಚಾರ ದರ ಪಟ್ಟಿ' ಎಂಬ ಹೆಸರಿನಲ್ಲಿ ಜಾಹೀರಾತು ಪ್ರಕಟಿಸಿದ್ದ ಆರೋಪದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ರಾಜ್ಯ ಬಿಜೆಪಿ ಘಟಕ ಹೂಡಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣದ ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ತಡೆ ನೀಡಿದೆ.
ಪ್ರಕರಣದಲ್ಲಿ ಸಹ-ಆರೋಪಿಯಾಗಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೂ (ಕೆಪಿಸಿಸಿ) ನ್ಯಾಯಾಲಯವು ಮಧ್ಯಂತರ ಪರಿಹಾರ ನೀಡಿದೆ.
ಬಿಜೆಪಿ ವಿಧಾನ ಪರಿಷತ್ ಸದಸ್ಯ ಬಿಎಸ್ ಕೇಶವ ಪ್ರಸಾದ್ ಎಂಬುವವರು ಸಲ್ಲಿಸಿದ್ದ ಪ್ರಕರಣ ರದ್ದು ಕೋರಿ ಕೆಪಿಸಿಸಿ ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌ಆರ್ ಕೃಷ್ಣ ಕುಮಾರ್ ಅವರಿದ್ದ ಏಕ ಸದಸ್ಯಪೀಠ, ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದರು. ಮುಂದಿನ ವಿಚಾರಣೆಯನ್ನು ಜುಲೈ 29ಕ್ಕೆ ಮುಂದೂಡಿದ್ದು, ಮುಂದಿನ ಆದೇಶದವರೆಗೆ ಸದ್ಯದ ವಿಚಾರಣೆಗೆ ತಡೆ ನೀಡಿದ್ದಾರೆ.
2023ರ ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷವು 'ಭ್ರಷ್ಟಾಚಾರ ದರ ಪಟ್ಟಿ' ಎಂಬ ಶೀರ್ಷಿಕೆಯ ಅಡಿಯಲ್ಲಿ ಪ್ರಮುಖ ದಿನ ಪತ್ರಿಕೆಗಳ ಮುಖಪುಟದಲ್ಲಿ ವಿವಾದಾತ್ಮಕ ಜಾಹೀರಾತುಗಳನ್ನು ಪ್ರಕಟಿಸಿದ ನಂತರ ಬಿಜೆಪಿ ಮಾನನಷ್ಟ ಮೊಕದ್ದಮೆ ಹೂಡಿತ್ತು.
ಸರ್ಕಾರಿ ಇಲಾಖೆಗಳಲ್ಲಿ ನೇಮಕಾತಿಗಳು ಮತ್ತು ವರ್ಗಾವಣೆಗಳಿಗೆ ದರ ನಿಗದಿ ಮತ್ತು ಕಮಿಷನ್ ಪಡೆಯಲಾಗುತ್ತಿದೆ ಎಂದು ಜಾಹೀರಾತು ನೀಡಲಾಗಿದೆ. ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರವನ್ನು ಸಾಂಸ್ಥಿಕಗೊಳಿಸಲಾಗಿದೆ ಎಂದು ಈ ಜಾಹೀರಾತುಗಳು ಸುಳ್ಳು ಆರೋಪ ಮಾಡಿವೆ. ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾದ ಮತ್ತು ಆನ್‌ಲೈನ್‌ನಲ್ಲಿ ಪ್ರಚಾರ ಮಾಡಲಾದ ಈ ಜಾಹೀರಾತುಗಳಿಂದ ಪಕ್ಷದ ಸಾರ್ವಜನಿಕ ಇಮೇಜ್‌ಗೆ ಹಾನಿಯುಂಟಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಕಾಂಗ್ರೆಸ್‌ನ ಹೇಳಿಕೆಗಳು ಸಂಪೂರ್ಣವಾಗಿ ಕಟ್ಟುಕಥೆ ಮತ್ತು ಕಾಲ್ಪನಿಕ ಕಲ್ಪನೆಯಿಂದ ಹುಟ್ಟಿಕೊಂಡಿವೆ. ಕಾಂಗ್ರೆಸ್ ಪಕ್ಷವು ಆಗಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವನ್ನು 'ಟ್ರಬಲ್ ಎಂಜಿನ್ ಸರ್ಕಾರ' ಎಂದು ಉಲ್ಲೇಖಿಸಿದೆ. ನಿರ್ಣಾಯಕ ಚುನಾವಣೆಗಳಿಗೆ ಮುಂಚಿತವಾಗಿ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಮತ್ತು ಅಪಹಾಸ್ಯ ಮಾಡುವ ಉದ್ದೇಶಪೂರ್ವಕ ಪ್ರಯತ್ನವಾಗಿದೆ ಎಂದು ಬಿಜೆಪಿ ವಾದಿಸಿದೆ.
ಈ ಜಾಹೀರಾತು ನೀಡುವಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಆಗಿನ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಕಾರಣರಾಗಿದ್ದಾರೆ. ರಾಹುಲ್ ಗಾಂಧಿ ತಮ್ಮ 'ಎಕ್ಸ್' ಖಾತೆಯಲ್ಲಿ ಈ ಸುಳ್ಳು ಜಾಹೀರಾತನ್ನು ಹಂಚಿಕೊಳ್ಳುವ ಮೂಲಕ ಬಿಜೆಪಿಗೆ ಮಾನಹಾನಿ ಮಾಡಿದ್ದಾರೆ. ಹೀಗಾಗಿ, ಕಾಂಗ್ರೆಸ್, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮತ್ತು ರಾಹುಲ್ ಗಾಂಧಿ ವಿರುದ್ಧ ಐಪಿಸಿ ಸೆಕ್ಷನ್ 499 ಮತ್ತು 500ರಡಿ ಮಾನಹಾನಿ ಪ್ರಕರಣ ದಾಖಲಿಸಬೇಕು ಎಂದು ಬಿಜೆಪಿ ದೂರು ದಾಖಲಿಸಿತ್ತು.
ಈ ವರ್ಷದ ಜನವರಿಯಲ್ಲಿ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ವಿರುದ್ಧದ ವಿಚಾರಣೆಗೆ ಹೈಕೋರ್ಟ್ ತಡೆ ನೀಡಿತ್ತು.
ಶಿವಕುಮಾರ್ ಪರವಾಗಿ ಹಿರಿಯ ವಕೀಲ ಕೆ ಶಶಿ ಕಿರಣ್ ಶೆಟ್ಟಿ ಮತ್ತು ವಕೀಲ ಸೂರ್ಯ ಮುಕುಂದರಾಜ್ ವಾದ ಮಂಡಿಸಿದರು. ಕೆಪಿಸಿಸಿಯನ್ನು ವಕೀಲರಾದ ಎಸ್‌ಎ ಅಹಮದ್ ಮತ್ತು ಸಂಜಯ್ ಬಿ ಯಾದವ್ ಪ್ರತಿನಿಧಿಸಿದ್ದರು.
Advertisement