
ಮಂಗಳೂರು: ಧರ್ಮಸ್ಥಳದಲ್ಲಿ ರಹಸ್ಯವಾಗಿ ಹಲವಾರು ಶವಗಳ ಅಂತ್ಯಕ್ರಿಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಪ್ರಮುಖ ಸಾಕ್ಷಿಯ ಬ್ರೈನ್ ಮ್ಯಾಪಿಂಗ್, ಫಿಂಗರ್‌ಪ್ರಿಂಟ್ ಮತ್ತು ನಾರ್ಕೊ ಅನಾಲಿಸಿಸ್ ಪರೀಕ್ಷೆ ನಡೆಸಲು ಅನುಮತಿ ಕೋರಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿರುವ ಬಗ್ಗೆ ತನಿಖಾಧಿಕಾರಿಗಳಿಗೆ ಇತ್ತೀಚೆಗೆ ಮಾಹಿತಿ ಲಭ್ಯವಾಗಿದೆ. ಆದರೆ ಪ್ರಾಥಮಿಕ ಸಾಕ್ಷಿ ಅಥವಾ ಅವರ ಕಾನೂನು ಪ್ರತಿನಿಧಿಗಳು ಈ ವಿಚಾರವನ್ನು ತನಿಖಾ ತಂಡಕ್ಕೆ ಬಹಿರಂಗಪಡಿಸಿಲ್ಲ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಕರಣದ ತನಿಖೆಯನ್ನು ಇನ್ನಷ್ಟು ಆಳವಾಗಿಸಲು, ತನಿಖಾಧಿಕಾರಿಗಳು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಿದ್ದಾರೆ. ದೂರುದಾರರ ಸಮ್ಮತಿ ಇದ್ದರೆ, ಅವರ ಬ್ರೈನ್ ಮ್ಯಾಪಿಂಗ್, ಫಿಂಗರ್‌ಪ್ರಿಂಟ್ ಮತ್ತು ನಾರ್ಕೋ ಅನಾಲಿಸಿಸ್ ಪರೀಕ್ಷೆಗಳನ್ನು ನಡೆಸಲು ಅನುಮತಿ ನೀಡುವಂತೆ ಕೋರಲಾಗಿದೆ. ಈ ಪರೀಕ್ಷೆಗಳು ಪ್ರಕರಣದ ತನಿಖೆಯಲ್ಲಿ ಹೊಸ ಆಯಾಮ ನೀಡುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏತನ್ಮಧ್ಯೆ, ಸ್ಥಳೀಯ ಮೂಲಗಳಿಂದ ಬಂದಿರುವ ಗೌಪ್ಯ ಮಾಹಿತಿಯ ಪ್ರಕಾರ, ಸಮಾಧಿ ಹೊರತೆಗೆಯುವ ಪ್ರಕ್ರಿಯೆ ಮುಗಿದ ನಂತರ ಪ್ರಮುಖ ಸಾಕ್ಷಿ ಪರಾರಿಯಾಗಬಹುದು ಎಂಬ ಕಳವಳವನ್ನು ಹುಟ್ಟುಹಾಕಿದೆ. ಇದೇ ಕಾರಣಕ್ಕಾಗಿ, ಸೂಕ್ತ ತನಿಖಾ ಪ್ರಕ್ರಿಯೆಗಳನ್ನು ಅನುಸರಿಸದೆ ಸಮಾಧಿ ಅಗೆಯುವ ಪ್ರಕ್ರಿಯೆಗೆ ಆತುರ ತೋರಿಸಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಸಾಧ್ಯತೆಗಳನ್ನು ತನಿಖಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. ದೂರುದಾರರ ಪರ ವಕೀಲರಿಗೂ ಈ ವಿಷಯವನ್ನು ತಿಳಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಇನ್ನು ಸಮಾಧಿ ಅಗೆಯುವ ಪ್ರಕ್ರಿಯೆಯ ಬಗ್ಗೆ ಸ್ಪಷ್ಟನೆ ನೀಡಿರುವ ತನಿಖಾಧಿಕಾರಿಗಳು, ತನಿಖೆಯ ಯಾವ ಹಂತದಲ್ಲಿ ಸಮಾಧಿ ಅಗೆಯುವ ಪ್ರಕ್ರಿಯೆಯು ಸೂಕ್ತವೆಂದು ನಿರ್ಧರಿಸಲಾಗುತ್ತದೆಯೋ, ಆಗ ಸೂಕ್ತ ಕಾನೂನು ಪ್ರಕ್ರಿಯೆಗಳನ್ನು ಅನುಸರಿಸಿಕೊಂಡು ಈ ಕಾರ್ಯವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
Advertisement