ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವು ಎಂಬಾತನನ್ನು ಕಳೆದ ರಾತ್ರಿ ಬೆಂಗಳೂರಿನ ಭಾರತಿನಗರದಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಹತ್ಯೆ ಪ್ರಕರಣ ಸಂಬಂಧ ಮೃತನ ತಾಯಿ ವಿಜಯಲಕ್ಷ್ಮೀ ನೀಡಿದ ದೂರಿನ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜು ಸೇರಿದಂತೆ ಐವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಎಂಟರಿಂದ ಒಂಬತ್ತು ಜನರು ತಮ್ಮ ಮಗನ ಮೇಲೆ ಕಬ್ಬಿಣದ ರಾಡ್ ಮತ್ತು ಮಚ್ಚಿನಿಂದ ಹಲ್ಲೆ ನಡೆಸಿದ್ದರು. ಈ ವೇಳೆ ಮಧ್ಯಪ್ರವೇಶಿಸಲು ಯತ್ನಿಸಿದ ಸ್ನೇಹಿತನಿಗೂ ಕಬ್ಬಿಣದ ರಾಡ್‌ನಿಂದ ಹೊಡೆದಿದ್ದಾರೆ. ನಾನು ಕಿರುಚಿಕೊಳ್ಳುತ್ತಿದ್ದಂತೆ ಆರೋಪಿಗಳು ಬಿಳಿ ಸ್ಕಾರ್ಪಿಯೋ ವಾಹನ ಮತ್ತು ದ್ವಿಚಕ್ರ ವಾಹನದಲ್ಲಿ ಸ್ಥಳದಿಂದ ಪರಾರಿಯಾಗಿದ್ದು ಆರೋಪಿಗಳನ್ನು ಗುರುತಿಸಬಲ್ಲೆ ಎಂದು ವಿಜಯಲಕ್ಷ್ಮಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. 2006ರಲ್ಲಿ ಶಿವಪ್ರಕಾಶ್ ವಿರುದ್ಧ ರೌಡಿ ಶೀಟ್ ತೆರೆಯಲಾಗಿದ್ದು ಆತನ ವಿರುದ್ಧ 11 ಪ್ರಕರಣಗಳು ದಾಖಲಾಗಿವೆ.
ಬೆಂಗಳೂರಿನಲ್ಲಿ ಬುಧವಾರ ನಡೆದ ಕಾಂಗ್ರೆಸ್ ಒಬಿಸಿ ಸಲಹಾ ಮಂಡಳಿಯ ಸಭೆಯಲ್ಲಿ, ತೆಲಂಗಾಣ ಜಾತಿ ಸಮೀಕ್ಷೆಯನ್ನು ಮಾದರಿಯಾಗಿ ತೆಗೆದುಕೊಂಡು ಪ್ರಸ್ತಾವಿತ ರಾಷ್ಟ್ರೀಯ ಜಾತಿ ಜನಗಣತಿಯನ್ನು ನಡೆಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಎರಡು ದಿನಗಳ ಸಭೆ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಅಂಗೀಕರಿಸಲಾದ ನಿರ್ಣಯಗಳನ್ನು 'ಬೆಂಗಳೂರು ಘೋಷಣೆ' ಎಂದು ಕರೆಯಲಾಯಿತು. ಜನಗಣತಿಯು ಪ್ರತಿಯೊಬ್ಬ ವ್ಯಕ್ತಿಯ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ, ಉದ್ಯೋಗ, ರಾಜಕೀಯ ಅಂಶಗಳನ್ನು ಒಳಗೊಂಡಿರಬೇಕು. ಜೊತೆಗೆ ಜಾತಿಗಳನ್ನು ಸಹ ಪ್ರಮುಖವಾಗಿ ಪರಿಗಣಿಸಬೇಕು. ಮೀಸಲಾತಿ ಮೇಲಿನ ಶೇ 50ರ ಮಿತಿಯನ್ನು ರದ್ದುಗೊಳಿಸುವುದು ಮತ್ತು ಸಂವಿಧಾನದ 15 (4)ನೇ ವಿಧಿಯ ಪ್ರಕಾರ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿಯೂ ಒಬಿಸಿಗಳಿಗೆ ಮೀಸಲಾತಿ ಸಿಗುವಂತಾಗಬೇಕು. ಈ ಬೇಡಿಕೆಗಳನ್ನು ಒತ್ತಾಯಿಸಲು ದೇಶದಾದ್ಯಂತ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ರಾಜ್ಯದ ಎಲ್ಲ ಮಲ್ಟಿಪ್ಲೆಕ್ಸ್ ಮತ್ತು ಚಿತ್ರಮಂದಿರಗಳಲ್ಲಿ ಏಕರೂಪ ದರ ಜಾರಿ ಮಾಡುವಂತೆ ರಾಜ್ಯ ಸರ್ಕಾರ ಆದೇಶಿದ್ದು