
ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ನಿಯಮ ಉಲ್ಲಂಘಿಸಿ ಮಳೆನೀರಿನ ಚರಂಡಿಗೆ ತ್ಯಾಜ್ಯ ನೀರನ್ನು ಬಿಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಚೆನ್ನೈನ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‌ಜಿಟಿ) ದಕ್ಷಿಣ ವಲಯ ಪೀಠ ಇತ್ತೀಚೆಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ(ಕೆಎಸ್‌ಪಿಸಿಬಿ) ನಿರ್ದೇಶನ ನೀಡಿದೆ.
ಸಾಮಾಜಿಕ ಕಾರ್ಯಕರ್ತ ಹರೀಶ್ ತೋಳಾರ್ ಅವರ ಅರ್ಜಿಯ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿಗಳಾದ ಪುಷ್ಪಾ ಸತ್ಯನಾರಾಯಣ ಮತ್ತು ಸತ್ಯಗೋಪಾಲ್ ಕೊರ್ಲಪತಿ ಅವರು, ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸೂಕ್ತ ಸಮಿತಿ ರಚಿಸುವಂತೆ ಉಡುಪಿ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ. ಅಲ್ಲದೆ ನಾಲ್ಕು ವಾರಗಳ ಅವಧಿಯಲ್ಲಿ ಈ ಕಾರ್ಯ ಪೂರ್ಣಗೊಳಿಸಲು ನಾವು ಸಮಿತಿಗೆ ನಿರ್ದೇಶಿಸುತ್ತೇವೆ" ಎಂದು ಜುಲೈ 9, 2025 ರ ಆದೇಶದಲ್ಲಿ ಹೇಳಲಾಗಿದೆ.
ಇಲ್ಲಿನ ಸೌಪರ್ಣಿಕಾ ನದಿ ಮತ್ತು ಅಗ್ನಿತೀರ್ಥಗಳ ಮಾಲಿನ್ಯವನ್ನು ತಡೆಯುವುದಕ್ಕಾಗಿ ಕೊಳಚೆನೀರು ಶುದ್ಧೀಕರಣ ಘಟಕ (ಎಸ್‌ಟಿಪಿ)ಗಳನ್ನು ತಕ್ಷಣದ ಸ್ಥಾಪಿಸಬೇಕು. ಎಲ್ಲ ವಸತಿಗೃಹ, ವಾಣಿಜ್ಯ ಮತ್ತು ಖಾಸಗಿ ಕಟ್ಟಡಗಳಿಗೆ ಒಳಚರಂಡಿ ಸಂಪರ್ಕ ಕಲ್ಪಿಸಬೇಕು ಮತ್ತು ನಾಲ್ಕು ವಾರಗಳಲ್ಲಿ ಈ ನಿರ್ದೇಶನ ಹಾಗೂ ಸೂಚನೆಗಳನ್ನು ಪಾಲಿಸಬೇಕು. ಈ ನಿರ್ದೇಶನಗಳ ಪಾಲನೆಗೆ ಜಿಲ್ಲಾಧಿಕಾರಿಗಳು ತಮ್ಮ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಬೇಕು ಎಂದು ನ್ಯಾಯಪೀಠ ತಿಳಿಸಿದೆ.
ಹಸಿರು ನ್ಯಾಯಪೀಠದ ಮಧ್ಯಂತರ ನಿರ್ದೇಶನದ ಬಗ್ಗೆ ಸಂತೋಷ ವ್ಯಕ್ತಪಡಿಸಿರುವ ಅರ್ಜಿದಾರ ಹರೀಶ್ ತೋಳಾರ್, ಮುಂದಿನ ವಿಚಾರಣೆಯಲ್ಲಿ ಇಲ್ಲಿನ ಪುಣ್ಯನದಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಪರಿಸರ ನಾಶ, ನದಿ ಮುಖಜ ಭೂಮಿಗಳ ಅಕ್ರಮ ಒತ್ತುವರಿ, ಸರ್ಕಾರಿ, ದೇವಸ್ಥಾನ ಹಾಗೂ ಸಾರ್ವಜನಿಕ ಭೂಮಿಗಳ ಅನಧಿಕೃತ ಅತಿಕ್ರಮಣ ಹಾಗೂ ಪರಭಾರೆ, ನಿಯಮ ಬಾಹಿರ ಕಟ್ಟಡ ನಿರ್ಮಾಣ ಹಾಗೂ ಭಕ್ತರ ಪವಿತ್ರ ಭಾವನೆಗಳಿಗೆ ನಿರಂತರವಾಗಿ ಆಗುತ್ತಿರುವ ಘಾಸಿಗಳು ಸೇರಿದಂತೆ ಕ್ಷೇತ್ರದ ಪಾವಿತ್ರ್ಯ ನಾಶ, ಅತಿಕ್ರಮಣ, ಪರಿಸರ ನಾಶ ಹಾಗೂ ಕಾನೂನು ಉಲ್ಲಂಘನೆಗಳ ಕುರಿತು ಘನ ನ್ಯಾಯಾಲಯಕ್ಕೆ ದಾಖಲೆಗಳ ಸಹಿತ ಮನವರಿಕೆ ಮಾಡುವುದಾಗಿ ತಿಳಿಸಿದ್ದಾರೆ.
Advertisement