ಸರಣಿ ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣವಲ್ಲ: ತಜ್ಞರ ಸಮಿತಿಯಿಂದ ವರದಿ ಸಲ್ಲಿಕೆ

ಡಾ. ರವೀಂದ್ರನಾಥ್ ನೇತೃತ್ವದ ಸಮಿತಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಹಠಾತ್ ಹೃದಯಾಘಾತಕ್ಕೆ ಕೋವಿಡ್ -19 ಲಸಿಕೆ ಅಥವಾ ಹಿಂದಿನ ಸೋಂಕು ಕಾರಣವಲ್ಲ.
State study finds no link between Covid vaccine and heart attacks
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಹಠಾತ್ ಹೃದಯಾಘಾತದಿಂದ ಸರಣಿ ಸಾವುಗಳಿಂದ ಎಚ್ಚೆತ್ತ ರಾಜ್ಯ ಸರ್ಕಾರ, ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ. ರವೀಂದ್ರನಾಥ್ ನೇತೃತ್ವದಲ್ಲಿ ಅಧ್ಯಯನಕ್ಕಾಗಿ ತಾಂತ್ರಿಕ ಸಲಹಾ ಸಮಿತಿ ರಚಿಸಿತ್ತು.

ಡಾ. ರವೀಂದ್ರನಾಥ್ ನೇತೃತ್ವದ ಸಮಿತಿ ಜುಲೈ 2 ರಂದು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಹಠಾತ್ ಹೃದಯಾಘಾತಕ್ಕೆ ಕೋವಿಡ್ -19 ಲಸಿಕೆ ಅಥವಾ ಹಿಂದಿನ ಸೋಂಕು ಕಾರಣವಲ್ಲ. ಕೋವಿಡ್ ಲಸಿಕೆಗೂ ಈ ಹೃದಯಾಘಾತದ ಘಟನೆಗಳಿಗೂ ಯಾವುದೇ ಸಂಬಂಧ ಇಲ್ಲ ಅಧ್ಯಯನ ತಿಳಿಸಿದೆ.

ಈ ವರ್ಷದ ಏಪ್ರಿಲ್ ಮತ್ತು ಮೇ ನಡುವೆ ಹೃದ್ರೋಗ ಸಮಸ್ಯೆಯಿಂದ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದ 45 ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ 251 ರೋಗಿಗಳನ್ನು ಅಧ್ಯಯನಕ್ಕೆ ಒಳಪಡಿಸಿದ್ದು, ಎರಡು ತಿಂಗಳ ಪ್ರಾಯೋಗಿಕ ಅಧ್ಯಯನದ ನಂತರ ಈ ವರದಿ ಸಲ್ಲಿಸಲಾಗಿದೆ.

ಈ ಪೈಕಿ 19 ರೋಗಿಗಳಿಗೆ ಈ ಹಿಂದೆ ಕೋವಿಡ್ ಸೋಂಕು ತಗುಲಿದ್ದರೂ ಮತ್ತು ಬಹುತೇಕ ಎಲ್ಲರೂ (251 ರಲ್ಲಿ 249) ಕನಿಷ್ಠ ಒಂದು ಡೋಸ್ ಕೋವಿಡ್ ಲಸಿಕೆ ಪಡೆದಿದ್ದರೂ, ಈ ಅಂಶಗಳು ಹೃದಯಾಘಾತ ಅಥವಾ ಹಠಾತ್ ಹೃದಯಾಘಾತಕ್ಕೆ ನೇರವಾಗಿ ಕಾರಣವಾಗಿವೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ತಜ್ಞರ ಸಮಿತಿ ತೀರ್ಮಾನಿಸಿದೆ.

ಬೆಂಗಳೂರಿನಿಂದ ಶೇ. 47 ರಷ್ಟು ಬಂದಿದ್ದು, ತುಮಕೂರು ಶೇ. 8, ಮಂಡ್ಯ, ಕೋಲಾರ ಮತ್ತು ರಾಮನಗರ ತಲಾ ಶೇ. 5 ಮತ್ತು ಕರ್ನಾಟಕದ ಇತರ ಜಿಲ್ಲೆಗಳಿಂದ ಒಟ್ಟು ಶೇ. 22 ರಷ್ಟು ರೋಗಿಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ ಎಂದು ವರದಿ ತಿಳಿಸಿದೆ.

State study finds no link between Covid vaccine and heart attacks
ಕೋವಿಡ್ ಲಸಿಕೆಯಿಂದ ಹೃದಯಾಘಾತ: ಒಂದು ರಾಜ್ಯದ ಮುಖ್ಯಮಂತ್ರಿ ಬಾಯಲ್ಲಿ ಇಂತಹ ಹೇಳಿಕೆ ದುರದೃಷ್ಟಕರ; ಗೋಯಲ್ ವಾಗ್ದಾಳಿ, ಕ್ಷಮೆಯಾಚನೆಗೆ ಒತ್ತಾಯ!

