
ಮೈಸೂರು: ಸಂವಿಧಾನ ಜಾರಿಯಾಗಿ 75 ವರ್ಷ ಆಗಿದೆ. ಸ್ವಾತಂತ್ರ್ಯ ಬಂದು 78 ವರ್ಷ ಆಗುತ್ತಿದೆ. ಆದರೂ ಸಂವಿಧಾನದ ಧ್ಯೇಯೋದ್ದೇಶಗಳು ಇನ್ನೂ ಜಾರಿಯಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಹೇಳಿದರು.
ಕೆ.ಎ.ಎಸ್ ತಾಲೂಕು ನೋಡಲ್ ಅಧಿಕಾರಿಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ, ಪ್ರತಿಯೊಬ್ಬ ಅಧಿಕಾರಿಯೂ ಸಂವಿಧಾನವನ್ನು ಸರಿಯಾಗಿ ಮನನ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಸಂವಿಧಾನದ ಉದ್ದೇಶ ಜಾರಿ ಮಾಡಲು ಸಾಧ್ಯವಿಲ್ಲ ಎಂದರು.
ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಸಂವಿಧಾನದ ಮೂಲ ಆಶಯ. ಸಮಾನ ಅವಕಾಶಗಳು ಇನ್ನೂ ಸಿಕ್ಕಿಲ್ಲ. ಸಮಾನತೆ, ಭ್ರಾತೃತ್ವ ನೆಲೆಸಿಲ್ಲ. ಏಕೆ ಎನ್ನುವುದನ್ನು ನಾವು ಪ್ರಶ್ನಿಸಿಕೊಂಡು ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು.
ಕೆಎಎಸ್ ಅಧಿಕಾರಿಗಳು ಎಂದರೆ ಬುದ್ದಿವಂತರು ಎನ್ನುವ ನಂಬಿಕೆ ಇದೆ. ವೈಚಾರಿಕತೆ, ವೈಜ್ಞಾನಿಕ ಮನೋಭಾವ ಬಗ್ಗೆ ಆತ್ಮವಂಚನೆ ಮಾಡಿಕೊಳ್ಳದೆ, ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ವಿದ್ಯಾವಂತರೂ ಕೂಡ ಹಣೆಬರಹ, ಕರ್ಮಸಿದ್ಧಾಂತದಲ್ಲಿ ನಂಬಿಕೆ ಇಟ್ಟುಕೊಂಡವರಿದ್ದಾರೆ. ದೇವರು ಹಾಗೆಲ್ಲಾ ತಾರತಮ್ಯ ಮಾಡಲು ಸಾಧ್ಯವೇ?ಎಂದು ಪ್ರಶ್ನಿಸಿದರು.
ರಾಜಕಾರಣಿಗಳು ಐದು ವರ್ಷಕ್ಕೊಮ್ಮೆ ಜನರ ಬಳಿ ಹೋಗಿ ರಿನೀವಲ್ ಮಾಡಿಕೊಳ್ಳಬೇಕು. ಆದರೆ ಅಧಿಕಾರಿಗಳಿಗೆ ಈ ಪರಿಸ್ಥಿತಿ ಇಲ್ಲ. ಸರ್ಕಾರ ರೂಪಿಸುವ ಜನಪರವಾದ ಕಾರ್ಯಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ತಿಳಿಸಿದರು.
ಅವಕಾಶ ಇಲ್ಲದ ಬಹಳ ಮಂದಿ ಬುದ್ದಿವಂತರು ಸಮಾಜದಲ್ಲಿ ತುಂಬಿದ್ದಾರೆ. ಅವರಿಗೆ ಅವಕಾಶ ಸಿಕ್ಕಾಗ ಶೋಷಣೆಗೆ ಅವಕಾಶ ಇರುವುದಿಲ್ಲ ಎಂದು ಹೇಳಿದ ಮುಖ್ಯಮಂತ್ರಿ, ಸಂವಿಧಾನದ ಆಶಯಗಳು ಈಡೇರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇದನ್ನು ಸರಿಯಾಗಿ ನಿರ್ವಹಿಸೋಣ, ಕರ್ತವ್ಯಲೋಪ ಆಗುವುದು ಬೇಡ. ಸಮಾಜದ ಋಣ ನಮ್ಮ ಮೇಲಿದೆ. ಇದನ್ನು ಮರೆಯಬಾರದು ಎಂದು ಹೇಳಿದರು.
Advertisement