
ಕಾರವಾರದ ಗೋಕರ್ಣದ ಬಳಿ ರಷ್ಯಾದ ಮಹಿಳೆ ನೀನಾ ಕುಟಿನಾ, ಆಸ್ಪತ್ರೆ ಅಥವಾ ವೈದ್ಯರ ನೆರವಿಲ್ಲದೆ ಗುಹೆಯಲ್ಲಿ ವಾಸಿಸುತ್ತಿದ್ದು, ತನ್ನ ಮಕ್ಕಳ ತಂದೆ ಡ್ರೋರ್ ಗೋಲ್ಡ್‌ಸ್ಟೈನ್ ಅವರನ್ನು ಭೇಟಿಯಾಗಲು ಬಯಸುತ್ತಿದ್ದಾರೆ. ಇಸ್ರೇಲ್ ಪ್ರಜೆ ಡ್ರೋರ್, ಮಕ್ಕಳ ಪಾಲನೆಗೆ ಸಹಕರಿಸಲು ಇಚ್ಛೆ ವ್ಯಕ್ತಪಡಿಸಿದ್ದಾರೆ. ನೀನಾ, ತನ್ನ ಕುಟುಂಬದೊಂದಿಗೆ ಪ್ರಕೃತಿಯಲ್ಲೇ ವಾಸಿಸಲು ಬಯಸುತ್ತಿದ್ದು, 20 ದೇಶಗಳಲ್ಲಿ ವಾಸಿಸಿರುವುದಾಗಿ ಹೇಳಿದ್ದಾರೆ.
ಕಾರವಾರ: ಗೋಕರ್ಣದ ಬಳಿ ರಷ್ಯಾದ ಮಹಿಳೆಯೊಬ್ಬರು ಇಬ್ಬರು ಹೆಣ್ಣು ಮಕ್ಕಳೊಂದಿಗೆ ಗುಹೆಯೊಳಗೆ ವಾಸಿಸುತ್ತಿರುವುದು ಪತ್ತೆಯಾದ ಕೆಲ ದಿನಗಳ ಬಳಿಕ ಮಕ್ಕಳ ತಂದೆ ಕಾಣಿಸಿಕೊಂಡಿದ್ದಾರೆ. ಇಸ್ರೇಲ್ ಪ್ರಜೆ ಡ್ರೋರ್ ಗೋಲ್ಡ್‌ಸ್ಟೈನ್, ಮಕ್ಕಳ ಪಾಲನೆಯನ್ನು ನೀನಾ ಕುಟಿನಾ ಜೊತೆಗೆ ಹಂಚಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ನನ್ನ ಇಬ್ಬರು ಪುತ್ರಿಯರಿಗೆ ಹತ್ತಿರವಾಗಲು ಬಯಸುತ್ತೇನೆ. ಪೋಷಣೆಯ ಹಂಚಿಕೆಗೆ ಒತ್ತಾಯಿಸಿದ ಅವರು, ಮಕ್ಕಳನ್ನು ಭೇಟಿಯಾಗಲು, ಅವರಿಗೆ ಹತ್ತಿರವಾಗಲು ಮತ್ತು ತಂದೆಯಾಗಿರಲು ಮನಸ್ಸು ಬಯಸುತ್ತಿದೆ ಎಂದು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ತನ್ನ ಮಕ್ಕಳ ತಂದೆ ಇಸ್ರೇಲಿ ಉದ್ಯಮಿಯಾಗಿದ್ದು, ಗೋವಾದ ಗುಹೆಯಲ್ಲಿ ವಾಸಿಸುತ್ತಿದ್ದಾಗ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿರುವುದಾಗಿ ಅಧಿಕಾರಿಗಳಿಗೆ ರಷ್ಯಾದ ಮಹಿಳೆ ತಿಳಿಸಿರುವುದಾಗಿ ಈ ಹಿಂದೆ ವರದಿಯಾಗಿತ್ತು. ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಕೆಲವು ವರ್ಷಗಳ ಹಿಂದೆ ಇಸ್ರೇಲಿ ಪ್ರಜೆಯನ್ನು ನೀನಾ ಭೇಟಿಯಾದಾಗ ಇಬ್ಬರು ಪ್ರೇಮಂಕುರವಾಗಿತ್ತು. ಇಬ್ಬರು ಹೆಣ್ಣುಮಕ್ಕಳಾದ ಪ್ರೇಯಾ (6) ಮತ್ತು ಅಮಾ (4) ಅವರ ಪುತ್ರಿಯರು. ಅವರು ತಂದೆಯೊಂದಿಗೆ ಸಂಪರ್ಕದಲ್ಲಿದ್ದರು ಎಂದು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಒ) ವರದಿಯಲ್ಲಿ ಹೇಳಲಾಗಿದೆ. ನೀನಾ ಮತ್ತು ಅವರ ಮಕ್ಕಳನ್ನು