
ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ದಲಿತ (SC/ST) ಅಧಿಕಾರಿಗಳಿಗೆ ಬಡ್ತಿ ಅವಕಾಶಗಳನ್ನು ನಿರಾಕರಿಸಲಾಗುತ್ತಿದೆ ಎಂಬ ಆರೋಪಗಳನ್ನು ಪರಿಹರಿಸಲು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ (DCRE) ಕ್ರಮ ಕೈಗೊಂಡಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು ಈ ಕ್ರಮ ಕೈಗೊಳ್ಳಲಾಗಿದೆ. ಈ ಸಮಸ್ಯೆಯನ್ನು ವಿಳಂಬ ಮಾಡದೆ ಪರಿಹರಿಸುವಂತೆ ಅವರು ಪತ್ರದಲ್ಲಿ ಒತ್ತಾಯಿಸಿದ್ದರು.
ಬೆಂಗಳೂರಿನಲ್ಲಿ ನಡೆಯುತ್ತಿರುವ ಎಐಸಿಸಿ ಒಬಿಸಿ ಸಲಹಾ ಮಂಡಳಿ ಸಭೆ ಸಮಯದಲ್ಲಿ ಈ ವಿಷಯ ಬಂದಿದ್ದರಿಂದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ಮುಜುಗರ ಉಂಟು ಮಾಡಿತು. ರಾಜ್ಯ ಸರ್ಕಾರಿ ಎಸ್‌ಸಿ/ಎಸ್‌ಟಿ ನೌಕರರ ಸಂಘದ ಅಧ್ಯಕ್ಷ ಡಿ. ಚಂದ್ರಶೇಖರಯ್ಯ ಅವರು ಆರಂಭದಲ್ಲಿ ಮುಖ್ಯಮಂತ್ರಿಯವರಿಗೆ ಮಧ್ಯಪ್ರವೇಶ ಕೋರಿ ಜ್ಞಾಪಕ ಪತ್ರವನ್ನು ಸಲ್ಲಿಸಿದ್ದರು.
ಆದಾಗ್ಯೂ, ಯಾವುದೇ ಪ್ರತಿಕ್ರಿಯೆ ಸಿಗದ ನಂತರ, ಅವರು ನೇರವಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಂಪರ್ಕಿಸಿದರು. ಅದಕ್ಕೆ ಜುಲೈ 6 ರಂದು ಸರ್ಕಾರಕ್ಕೆ ಮಲ್ಲಿಕಾರ್ಜುನ ಖರ್ಗೆಯವರು ಪತ್ರ ಬರೆದು, ಸರ್ಕಾರ ಸುಗಮ ಕಾರ್ಯನಿರ್ವಹಿಸಲು ಸಮಸ್ಯೆಯನ್ನು ಪರಿಹರಿಸುವಂತೆ ಮುಖ್ಯಮಂತ್ರಿಗೆ ಸಲಹೆ ನೀಡಿದರು.
ಎಸ್‌ಸಿ/ಎಸ್‌ಟಿ ನೌಕರರ ಸಂಘವು ಎಸ್ಸಿ/ಎಸ್ಟಿ ನೌಕರರು ಎದುರಿಸುತ್ತಿರುವ ಅನ್ಯಾಯಗಳನ್ನು ವಿವರಿಸುವ ವಿವರವಾದ ದೂರನ್ನು ಡಿಸಿಆರ್ ಇಗೆ ಸಲ್ಲಿಸಿತು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ 80 ಎಸ್ ಸಿ/ಎಸ್ ಟಿ ನೌಕರರಿಗೆ ಪ್ರಾಂಶುಪಾಲರ ಹುದ್ದೆಗೆ ಬಡ್ತಿ ನಿರಾಕರಿಸಲಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಡಿಸಿಆರ್ ಇ ಪ್ರಧಾನ ಕಚೇರಿಯ ಪೊಲೀಸ್ ವರಿಷ್ಠಾಧಿಕಾರಿ ಕೆ. ಧರಣಿ ದೇವಿ ಅವರು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಂಬಂಧಿತ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದ್ದಾರೆ. ಗೃಹ, ಅರಣ್ಯ, ತೋಟಗಾರಿಕೆ, ಕೃಷಿ, ನಗರಾಭಿವೃದ್ಧಿ, ಸಾರಿಗೆ ಮತ್ತು ವಿವಿಧ ಎಂಜಿನಿಯರಿಂಗ್ ಇಲಾಖೆಗಳು ಸೇರಿದಂತೆ ಹಲವಾರು ಇತರ ಇಲಾಖೆಗಳಲ್ಲಿ ಬಡ್ತಿಯಲ್ಲಿ ಎಸ್ ಸಿ ಎಸ್ ಟಿ ನೌಕರರನ್ನು ಕಡೆಗಣಿಸಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು.
Advertisement