News Headlines 06-07-25 | ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ; ಗಣಪತಿ ವಿಗ್ರಹ ಚರಂಡಿಗೆ ಎಸೆದು ಮುಸ್ಲಿಂ ಯುವಕರ ಪುಂಡಾಟ; PSI ಆತ್ಮಹ*ತ್ಯೆ; ರಾಜ್ಯದಲ್ಲಿ ಒಂದೇ ದಿನ 8 ಮಂದಿ ಹೃದಯಾಘಾತಕ್ಕೆ ಬಲಿ!

News Headlines 06-07-25 | ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ; ಗಣಪತಿ ವಿಗ್ರಹ ಚರಂಡಿಗೆ ಎಸೆದು ಮುಸ್ಲಿಂ ಯುವಕರ ಪುಂಡಾಟ; PSI ಆತ್ಮಹ*ತ್ಯೆ; ರಾಜ್ಯದಲ್ಲಿ ಒಂದೇ ದಿನ 8 ಮಂದಿ ಹೃದಯಾಘಾತಕ್ಕೆ ಬಲಿ!

1. ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ

ದೇಶದಲ್ಲಿ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಸಮುದಾಯಗಳು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಪರಿಶೀಲಿಸಿ, ಅವುಗಳಿಗೆ ಸೂಕ್ತ ಪರಿಹಾರಗಳನ್ನು ಒದಗಿಸಲು, ಕಾರ್ಯತಂತ್ರವನ್ನು ರೂಪಿಸಲು ರಚಿಸಲಾದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಇತರ ಹಿಂದುಳಿದ ವರ್ಗಗಳ ಸಲಹಾ ಮಂಡಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವ ವಹಿಸಲಿದ್ದು, ಮಂಡಳಿಯ ಮೊದಲ ಸಭೆ ಜುಲೈ 15ರಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯ ಆವರಣದಲ್ಲಿ ನಡೆಯಲಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಮಂಡಳಿಯ ರಚನೆಗೆ ಇತ್ತೀಚೆಗೆ ಅನುಮೋದನೆ ನೀಡಿದ್ದು, ಮಂಡಳಿಯಲ್ಲಿ ನಾಲ್ವರು ಮಾಜಿ ಮುಖ್ಯಮಂತ್ರಿಗಳು ಸೇರಿದಂತೆ ಒಟ್ಟು 24 ಸದಸ್ಯರಿದ್ದಾರೆ. ಸಲಹಾ ಮಂಡಳಿಗೆ ಅಧ್ಯಕ್ಷರಾಗಿ ಸಿದ್ದರಾಮಯ್ಯ ಅವರನ್ನೇ ನೇಮಿಸಿರುವುದಕ್ಕೂ ನಾನಾ ವ್ಯಾಖ್ಯಾನಗಳು ಕೇಳಿಬರುತ್ತಿವೆ. ಸಿದ್ದರಾಮಯ್ಯ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಿರುವುದು ಅವರ ನಿವೃತ್ತಿ ಸಮಯ ಹತ್ತಿರ ಬಂದಿದೆ ಎಂಬುದಕ್ಕೆ ಸಾಕ್ಷಿ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಪ್ರತಿಕ್ರಿಯಿಸಿದ್ದಾರೆ.

2. ಕೌಟುಂಬಿಕ ಕಹಲ: PSI ಆತ್ಮಹತ್ಯೆ

ಕೌಟುಂಬಿಕ ಕಹಲದಿಂದ ಬೇಸತ್ತ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನಾಗರಾಜಪ್ಪ ಲಾಡ್ಜ್ ವೊಂದರಲ್ಲಿ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ. ದಾವಣಗೆರೆ ನಗರದ ಬಡಾವಣೆ PSI ನಾಗರಾಜಪ್ಪ ಜು.1ರಂದು ಬೆಳಿಗ್ಗೆ 7 ಗಂಟೆಗೆ ತುಮಕೂರಿನ ದ್ವಾರಕಾ ಹೋಟೆಲ್‍ನ 4ನೇ ಮಹಡಿಯಲ್ಲಿ ರೂಮ್ ಬಾಡಿಗೆ ಪಡೆದಿದ್ದರು. ರೂಮ್‍ಗೆ ತೆರಳಿದ್ದಾಗಿನಿಂದ ಅವರು ಹೊರಗೆ ಬಂದಿರಲಿಲ್ಲ. ಲಾಡ್ಜ್ ಸಿಬ್ಬಂದಿ ಕರೆ ಮಾಡಿದ್ರೂ ಅವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಲಾಡ್ಜ್‌ನಲ್ಲಿ ದುರ್ವಾಸನೆ ಬಂದಿದ್ದು ಬಾಗಿಲು ತೆರೆದು ನೋಡಿದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ರೂಮ್ ನಲ್ಲಿ 2 ಪುಟಗಳ ಡೆತ್ ನೋಟ್ ಸಿಕ್ಕಿದ್ದು ನನ್ನ ಸಾವಿಗೆ ನಾನೇ ಕಾರಣ. ಕೌಟುಂಬಿಕ ಕಲಹಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದಾರೆ.