ರಷ್ಯಾಕ್ಕೆ ಗಡೀಪಾರು ಮಾಡಲು ಸುಮಾರು ಒಂದು ತಿಂಗಳು ತೆಗೆದುಕೊಳ್ಳುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಗುಹೆಯ ಒಳಗೆ ವಾಸಿಸುತ್ತಿದ್ದ ಆಕೆ ಪತ್ತೆಯಾಗಿರುವುದು ಅನೇಕರನ್ನು ಬೆರಗುಗೊಳಿಸಿದ್ದರೆ ನೀನಾ ಕುಟಿನಾ, ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ನಮ್ಮ ಕುಟುಂಬ ಪ್ರಕೃತಿಯನ್ನು ಪ್ರೀತಿಸುತ್ತದೆ. ಕಳೆದ 15 ವರ್ಷಗಳಲ್ಲಿ 20 ದೇಶಗಳ ಕಾಡುಗಳಲ್ಲಿ ವಾಸಿಸಿರುವುದಾಗಿ ಆಕೆ ಹೇಳಿದ್ದಾಳೆ. ನನ್ನ ಮಕ್ಕಳೆಲ್ಲರೂ ಬೇರೆ ಬೇರೆ ಸ್ಥಳಗಳಲ್ಲಿ ಜನಿಸಿದರು. ಆಸ್ಪತ್ರೆಗಳು ಅಥವಾ ವೈದ್ಯರು ಇಲ್ಲದೆ ನಾನು ಅವರೆಲ್ಲರಿಗೂ ಜನ್ಮ ನೀಡಿದ್ದೇನೆ. ಏಕೆಂದರೆ ಅದನ್ನು ಹೇಗೆ ಮಾಡಬೇಕೆಂದು ನನಗೆ ತಿಳಿದಿದೆ. ಯಾರೂ ನನಗೆ ಸಹಾಯ ಮಾಡಲಿಲ್ಲ, ನಾನೊಬ್ಬಳೆ ಅದೆಲ್ಲಾವನ್ನು ಮಾಡಿರುವುದಾಗಿ ಅವರು ಹೇಳಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ನೀನಾ ತನ್ನ ಇಬ್ಬರು ಪುತ್ರರು ಮತ್ತು ಒಬ್ಬಳು ಮಗಳೊಂದಿಗೆ ಹಲವು ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದರು. ಅವರ ಹಿರಿಯ ಮಗ 21 ನೇ ವಯಸ್ಸಿನಲ್ಲಿ ನಿಧನರಾಗಿದ್ದು, ಅವರ ಇನ್ನೊಬ್ಬ ಮಗ ಎಲ್ಲಿದ್ದಾನೆ ಎಂಬುದು ತಿಳಿದಿಲ್ಲ. ಆಕೆಯ ವ್ಯಾಪಾರ ವೀಸಾವು 2017 ರಲ್ಲಿ ಮುಕ್ತಾಯಗೊಂಡಿತ್ತು. ಆಗಿನಿಂದಲೂ ಅನೇಕ ಸಂಕೀರ್ಣ ಕಾರಣಗಳಿಂದ ಗುಹೆಯಲ್ಲಿ ವಾಸಿಸುತ್ತಿದ್ದ ಎನ್ನಲಾಗಿದೆ.
ಅನೇಕ ವೈಯಕ್ತಿಕ ನಷ್ಟಗಳು ಸಂಭವಿಸಿವೆ. ನನ್ನ ಮಗನ ಸಾವು ಮಾತ್ರವಲ್ಲ, ಇತರ ಕೆಲವು ನಿಕಟವರ್ತಿಗಳ ಸಾವು, ನಿರಂತರ ದುಃಖ, ಕಾಗದಪತ್ರಗಳು ಮತ್ತಿತರ ಸಮಸ್ಯೆಗಳಿದ್ದವು ಎಂದು ನೀನಾ ಹೇಳಿಕೊಂಡಿದ್ದಾರೆ.
ಜುಲೈ 11 ರಂದು ಗೋಕರ್ಣದ ಗುಹೆಯೊಂದರಲ್ಲಿ ನೀನಾ ಮತ್ತು ಅವರ ಪುತ್ರಿಯರು ವಾಸವಾಗಿರುವುದು ಪೊಲೀಸರ ನಿತ್ಯದ ತಪಾಸಣೆ ವೇಳೆ ಪತ್ತೆಯಾಗಿತ್ತು. ಅಂದಿನಿಂದ ರಷ್ಯಾದ ಮಹಿಳೆ, ಸದ್ಯದ ಜೀವನದಲ್ಲಿ ನೆಮ್ಮದಿ ಇಲ್ಲ. ಗುಹೆಯಲ್ಲಿಯೇ ಶಾಂತಯುತವಾಗಿ" ವಾಸಿಸುತ್ತಿದ್ದಾಗಿ ಹೇಳುತ್ತಿದ್ದಾರೆ.
Advertisement