
ಹನ್ನೊಂದು ಮಂದಿಯ ಸಾವಿಗೆ ಕಾರಣವಾದ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಘಟನೆ ಬಗ್ಗೆ ಕೇಂದ್ರ ಆಡಳಿತ ನ್ಯಾಯಮಂಡಳಿ (CAT) ಆದೇಶದ ವಿರುದ್ಧ ಐಪಿಎಲ್ ಚಾಂಪಿಯನ್ಸ್ ಬೆಂಗಳೂರು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ತಮ್ಮ ಮೊದಲ ಐಪಿಎಲ್ ಪ್ರಶಸ್ತಿ ಗೆಲುವಿನ ನಂತರ ಕ್ರೀಡಾಂಗಣದ ಹೊರಗೆ ಸುಮಾರು 3ರಿಂದ 5 ಲಕ್ಷ ಜನರು ಸೇರಿ ಉಂಟಾದ ಕಾಲ್ತುಳಿತಕ್ಕೆ ಆರ್‌ಸಿಬಿ ಪ್ರಾಥಮಿಕವಾಗಿ ಕಾರಣವಾಗಿದೆ ಎಂದು ಸಿಎಟಿ ಆದೇಶ ನೀಡಿತ್ತು.
ಸಿಎಟಿ ತನ್ನ ವರದಿಯಲ್ಲಿ ಹೇಳಿದಂತೆ ಆರ್ ಸಿಬಿ ಘೋಷಣೆ ಹಠಾತ್ತನೆ ಘೋಷಣೆ ಮಾಡಿದ್ದರಿಂದ ಲಕ್ಷಾಂತರ ಜನರು ಕ್ರೀಡಾಂಗಣ ಹೊರಗೆ ಸೇರಿದ್ದರು, ಸ್ಥಳೀಯ ಪೊಲೀಸರಿಗೆ ಸುಮಾರು 3-5 ಲಕ್ಷ ಜನರ ಗುಂಪನ್ನು ನಿಭಾಯಿಸಲು ಸಿದ್ಧರಾಗಿರಲಿಲ್ಲ ಎಂದು ಹೇಳಿದೆ.
ಸಿಎಟಿ ಆದೇಶವು ಸಹಜ ನ್ಯಾಯದ ತತ್ವಗಳಿಗೆ ಬದ್ಧವಾಗಿಲ್ಲ ಎಂದು ಆರ್‌ಸಿಬಿ ಹೇಳಿಕೊಂಡಿದೆ. ತನ್ನ ಅಭಿಪ್ರಾಯ ಮತ್ತು ವಿವರಣೆ ಕೇಳದೆ ಆದೇಶ ನೀಡಿದೆ ಎಂದು ಹೈಕೋರ್ಟ್ ಗೆ ಸಲ್ಲಿಸಿದ ಆಕ್ಷೇಪದಲ್ಲಿ ಹೇಳಿದೆ.
"ವಾಸ್ತವದ ತನಿಖೆ ಇನ್ನೂ ಬಾಕಿ ಇರುವಾಗ ಮತ್ತು ಈ ಘಟನೆಯಲ್ಲಿ ಅರ್ಜಿದಾರರ ಪಾತ್ರದ ಬಗ್ಗೆ ಯಾವುದೇ ಸಂಸ್ಥೆಯಿಂದ ನಿರ್ಣಾಯಕ ಹೇಳಿಕೆಗಳು ಬರದಿದ್ದಾಗ, ಕೇಂದ್ರ ಆಡಳಿತ ನ್ಯಾಯಮಂಡಳಿಯು ಈ ವಿವಾದಿತ ಸಂಗತಿಗಳನ್ನು ಪರಿಗಣಿಸುವುದು ಅಕಾಲಿಕವಾಗಿದೆ ಎಂದು ಅರ್ಜಿಯಲ್ಲಿ ಆರ್ ಸಿಬಿ ಫ್ರಾಂಚೈಸಿ ಆಕ್ಷೇಪಿಸಿದೆ.
ವಿಜಯೋತ್ಸವ ಆಚರಣೆಗೆ ಪೊಲೀಸ್ ಅನುಮತಿ ಪಡೆಯುವ ವಿಷಯದಲ್ಲಿ, ಸೇವಾ ಪೂರೈಕೆದಾರರಾದ ಮೆಸರ್ಸ್ ಡಿಎನ್‌ಎ ಮತ್ತು ಕೆಎಸ್‌ಸಿಎ ಜೊತೆಗಿನ ಒಪ್ಪಂದದ ಪ್ರಕಾರ, ಅಗತ್ಯ ಅನುಮತಿಗಳನ್ನು ಪಡೆಯುವ ಮತ್ತು ಅನ್ವಯವಾಗುವ ಕಾನೂನಿನ ಅನುಸರಣೆಯನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ಈ ಸಂಸ್ಥೆಗಳ ಮೇಲಿದೆ ಎಂದು ಆರ್‌ಸಿಬಿ ಹೇಳುತ್ತದೆ. ಹೀಗಾಗಿ ಆರ್‌ಸಿಬಿ ವಿರುದ್ಧ ಮಾಡಿದ ಟೀಕೆಗಳನ್ನು ತೆಗೆದುಹಾಕಲು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.
Advertisement