
ಶಿವಮೊಗ್ಗ: ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಬೆಂಗಳೂರಿನ ಕಿದ್ವಾಯಿ ಸ್ಮಾರಕ ಆಂಕೊಲಾಜಿ ಸಂಸ್ಥೆಯ ಬಳಿ ಮಾರಕ ಕ್ಯಾನ್ಸರ್ ನಿಂದ ಬಳಲುತ್ತಿರುವ ಮಕ್ಕಳಿಗಾಗಿ ವಿಶೇಷ ವಸತಿ ಶಾಲೆಯನ್ನು ಪ್ರಾರಂಭಿಸಲು ಸಜ್ಜಾಗಿದೆ.
ಈ ಶಾಲೆ ಜುಲೈನಲ್ಲಿ ಕಾರ್ಯನಿರ್ವಹಣೆ ಆರಂಭವಾಗುವ ನಿರೀಕ್ಷೆಯಿದೆ. ಈ ಉಪಕ್ರಮವು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರ ಕನಸಿನ ಕೂಸು. ಇದು ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗುವ ಮಕ್ಕಳಿಗಾಗಿ ಪ್ರತ್ಯೇಕವಾಗಿ ರಾಜ್ಯದಲ್ಲಿ ಸರ್ಕಾರ ನಡೆಸುವ ಮೊದಲ ವಸತಿ ಶಾಲೆಯಾಗಿದೆ.
ಆರ್ಥಿಕವಾಗಿ ಹಿಂದುಳಿದ ವರ್ಗಗಳ ಕ್ಯಾನ್ಸರ್ ಪೀಡಿತ ಮಕ್ಕಳ ನೋವನ್ನು ಕಂಡ ನಂತರ ಈ ಕಲ್ಪನೆ ನನಗೆ ಬಂದಿತು ಎಂದು ಮಧು ಬಂಗಾರಪ್ಪ ಟಿಎನ್‌ಐಇಗೆ ತಿಳಿಸಿದರು. ಈ ಉಪಕ್ರಮವು ಶಾಲಾ ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡು ಎರಡು ವರ್ಷಗಳನ್ನು ಪೂರೈಸುವ ಸಂದರ್ಭದಲ್ಲಿ ಆರಂಭವಾಗಲಿದೆ ಎಂದು ಅವರು ಹೇಳಿದರು.
ಈ ಕಾಯಿಲೆಯಿಂದಾಗಿ ಮಕ್ಕಳು ಶಾಲೆಯಿಂದ ಹೊರಗುಳಿಯುವ ಸಾಧ್ಯತೆಯಿದೆ. ಕ್ಯಾನ್ಸರ್ ಗುಣಪಡಿಸಬಹುದಾದ ಕಾರಣ, ಚಿಕಿತ್ಸೆ ಮತ್ತು ಶಿಕ್ಷಣ ಮಕ್ಕಳಿಗೆ ಏಕಕಾಲದಲ್ಲಿ ಮುಂದುವರಿಯುವುದನ್ನು ನಾವು ಖಚಿತಪಡಿಸಿಕೊಳ್ಳಲು ಬಯಸುತ್ತೇವೆ. ಆದ್ದರಿಂದ, ಸಂಬಂಧಿತ ಅಂಕಿಅಂಶಗಳನ್ನು ಸಂಗ್ರಹಿಸುವ ಮತ್ತು ಕಾರ್ಯಸಾಧ್ಯವಾದ ಯೋಜನೆಯನ್ನು ಸಲ್ಲಿಸುವ ಜವಾಬ್ದಾರಿಯನ್ನು ನಾನು ಒಂದು ಸರ್ಕಾರೇತರ ಸಂಸ್ಥೆಗೆ ವಹಿಸಿದೆ.
ಪ್ರಾಥಮಿಕ ಮಾಹಿತಿಯ ಆಧಾರದ ಮೇಲೆ, ರಾಜ್ಯದಲ್ಲಿ ಸುಮಾರು 3,500 ಮಕ್ಕಳು ಪ್ರಸ್ತುತ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಶಾಲೆಯು ತನ್ನ ಮೊದಲ ಹಂತದಲ್ಲಿ 1 ರಿಂದ 10 ನೇ ತರಗತಿಯವರೆಗೆ ಸುಮಾರು 1,500 ವಿದ್ಯಾರ್ಥಿಗಳನ್ನು ದಾಖಲಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.
ರಾಜ್ಯದ ಯಾವುದೇ ಭಾಗದ ವಿದ್ಯಾರ್ಥಿಗಳು ಈ ಶಾಲೆಗೆ ದಾಖಲಾಗಬಹುದು ಎಂದು ಮಧು ಬಂಗಾರಪ್ಪ ಹೇಳಿದರು. ಈ ರೋಗಕ್ಕೆ ಉಚಿತ ಚಿಕಿತ್ಸೆಯ ಜೊತೆಗೆ, ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣವನ್ನು ಪಡೆಯುತ್ತಾರೆ. ಮಕ್ಕಳ ಒಟ್ಟಾರೆ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಎನ್ ಜಿಒ ಶಿಕ್ಷಕರಿಗೆ ತರಬೇತಿ ನೀಡುತ್ತದೆ. ಇಲಾಖೆಯು ಶಾಲೆಗೆ ಹಣವನ್ನು ಒದಗಿಸುತ್ತದೆ. ನಾನು ಮುಖ್ಯಮಂತ್ರಿಯಿಂದ ಹೆಚ್ಚುವರಿ ಅನುದಾನವನ್ನು ಸಹ ಪಡೆಯುತ್ತೇನೆ. ಶಾಲಾ ಕಟ್ಟಡದ ನಿರ್ಮಾಣವು ಜೂನ್ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದರು.
ಶಾಲಾ ಆವರಣದಲ್ಲಿ ಪೋಷಕರು ಉಳಿಯಲು ಸೌಲಭ್ಯಗಳನ್ನು ಸಹ ನೀಡಲಾಗುವುದು. ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಅವರ ಪೋಷಕರ ಆರೈಕೆಯ ಅಗತ್ಯವಿದೆ. ಆದ್ದರಿಂದ, ಅವರಿಗೆ ವಸತಿ ಸೌಕರ್ಯಗಳನ್ನು ಸಹ ಒದಗಿಸಲಾಗುವುದು ಎಂದು ಅವರು ಹೇಳಿದರು.
ಚಿಕಿತ್ಸೆ ಅಗತ್ಯವಿದ್ದಾಗ, ಮಕ್ಕಳನ್ನು ವಾಹನದ ಮೂಲಕ ಆಸ್ಪತ್ರೆಗೆ ಸಾಗಿಸಲಾಗುವುದು. ಚಿಕಿತ್ಸೆ ಪೂರ್ಣಗೊಂಡ ನಂತರ ಮತ್ತು ರೋಗ ಗುಣಮುಖವಾದ ನಂತರ, ವಿದ್ಯಾರ್ಥಿಗಳು ಅದೇ ಶಾಲೆಯಲ್ಲಿ ತಮ್ಮ ಶಿಕ್ಷಣವನ್ನು ಮುಂದುವರಿಸಬಹುದು ಅಥವಾ ಅವರ ಹಿಂದಿನ ಶಾಲೆಗಳಿಗೆ ಹೋಗಬಹುದು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
Advertisement