
ಬೆಂಗಳೂರು: ಸಾಗರ ತಾಲೂಕಿನ ಅಂಬಾರಗೊಂಡ್ಲು ಮತ್ತು ಕಳಸವಳ್ಳಿ ನಡುವೆ ಶರಾವತಿ ಹಿನ್ನೀರಲ್ಲಿ ನಿರ್ಮಿಸಲಾಗಿರುವ ಸೇತುವೆ ಉದ್ಘಾಟನೆ ಸೇರಿ ಇನ್ನಿತರೆ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ನಡುವೆ ಶಿಷ್ಟಾಚಾರ ಉಲ್ಲಂಘನೆ ಕುರಿತು ಸಮರ ಶುರುವಾಗಿದೆ.
ಕಾರ್ಯಕ್ರಮಕ್ಕೆ ತಮ್ಮನ್ನು ಸರಿಯಾಗಿ ಆಹ್ವಾನಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದರೆ, ನಾವು ಶಿಷ್ಟಾಚಾರ ಉಲ್ಲಂಘಿಸಿಲ್ಲ, 2 ಬಾರಿ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಿದ್ದೇವೆಂದು ಕೇಂದ್ರ ಸರ್ಕಾರ ಹೇಳಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ನಿತಿನ್ ಗಡ್ಕರಿಯವರು, ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿ ಸಿಗಂದೂರು ಸೇತುವೆ ಉದ್ಘಾಟಿಸಲಾಗಿದೆ. ಜುಲೈ 11ರಂದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧಿಕೃತ ಆಹ್ವಾನವನ್ನು ನೀಡಲಾಗಿತ್ತು. ಒಂದೊಮ್ಮೆ ಪೂರ್ವ ನಿಗದಿತ ಕಾರ್ಯಕ್ರಮಗಳ ಸಮಸ್ಯೆ ಇದ್ದರೆ ವರ್ಚ್ಯುವಲ್ ಆಗಿಯಾದರೂ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕೆಂದು ಜು.12ರಂದು ಮತ್ತೊಂದು ಪತ್ರ ಬರೆದು ಕೋರಲಾಗಿತ್ತು.
ಕೇಂದ್ರ ಸರ್ಕಾರವು ಸ್ಥಾಪಿತ ಶಿಷ್ಟಾಚಾರಗಳನ್ನು ಎತ್ತಿಹಿಡಿಯುವುದನ್ನು ಮುಂದುವರೆಸಿದೆ ಮತ್ತು ಕರ್ನಾಟಕ ಸರ್ಕಾರ ಮತ್ತು ಮುಖ್ಯಮಂತ್ರಿಗಳ ಕೊಡುಗೆಗಳು ಮತ್ತು ಸಹಕಾರವನ್ನು ನಿರಂತರವಾಗಿ ಶ್ಲಾಘಿಸಿದೆ. ಇದು ಸಹಕಾರಿ ಒಕ್ಕೂಟ ವ್ಯವಸ್ಥೆ ಮತ್ತು ಎಲ್ಲಾ ರಾಜ್ಯಗಳೊಂದಿಗೆ ನಿಕಟ ಸಮನ್ವಯಕ್ಕೆ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ನಡುವೆ ಶಿಷ್ಟಾಚಾರ ಉಲ್ಲಂಘನೆಯಾಗಿರುವ ಪ್ರಧಾನಿ ಮೋದಿಯವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರ ಬರೆದಿದ್ದು, ಇಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಅಂಬಾರಗೋಡ್ಲು - ಕಳಸವಳ್ಳಿ ಸೇತುವೆ ಉದ್ಘಾಟನೆಯೂ ಸೇರಿದಂತೆ ಹಲವು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ.
ರಾಜ್ಯ ಸರ್ಕಾರವನ್ನು ಸಂಪರ್ಕಿಸದೆ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ಮಾತ್ರವಲ್ಲ, ಮುಂಚಿತವಾಗಿ ಕಾರ್ಯಕ್ರಮ ಆಯೋಜನೆಯ ವಿಷಯವನ್ನು ತಿಳಿಸದೆ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರನ್ನು ಕೂಡ ಮುದ್ರಿಸಲಾಗಿತ್ತು. ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕುವುದರಿಂದ ಹಿಡಿದು ಆಹ್ವಾನ ನೀಡುವ ವರೆಗೆ ಎಲ್ಲಾ ಹಂತಗಳಲ್ಲಿಯೂ ಶಿಷ್ಟಾಚಾರ ಉಲ್ಲಂಘನೆ ಮಾಡಲಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಂಘರ್ಷಕ್ಕೆ ಕಾರಣವಾಗಬಹುದಾದ ಈ ನಡೆ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದುದು. ಇದನ್ನು ರಾಜ್ಯ ಸರ್ಕಾರವು ಬಲವಾಗಿ ಖಂಡಿಸುತ್ತದೆ. ಮುಂದಿನ ದಿನಗಳಲ್ಲಿ ಇಂತಹ ಲೋಪಗಳಾಗದಂತೆ ತಮ್ಮ ಎಲ್ಲಾ ಸಂಪುಟ ಸಹೋದ್ಯೋಗಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡುತ್ತೀರೆಂದು ನಾನು ಭಾವಿಸಿದ್ದೇನೆಂದು ಹೇಳಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಈ ಯೋಜನೆಯನ್ನು ಹಿಂದಿನ ಸರ್ಕಾರದಲ್ಲಿ ಯೋಜಿಸಲಾಗಿತ್ತು. ಹೆಚ್.ಸಿ. ಮಹದೇವಪ್ಪ ಲೋಕೋಪಯೋಗಿ ಸಚಿವರಾಗಿದ್ದಾಗ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಲಿಮಿಟೆಡ್ ಡಿಪಿಆರ್ ಅನ್ನು ಸಿದ್ಧಪಡಿಸಿತ್ತು. ನಂತರ, ಇದು ಒಂದು ದೊಡ್ಡ ಯೋಜನೆಯಾಗಿ ಹೊರಹೊಮ್ಮಿದ ಕಾರಣ ಯೋಜನೆಯನ್ನು NHAI ವಹಿಸಿಕೊಂಡಿತು. ಆದರೆ ಇಂದು, ಕೇಂದ್ರ ಸರ್ಕಾರ ಉದ್ಘಾಟನಾ ಕಾರ್ಯಕ್ರಮಕ್ಕೆ ನನ್ನನ್ನೇ ಆಹ್ವಾನಿಸಿಲ್ಲ. ಇದು ಸಹಕಾರಿ ಒಕ್ಕೂಟ ವ್ಯವಸ್ಥೆಯೇ? ಕೇಂದ್ರದ ಕ್ರಮದ ವಿರುದ್ಧ ಪ್ರತಿಭಟಿಸುವ ಸಲುವಾಗಿ ಸಾಂಕೇತಿಕವಾಗಿ ಸಚಿವರಾಗಲೀ, ಶಾಸಕರಾಗಲಿ ಸರ್ಕಾರದ ಯಾವುದೇ ವ್ಯಕ್ತಿಯೂ ಕಾರ್ಯಕ್ರಮಕ್ಕೆ ಹಾಜರಾಗಲಿಲ್ಲ ಎಂದು ಹೇಳಿದರು.
Advertisement