
ಕಾರವಾರ: ವರ್ಷದ ಹಿಂದೆ ಶಿರೂರು ಭೂಕುಸಿತದಲ್ಲಿ ತನ್ನ ಮಾಲೀಕರನ್ನು ಕಳೆದುಕೊಂಡಿದ್ದ ಅನಾಥ ಶ್ವಾನಕ್ಕೆ ಉತ್ತರಕನ್ನಡದ ಜಿಲ್ಲೆಯ ಎಸ್'ಪಿ ಮನೆಯಲ್ಲಿ ಆಶ್ರಯ ಸಿಕ್ಕಿದ್ದು, ಈ ಶ್ವಾನ ಇದೀಗ ಎಸ್ಪಿ ನಿವಾಸಕ್ಕೆ ಭೇಟಿ ನೀಡುವ ವಿಐಪಿಗಳಿಗೆ ಫೇವರಿಟ್ ಆಗಿದೆ.
ಜುಲೈ.16ರಂದು ಶಿರೂರಿನಲ್ಲಿ ಭೂಕುಸಿತ ಉಂಟಾದಾಗ ಶ್ವಾನ ತನ್ನ ಮಾಲೀಕರನ್ನು ಕಳೆದುಕೊಂಡಿತ್ತು. ಬಳಿಕ ಮಾಲೀಕನಿಗಾಗಿ ಸ್ಥಳದಲ್ಲಿ ತೀವ್ರ ಹುಡುಕಾಟ ನಡೆಸುತ್ತಿತ್ತು. ಈ ದೃಶ್ಯ ಹಲವರ ಕರುಳು ಹಿಂಡುವಂತೆ ಮಾಡಿತ್ತು. ಗುಡ್ಡ ಕುಸಿತದಲ್ಲಿ ಶ್ವಾನದ ಮಾಲೀಕರು ಸಾವನ್ನಪ್ಪಿದ್ದು, ನಾಯಿ ಅನಾಥವಾಗಿತ್ತು.
ಕೆಲ ಸ್ಥಳೀಯರು ಹಲವಾರು ಪ್ರಾಣಿ ಹಕ್ಕುಗಳ ಸಂಘಟನೆಗಳಿಗೆ ಕರೆ ಮಾಡಿ ದತ್ತು ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು. ಆದರೆ, ಯಾರೂ ಮುಂದೆ ಬಂದಿರಲಿಲ್ಲ. ನಂತರ ಉತ್ತರ ಕನ್ನಡ ಜಿಲ್ಲೆಯ ಎಸ್ಪಿ.ಎಂ.ನಾರಾಯಣ್ ಅವರು ಶ್ವಾನವನ್ನು ದತ್ತು ಪಡೆದು, ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದರು. ಶ್ವಾನಕ್ಕೆ ನಿಯಮಿತ ಸ್ನಾನ, ಆಹಾರ ನೀಡಿ, ಆರೈಕೆ ಮಾಡಲಾಗುತ್ತಿದೆ.
ಇದೀಗ ಎಸ್ಪಿ ಮನೆಗೆ ಬರುವ ಅನೇಕ ಗಣ್ಯರು ಶ್ವಾನವನ್ನು ಇಷ್ಟ ಪಡುತ್ತಿದ್ದು, ಅದರೊಂದಿಗೆ ಸೆಲ್ಫೀ ತೆಗೆದುಕೊಳ್ಳುತ್ತಿದ್ದಾರೆ.
ಗೃಹ ಸಚಿವ ಜಿ ಪರಮೇಶ್ವರ್, ಹಿರಿಯ ಕಾಂಗ್ರೆಸ್ ನಾಯಕ ಆರ್ ವಿ ದೇಶಪಾಂಡೆ, ಸ್ಥಳೀಯ ಶಾಸಕ ಸತೀಶ್ ಸೈಲ್ ಮತ್ತು ಸಚಿವ ಮಂಕಾಳ್ ವೈದ್ಯ ಸೇರಿ ಹಲವರು ಶ್ವಾನದೊಂದಿಗೆ ಸೆಲ್ಫೀ ತೆಗೆದುಕೊಂಡಿದ್ದಾರೆಂದು ಎಸ್ಪಿ ಹೇಳಿದ್ದಾರೆ.
ನಾನು ಇಲ್ಲಿಯೇ ಇರುತ್ತೇನೋ, ಇಲ್ಲವೋ ಗೊತ್ತಿಲ್ಲ. ಆದರೆ, ನಾಯಿ ಇಲ್ಲಿಯೇ ಇರುವಂತೆ ನೋಡಿಕೊಳ್ಳುತ್ತೇನೆಂದು ನಾರಾಯಣ್ ಅವರು ಹೇಳಿದ್ದಾರೆ.
Advertisement