
ಬೆಂಗಳೂರು: ಲಷ್ಕರೆ ತಯ್ಬಾ (LeT) ಉಗ್ರ ಚಟುವಟಿಕೆಗಳಿಗೆ ನೆರವು ನೀಡುತ್ತಿದ್ದ ಆರೋಪ ಸಂಬಂಧ ಪರಪ್ಪನ ಅಗ್ರಹಾರ ಜೈಲಿನ ಮನೋವೈದ್ಯ, ಸಹಾಯಕ ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ ಮೂವರು ಶಂಕಿತ ಉಗ್ರರನ್ನು ರಾಷ್ಟ್ರೀಯ ತನಿಖಾ ದಳ (NIA) ನಿನ್ನೆ ಮಂಗಳವಾರ ಬಂಧಿಸಿದೆ.
ಪರಪ್ಪನ ಅಗ್ರಹಾರ ಜೈಲಿನ ಮನೋವೈದ್ಯ ಡಾ. ನಾಗರಾಜ್, ಎಎಸ್‌ಐ ಚಾನ್‌ಪಾಷಾ, ಕೋಲಾರದ ಅನೀಸಾ ಫಾತೀಮಾ ಬಂಧಿತರು. ಆರೋಪಿ ಅನಿಸಾ, ತಲೆಮರೆಸಿಕೊಂಡಿರುವ ಉಗ್ರ ಜುನೈದ್ ಅಹಮ್ಮದ್‌ನ ತಾಯಿ.
ಈ ಮೂವರು ಶಂಕಿತರು ಜೈಲಿನಲ್ಲಿರುವ ಎಲ್‌ಇಟಿ ಉಗ್ರ ಟಿ.ನಾಸೀರ್‌ನ ಉಗ್ರ ಚಟುವಟಿಕೆಗಳಿಗೆ ಸಹಕಾರ ನೀಡುತ್ತಿದ್ದರು ಎಂಬುದಕ್ಕೆ ಸಾಕಷ್ಟು ಪುರಾವೆಗಳು ಸಿಕ್ಕಿವೆ. ಕೋಲಾರ ಹಾಗೂ ಬೆಂಗಳೂರು ಸೇರಿದಂತೆ ಐದು ಸ್ಥಳಗಳಲ್ಲಿ ನಡೆಸಿದ ಶೋಧ ಕಾರ್ಯಾಚರಣೆ ವೇಳೆ ಉಗ್ರ ಚಟುವಟಿಕೆಗಳಿಗೆ ಸಂಬಂಧಿಸಿದ ಹಣ, ಚಿನ್ನಾಭರಣ, ಎರಡು ವಾಕಿಟಾಕಿ, ಡಿಜಿಟಲ್ ಪರಿಕರಗಳು ಸಿಕ್ಕಿವೆ ಎಂದು ಎನ್‌ಐಎ ತಿಳಿಸಿದೆ.
ಕೆಲ ವರ್ಷಗಳಿಂದ ಜೈಲಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೈದ್ಯ ಡಾ.ನಾಗರಾಜ್, ಉಗ್ರ ನಾಸೀರ್ ಸೇರಿ ಇತರರಿಗೆ ಕಳ್ಳ ಮಾರ್ಗದ ಮೂಲಕ ಮೊಬೈಲ್ ತಲುಪಿಸುತ್ತಿದ್ದರು. ಈ ಕೃತ್ಯಕ್ಕಾಗಿ ಪವಿತ್ರಾ ಎಂಬಾಕೆ ಸಹಾಯ ಮಾಡುತ್ತಿದ್ದರು. ಸಶಸ್ತ್ರ ಮೀಸಲು ಪಡೆಯ ಎಎಸ್‌ಐ ಚಾನ್ ಪಾಷಾ, 2022ರಿಂದ ಉಗ್ರ ನಾಸೀರ್‌ಗೆ ಮಾಹಿತಿ ರವಾನಿಸುವುದು, ಬೇರೆ ಕೋರ್ಟ್‌ಗಳಿಗೆ ಕರೆದುಕೊಂಡು ಹೋದಾಗ ಸಹಕಾರ ನೀಡುವುದು, ಎಲ್‌ಇಟಿ ಸಂಘಟನೆ ಬಲಪಡಿಸಲು ದೇಣಿಗೆ ಸಂಗ್ರಹಿಸಲು ನೆರವಾಗುತ್ತಿದ್ದರು.
ಬೆಂಗಳೂರು ಸೇರಿ ವಿವಿಧೆಡೆ ಎಲ್‌ಇಟಿ ಸಂಘಟನೆ ಬಲಪಡಿಸುವಿಕೆ ಹಾಗೂ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವಲ್ಲಿ ಪ್ರಧಾನ ಪಾತ್ರ ವಹಿಸಿ ತಲೆಮರೆಸಿಕೊಂಡ ಉಗ್ರ ಜುನೈದ್ ಅಹಮದ್‌ನ್ ತಾಯಿಯಾಗಿರುವ ಅನಿಸಾ ಕೂಡ ನಾಸೀರ್‌ಗೆ ಸಹಕಾರ ನೀಡಿದ್ದಾಳೆ ಎಂದು ಎನ್‌ಐಎ ತಿಳಿಸಿದೆ.
Advertisement