
ಬೆಂಗಳೂರು: ನೀವು ತುಂಬಾ ಪ್ರಭಾವಿಯಾಗಿದ್ದೀರಿ, ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಷನ್ ಲಿಮಿಟೆಡ್‌ನಿಂದ (ಬಿಆರ್‌ಸಿಎಲ್) ಬಿಡುಗಡೆ ಮಾಡಿಸಿಕೊಳ್ಳಲು ನಿಮಗೆ ಸಾಧ್ಯವಾಗುವುದಿಲ್ಲೇ ಎಂದು ಸಂಸದ ತೇಜಸ್ವಿ ಸೂರ್ಯ ಅವರನ್ನು ಹೈಕೋರ್ಟ್ ಸೋಮವಾರ ಪ್ರಶ್ನಿಸಿದೆ.
ಮದ್ರಾಸ್ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ತಾರಿಣಿ ಅವರ ನೇತೃತ್ವದ ಮೆಟ್ರೊ ರೈಲು ದರ ನಿಗದಿ ಸಮಿತಿ ಸಲ್ಲಿಸಿರುವ ವರದಿಯನ್ನು ಸಾರ್ವಜನಿಕಗೊಳಿಸುವಂತೆ ಕೋರಿ ಬಿಜೆಪಿ ಸಂಸದ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ಸುನೀಲ್ ದತ್ ಯಾದವ್ ಅವರ ಏಕಸದಸ್ಯ ಪೀಠವು ಸೋಮವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ವಾದ ಮಂಡಿಸಿದ ತೇಜಸ್ವಿ ಸೂರ್ಯ ಅವರ ಪರ ವಕೀಲ ಅನಿರುದ್ಧ ಎ.ಕುಲಕರ್ಣಿ ಅವರು, ವರದಿ ಬಹಿರಂಗಗೊಳಿಸುವಂತೆ ಪತ್ರ ಬರೆದಿದ್ದು, ಸಂಬಂಧಿತ ಬಿಎಂಆರ್‌ಸಿಎಲ್ ಅಧಿಕಾರಿಯನ್ನು ಭೇಟಿ ಮಾಡಲಾಗಿದೆ, ಆದರೆ, ಅವರು ಪ್ರತಿಕ್ರಿಯಿಸುತ್ತಿಲ್ಲ. ರಾಜ್ಯ ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದೇವೆ ಎಂದು ಬಿಎಂಆರ್‌ಸಿಎಲ್ ಉತ್ತರ ನೀಡುತ್ತಿದೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ನೀವು ತುಂಬಾ ಪ್ರಭಾವಿಯಾಗಿದ್ದೀರಿ, ಬಿಆರ್‌ಸಿಎಲ್‌ಗೆ ಆ ವರದಿ ಬಿಡುಗಡೆ ಮಾಡುವಂತೆ ಮಾಡಲಾವುದಿಲ್ಲವೇ? ಎಂದು ಪ್ರಶ್ನಿಸಿತು.
ಇದಕ್ಕೆ ಪ್ರತಿಕ್ರಿಯಿಸಿದ ತೇಜಸ್ವಿ ಪರ ವಕೀಲರು, ಹೆಚ್ಚೆಂದರೆ ನಾವು ಬಿಎಂಆರ್‌ಸಿಎಲ್‌ಗೆ ಪತ್ರ ಬರೆಯಬಹುದು. ಸಾರ್ವಜನಿಕರು ಬಿಎಂಆರ್‌ಸಿಎಲ್‌ಗೆ ವರದಿ ಬಹಿರಂಗಪಡಿಸಲು ಕೇಳುತ್ತಿದ್ದಾರೆ. ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರನ್ನು ನೇರವಾಗಿ ತೇಜಸ್ವಿ ಸೂರ್ಯ ಭೇಟಿ ಮಾಡಿದ್ದಾರೆ. ಆದರೆ, ಅವರು ಪ್ರತಿಕ್ರಿಯಿಸುತ್ತಿಲ್ಲ. ರಾಜ್ಯ ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದೇವೆ ಎಂದು ಬಿಎಂಆರ್‌ಸಿಎಲ್ ಹೇಳುತ್ತಿದೆ. ಆದರೆ, ಕಾಯಿದೆಯಲ್ಲಿ ಬಿಎಂಆರ್‌ಸಿಎಲ್‌ಗೆ ಯಾವುದೇ ವಿನಾಯಿತಿಯಲ್ಲ ಎಂದು ತಿಳಿಸಿದರು.
ಸಾರ್ವಜನಿಕ ಆಡಳಿತದಲ್ಲಿ ಪಾರದರ್ಶಕತೆ ಮತ್ತು ನಿರ್ಧಾರ ಕೈಗೊಳ್ಳುವ ನಿಟ್ಟಿನಲ್ಲಿ ದರ ನಿಗದಿಗೆ ಸಂಬಂಧಿಸಿದ ವರದಿಯನ್ನು ಈ ಹಿಂದೆ ದೆಹಲಿ, ಮುಂಬೈ ಮತ್ತು ಹೈದರಾಬಾದ್ ಮೆಟ್ರೊ ರೈಲು ನಿಗಮಗಳು ಸಾರ್ವಜನಿಕಗೊಳಿಸಿದ್ದವು. ಈ ನೆಲೆಯಲ್ಲಿ ಸ್ವೇಚ್ಛೆಯಿಂದ ನಡೆದುಕೊಳ್ಳುವುದನ್ನು ಬಿಟ್ಟು ಬಿಎಂಆರ್‌ಸಿಎಲ್ ವರದಿ ಬಹಿರಂಗಗೊಳಿಸಬೇಕು ಎಂದು ಮನವಿ ಮಾಡಿದರು.
ವಾದ ಆಲಿಸಿದ ನ್ಯಾಯಪೀಠ ಬಳಿಕ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ ಜಾರಿಗೊಳಿಸಿ, ವಿಚಾರಣೆಯನ್ನು ಎರಡುವಾರ ಮುಂದೂಡಿತು.
Advertisement