30 ವರ್ಷಕ್ಕಿಂತ ಕಡಿಮೆ ವಯಸ್ಸಿನ 12 ಹೃದ್ರೋಗಿಗಳ ಬಗ್ಗೆ ಅಧ್ಯಯನ ನಡೆಸಲಾಗಿತ್ತು. 31 ರಿಂದ 40 ವಯಸ್ಸಿನ 66 ಹೃದ್ರೋಗಿಗಳ ಬಗ್ಗೆ ಅಧ್ಯಯನ ಮಾಡಲಾಗಿತ್ತು. ಜೊತೆಗೆ 41 ರಿಂದ 45 ವಯಸ್ಸಿನ 172 ಹೃದ್ರೋಗಿಗಳ ಬಗ್ಗೆ ಅಧ್ಯಯನ ಮಾಡಲಾಗಿತ್ತು.

ತಜ್ಞರ ವರದಿಯ ಪ್ರಕಾರ, ಒಟ್ಟು 251 ಮಂದಿಗೆ ಆರೋಗ್ಯ ತಪಾಸಣೆ ಮಾಡಲಾಗಿದೆ. 218 ಜನ ಪುರುಷರಿದ್ದು, 33 ಮಹಿಳೆಯರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. 251 ರೋಗಿಗಳಲ್ಲಿ 87 ಮಂದಿಯಲ್ಲಿ ಮಧುಮೇಹ ಕಂಡುಬಂದಿದೆ. 102 ರೋಗಿಗಳಿಗೆ ಬಿಪಿ, 35 ಕೊಲೆಸ್ಟ್ರಾಲ್ ಇದೆ. 40 ಮಂದಿಗೆ ಹೃದಯ ಸಂಬಂಧಿ ಕಾಯಿಲೆ ಇದೆ. 111 ಮಂದಿ ಧೂಮಪಾನಿಗಳಾಗಿದ್ದಾರೆ. 19 ಮಂದಿಗೆ ಕೊವಿಡ್ ಸೋಂಕೊನ ಹಿನ್ನೆಲೆ ಇತ್ತು. ಇನ್ನುಳಿದ 77 ಮಂದಿಗೆ ಯಾವುದೇ ರೋಗಗಳು ಇರಲಿಲ್ಲ.

ಸದ್ಯ ನ್ಯೂರಾಲಜಿಕಲ್ ಸಮಸ್ಯೆಯ ಅಧ್ಯಯನ ಬಾಕಿ ಇದ್ದು, ನಿಮ್ಹಾನ್ಸ್ ತಜ್ಞರು ವರದಿ ಕೊಟ್ಟ ಬಳಿಕ ಅಂತಿಮ ವರದಿ ಸಲ್ಲಿಕೆಯಾಗಲಿದೆ.

"ಸಂಶೋಧನೆಗಳು ಸ್ಪಷ್ಟವಾಗಿವೆ - ಕೋವಿಡ್ ಲಸಿಕೆ ಮತ್ತು ಹಠಾತ್ ಹೃದಯ ಸಾವುಗಳ ನಡುವೆ ಯಾವುದೇ ಸಂಬಂಧವಿಲ್ಲ. ವಾಸ್ತವವಾಗಿ, ಜಾಗತಿಕ ಅಧ್ಯಯನಗಳು ಲಸಿಕೆಗಳು ತೀವ್ರ ಹೃದಯ ಸಂಬಂಧಿ ಫಲಿತಾಂಶಗಳ ವಿರುದ್ಧ ರಕ್ಷಣಾತ್ಮಕವಾಗಿವೆ ಎಂದು ತೋರಿಸುತ್ತವೆ" ಎಂದು ವರದಿ ಗಮನಿಸಿದೆ

2019 ರ ಸಾಂಕ್ರಾಮಿಕ ಪೂರ್ವ ದತ್ತಾಂಶಕ್ಕೆ ಹೋಲಿಸಿದರೆ, 40 ವರ್ಷದೊಳಗಿನ ರೋಗಿಗಳಲ್ಲಿ ಜೀವನಶೈಲಿಗೆ ಸಂಬಂಧಿಸಿದ ಅಪಾಯಕಾರಿ ಅಂಶಗಳಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿದೆ. ಅಧಿಕ ರಕ್ತದೊತ್ತಡ ಶೇ. 13.9 ರಿಂದ 17.6 ಕ್ಕೆ ಹೆಚ್ಚಾಗಿದ್ದು, ಕೊಲೆಸ್ಟ್ರಾಲ್ ಹೊಂದಿರುವವರ ಸಂಖ್ಯೆ ಶೇ. 34.8 ರಿಂದ 44.1ಕ್ಕೆ ಏರಿದೆ. ಧೂಮಪಾನವು ಶೇ. 48.8 ರಿಂದ ಶೇ. 51ಕ್ಕೆ ಏರಿಕೆ ಕಂಡಿದೆ.

