
ಕೊಪ್ಪಳ: ನಾನು ಯಾವ ದೇವಸ್ಥಾನಕ್ಕೂ ಹಣ ನೀಡೋದಿಲ್ಲ. ದೇವಸ್ಥಾನದಲ್ಲಿ ಗಂಟೆ ಹೊಡೆದರೆ ಏನು ಪ್ರಯೋಜನ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಶ್ನಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟ ಗ್ರಾಮದಲ್ಲಿ ಬಾಲಕಿಯರ ಪ್ರೌಢಶಾಲೆಯನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟನೆ ಮಾಡಿದ ಅವರು, ಬಿಜೆಪಿ ಅವರು ಹಿಂದುತ್ವ, ಹಿಂದುತ್ವ ಎಂದು ಮಾತನಾಡುತ್ತಾರೆ. ಅವರಿಗೇನು ಗೊತ್ತು ಹಿಂದುತ್ವದ ಬದನೆಕಾಯಿ. ಹಿಂದುತ್ವ ಅವರಿಗೇನು ಗೊತ್ತು. ದೇವಸ್ಥಾನಗಳನ್ನು ಅಭಿವೃದ್ಧಿ ಮಾಡಲು ಆಗುತ್ತಿರಲಿಲ್ಲ.
ಈ ಹಿಂದೆ ಬಂಗಾರಪ್ಪ ಅವರು ಆರಾಧನಾ ಕಾರ್ಯಕ್ರಮದ ಮೂಲಕ ದೇವಸ್ಥಾನಗಳಿಗೆ ಹಣ ನೀಡಿದರು. ಅಲ್ಲಿ ಜಾತಿ ನೋಡಲಿಲ್ಲ. ಅಜೀಂ ಪ್ರೇಮ್‌ಜಿ ಅವರು ಯಾವ ಜಾತಿಯವರು. ಅವರು ಶಿಕ್ಷಣ ಕ್ಷೇತ್ರಕ್ಕೆ ಹಣ ನೀಡಿದ್ದಾರೆ. ಅವರು ಯಾರೂ ಜಾತಿ ಮಾಡಿಲ್ಲ, ಎಲ್ಲ ಮಕ್ಕಳಿಗೂ ಮೊಟ್ಟೆ, ಬಾಳೆ ಹಣ್ಣು ಕೊಡಲು ಒಪ್ಪಿ ಹಣ ನೀಡಿದ್ದಾರೆ. ಅಂಥ ಪುಣ್ಯಾತ್ಮರು ನಮ್ಮ ರಾಜ್ಯದಲ್ಲಿ ಇರುವುದು ಪುಣ್ಯ ಎಂದು ಹೇಳಿದ್ದಾರೆ.
ಸರ್ಕಾರಿ ಶಾಲೆಯಲ್ಲಿಯೇ ನಮ್ಮ ತಂದೆ ಬಂಗಾರಪ್ಪ, ಸಿಎಂ ಸಿದ್ದರಾಮಯ್ಯ ಕಲಿತಿದ್ದರು. ಸಿದ್ದರಾಮಯ್ಯ ನೇರವಾಗಿ 4ನೇ ತರಗತಿಗೆ ಹೋಗಿದ್ದರು. ಅಲ್ಲಿಯವರೆಗೆ ಅವರು ದನ ಕಾಯುತ್ತಿದ್ದರೋ ಏನು ಮಾಡುತ್ತಿದ್ದರೋ ಗೊತ್ತಿಲ್ಲ. ನನ್ನ ಕ್ಷೇತ್ರದಲ್ಲಿ ಜನರು ದೇವಸ್ಥಾನಕ್ಕೆ ಹಣ ಕೇಳಲು ಬರುತ್ತಾರೆ. ನಾನು ಯಾವುದೇ ದೇವಸ್ಥಾನಕ್ಕೆ ಹಣ ಕೊಡುವುದಿಲ್ಲ. ದೇವಸ್ಥಾನದ ಗಂಟೆ ಹೊಡೆದರೆ ಏನಾಗುತ್ತೋ ಗೊತ್ತಿಲ್ಲ. ಆದರೆ ಅದಕ್ಕಿಂತ ಹೆಚ್ಚು ಶಾಲೆಯ ಗಂಟೆ ಹೊಡೆಯಬೇಕು ಎಂದು ಹೇಳಿದ್ದಾರೆ.
Advertisement