ಸಿನಿಮಾ ಪ್ರದರ್ಶನದ ಟಿಕೆಟ್ ಬೆಲೆ 200 ರೂ. ಮೀರಬಾರದು ಎಂದು ಆದೇಶ ಹೊರಡಿಸಿದೆ. ಇದು ಎಲ್ಲಾ ಭಾಷೆಯ ಸಿನಿಮಾಗಳಿಗೂ ಅನ್ವಯ ಆಗಲಿದೆ. ಮಲ್ಟಿಪ್ಲೆಕ್ಸ್ ಸಿನಿಮಾ ಮಂದಿರಗಳ ಟಿಕೆಟ್ ದರಕ್ಕೆ ತೆರಿಗೆ ಒಳಗೊಂಡು ಗರಿಷ್ಠ 200 ರೂಪಾಯಿ ಮಿತಿ ಹೇರಿ, ರಾಜ್ಯ ಗೃಹ ಇಲಾಖೆ ಕರಡು ಅಧಿಸೂಚನೆ ಹೊರಡಿಸಿದೆ. ಕರ್ನಾಟಕ ಚಲನಚಿತ್ರ ನಿಯಂತ್ರಣ ತಿದ್ದುಪಡಿ ಮಸೂದೆ 2025ರ ಕರಡು ಅಧಿಸೂಚನೆ ಇದಾಗಿದೆ. ಈ ಅಧಿಸೂಚನೆಗೆ ಆಕ್ಷೇಪ ಸಲ್ಲಿಸಲು 15 ದಿನ ಅವಕಾಶ ನೀಡಲಾಗಿದೆ.
ದೇವನಹಳ್ಳಿಯ ಚನ್ನರಾಯಪಟ್ಟಣದಲ್ಲಿ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ ಸ್ಥಾಪನೆಗೆ 1,777 ಎಕರೆ ಭೂಸ್ವಾಧೀನಕ್ಕೆ ಸಿದ್ದರಾಮಯ್ಯ ಸರ್ಕಾರ ಹೊರಡಿಸಿದ್ದ ಫೈನಲ್ ನೋಟಿಫಿಕೇಶನ್ ಅನ್ನು ರದ್ದು ಮಾಡಿದ ಬೆನ್ನಲ್ಲೇ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಪುತ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ನಾರಾ ಲೋಕೇಶ್ ಅವರು ಆಂಧ್ರಕ್ಕೆ ಬರುವಂತೆ ಏರೋಸ್ಪೇಸ್ ಉದ್ಯಮಿಗಳಿಗೆ ಆಫರ್ ನೀಡಿದ್ದರು. ಪ್ರೋತ್ಸಾಹ ಧನ ಮತ್ತು 8000 ಎಕರೆಗಳಿಗೂ ಹೆಚ್ಚು ಭೂಮಿ ನಿಮಗಾಗಿ ಸಿದ್ಧವಿದೆ ಎಂದು ನಾರಾ ಲೋಕೇಶ್ ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್, ಕರ್ನಾಟಕದಲ್ಲಿ ಉದ್ಯಮಿಗಳಿಗೆ ನಾವು ಕೇವಲ ಭೂಮಿ ನೀಡುವುದಿಲ್ಲ. ಭಾರತದ ನಂ.1 ಏರೋಸ್ಪೇಸ್, ರಕ್ಷಣಾ ಪರಿಸರ ವ್ಯವಸ್ಥೆಯನ್ನು ನೀಡುತ್ತೇವೆ. ರೈತರ ಹಿತದೃಷ್ಟಿಯಿಂದ ಭೂಸ್ವಾಧೀನ ಕೈಬಿಡಬೇಕಾಯಿತು. ಆದರೆ ಈ ಉದ್ಯಮಿಗಳಿಗೆ ಅವರು ಕೇಳಿದ ಕಡೆ ಜಮೀನು ಕೊಡುತ್ತೇವೆ ಎಂದು ಎಂಬಿ ಪಾಟೀಲ್ ಹೇಳಿದರು.
ರಾಜ್ಯಾದ್ಯಂತ ಮುಂದಿನ ಏಳು ದಿನಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಜುಲೈ 15 ರಿಂದ 21 ರವರೆಗೆ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಮತ್ತು ಕೊಡಗು ಮುಂತಾದ ನಿರ್ದಿಷ್ಟ ಜಿಲ್ಲೆಗಳಲ್ಲಿ ಜುಲೈ 20 ಮತ್ತು 21 ರಂದು ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಜುಲೈ 16 ರಂದು ಕರ್ನಾಟಕದ ಉತ್ತರ ಒಳನಾಡಿನಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಪ್ರಮುಖವಾಗಿ ಬಾಗಲಕೋಟೆ, ಬೀದರ್ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಮೂಲಕ ಹಗುರದಿಂದ ಮಧ್ಯಮ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.
Advertisement