State study finds no link between Covid vaccine and heart attacks
ದೇಶದ ಯುವ ಜನರಲ್ಲಿ ಹೃದಯಾಘಾತ ಹೆಚ್ಚಳ: ಸ್ಟೆರಾಯ್ಡ್, ಹಾರ್ಮೋನ್ ಥೆರಪಿಯಿಂದ ಅಪಾಯ; ವೈದ್ಯರ ಎಚ್ಚರಿಕೆ ಏನು?

ಪ್ರಮುಖ ಅವಲೋಕನಗಳು

  • ಸುಮಾರು ಶೇ. 27 ರಷ್ಟು ರೋಗಿಗಳು ಯಾವುದೇ ಸಾಂಪ್ರದಾಯಿಕ ಅಪಾಯಕಾರಿ ಅಂಶಗಳನ್ನು ಹೊಂದಿರಲಿಲ್ಲ.

  • 251 ರೋಗಿಗಳಲ್ಲಿ 19 ರೋಗಿಗಳು ಹಿಂದೆ ಕೋವಿಡ್ ಸೋಂಕು ಹೊಂದಿದ್ದರು; 53 ಜನ ಒಂದು ಡೋಸ್ ಲಸಿಕೆ ಪಡೆದಿದ್ದರು, 180 ಜನ ಎರಡು ಡೋಸ್ ಲಸಿಕೆ ಪಡೆದರೆ, 17 ಜನ ಮೂರು ಡೋಸ್ ಪಡೆದಿದ್ದರು.

  • 2019 ಕ್ಕೆ ಹೋಲಿಸಿದರೆ, 40 ವರ್ಷದೊಳಗಿನವರಲ್ಲಿ ಮಧುಮೇಹ (13.9% ರಿಂದ 20.5%), ಅಧಿಕ ರಕ್ತದೊತ್ತಡ (13.9% ರಿಂದ 17.6%), ಮತ್ತು ಡಿಸ್ಲಿಪಿಡೆಮಿಯಾ(34.8% ರಿಂದ 44.1%) ಹೆಚ್ಚಾಗಿದೆ.

ಶಿಫಾರಸುಗಳು

  1. ಯುವಕರು ಹಠಾತ್ ಹೃದಯಾಘಾತದಿಂದ ಸಾವು ಪತ್ತೆಹಚ್ಚಲು ರಾಷ್ಟ್ರೀಯ ನೋಂದಣಿ ಮತ್ತು ಹೃದಯ ಕಣ್ಗಾವಲು ಕಾರ್ಯಕ್ರಮ ಆರಂಭಿಸಿ.

  2. ಈ ವಯಸ್ಸಿನ ಗುಂಪಿನಲ್ಲಿ ವಿವರಿಸಲಾಗದ ಸಾವುಗಳಿಗೆ ಶವಪರೀಕ್ಷೆ ಆಧಾರಿತ ವರದಿ ಕಡ್ಡಾಯಗೊಳಿಸಿ.

  3. ಆನುವಂಶಿಕ ಹೃದಯ ಕಾಯಿಲೆಗಳನ್ನು ಮೊದಲೇ ಪತ್ತೆಹಚ್ಚಲು ಶಾಲೆಗಳಲ್ಲಿ ನಿಯಮಿತ ಹೃದಯ ತಪಾಸಣೆ ಪ್ರಾರಂಭಿಸಿ.

  4. ಜೀವನಶೈಲಿಗೆ ಸಂಬಂಧಿಸಿದ ಹೃದಯ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸಲು ಸಾರ್ವಜನಿಕ ಆರೋಗ್ಯ ಅಭಿಯಾನಗಳನ್ನು ಕೈಗೊಳ್ಳಿ.

  5. "six S" ವಿಧಾನವನ್ನು ಉತ್ತೇಜಿಸಿ - ಹೆಚ್ಚಿದ ದೈಹಿಕ ಚಟುವಟಿಕೆ, ಧೂಮಪಾನವನ್ನು ನಿಲ್ಲಿಸುವುದು, ಸ್ಕ್ರೀನ್ ಟೈಮ್ ಕಡಿಮೆ ಮಾಡುವುದು, ಸಕ್ಕರೆ/ಉಪ್ಪು ಸೇವನೆ ನಿಯಂತ್ರಣ, ಸಾಕಷ್ಟು ನಿದ್ರೆ ಮತ್ತು ಒತ್ತಡ ನಿರ್ವಹಣೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com