3. ಗಣಪತಿ ವಿಗ್ರಹ ಚರಂಡಿಗೆ ಎಸೆದು ಮುಸ್ಲಿಂ ಯುವಕರ ಪುಂಡಾಟ

ಶಿವಮೊಗ್ಗದ ರಾಗಿಗುಡ್ಡದಲ್ಲಿನ ನಾಗರ ಕಟ್ಟೆಯ ಮೇಲಿದ್ದ ಗಣಪತಿ ಹಾಗೂ ಶೇಷನಾಗ ವಿಗ್ರಹಗಳನ್ನು ವಿರೂಪಗೊಳಿಸಿ ಕಾಲಿನಿಂದ ಒದ್ದು ಚರಂಡಿಗೆ ಎಸೆದು ದಾಷ್ಟ್ಯತನ ಮೆರೆದಿದ್ದಾರೆ. ರಾಗಿಗುಡ್ಡದ ಬಂಗಾರಪ್ಪ ಬಡಾವಣೆಯ ಮುಖ್ಯರಸ್ತೆಯಲ್ಲಿ ಇತ್ತೀಚೆಗೆ ಪ್ರತಿಷ್ಠಾಪನೆ ಮಾಡಿದ್ದ ಗಣಪತಿ, ಶೇಷ ನಾಗ ವಿಗ್ರಹಕ್ಕೆ, ನಾಗರ ಕಲ್ಲನ್ನು ಚರಂಡಿಗೆ ಎಸೆದಿರುವ ಆರೋಪ ಕೇಳಿಬಂದಿದೆ. ಮುಸ್ಲಿಂ ಯುವಕರು ಈ ದುಷ್ಕೃತ್ಯ ನಡೆದಿದ್ದು ಈ ಘಟನೆ ಹಿಂದೂ ಮುಖಂಡರು ಕೆರಳುವಂತೆ ಮಾಡಿತ್ತು. ಅಲ್ಲದೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ರೆಹಮತ್ ವುಲ್ಲಾ ಹಾಗೂ ಸದ್ದಾಂನನ್ನು ಪೊಲೀಸರು ಬಂಧಿಸಿದ್ದಾರೆ.

4. ರಾಜ್ಯದಲ್ಲಿ ಒಂದೇ ದಿನ 8 ಮಂದಿ ಹೃದಯಾಘಾತಕ್ಕೆ ಬಲಿ

ರಾಜ್ಯದಲ್ಲಿ ಹೃದಯಾಘತದಿಂದ ಸಾವಿಗೀಡಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇಂದು ಒಂದೇ ದಿನ ಕರ್ನಾಟಕದಲ್ಲಿ ಹೃದಯಾಘಾತದಿಂದ ಎಂಟು ಮಂದಿ ಮೃತಪಟ್ಟಿದ್ದಾರೆ. ಹಾಸನ ಮತ್ತು ಚಿಕ್ಕಮಗಳೂರಿನಲ್ಲಿ ಇಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇನ್ನು, ಯಾದಗಿರಿ, ಹುಬ್ಬಳ್ಳಿ, ಚಾಮರಾಜನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಒಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಹಾಸನದಲ್ಲಿ ರಂಗನಾಥ್, ಆನಂದ್, ಚಿಕ್ಕಮಗಳೂರಿನಲ್ಲಿ ಮೀನಾಕ್ಷಿ ಮತ್ತು ಸುಮಿತ್ರೆಗೌಡ, ಚಾಮರಾಜನಗರದ ಶಿವಕುಮಾರ್‌, ಚಿಕ್ಕಬಳ್ಳಾಪುರದಲ್ಲಿ ಯೋಧ ಗಂಗಾಧರಪ್ಪ, ಯಾದಗಿರಿಯ ಹಳ್ಳೆಪ್ಪ ಪೂಜಾರಿ ಮೃತ ದುರ್ದೈವಿಗಳು.

5. ಬಸ್ ಡಿಕ್ಕಿ ಕೊಲ್ಲಾಪುರ ದೇವಿ ದರ್ಶನ ಪಡೆದು ವಾಪಸ್ಸಾಗುತ್ತಿದ್ದ ಮೂವರು ಸಾವು

KSRTC ಬಸ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಳಗಾವಿ ಅಥಣಿ ತಾಲೂಕಿನ ಮುರಗುಂಡಿ ಬಳಿ ನಡೆದಿದೆ. ಕಲಬುರಗಿ ಜಿಲ್ಲೆಯ ಅಫ್ಜಲಪುರ್ ಮೂಲದ ಗಿರೀಶ್​ ಬಳ್ಳೋರಗಿ, ರಾಹುಲ್, ಸಂಗು ಅಮರಗೊಂಡ ಮೃತ ದುರ್ದೈವಿಗಳು. ಅಘಾತದಲ್ಲಿ ಗಂಭೀರವಾಗಿ ಗಾಯಗೊಂಡ ರಾಧಿಕಾ ಎಂಬುವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಲ್ಲಾಪುರ ಮಹಾಲಕ್ಷ್ಮಿ ದೇವಿ ದರ್ಶನ ಪಡೆದು ವಾಪಸ್​ ಬರುವಾಗ ಅಪಘಾತ ಸಂಭವಿಸಿದೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com