
ಹುಡ್ಸ (ಉತ್ತರ ಕನ್ನಡ): ಕರಡಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ವೃದ್ಧ ವ್ಯಕ್ತಿಯನ್ನು ಗ್ರೀನ್ ಕಾರಿಡಾರ್ ಮೂಲಕ ಆಸ್ಪತ್ರೆಗೆ ಸಾಗಿಸಿ, ಅರಣ್ಯಾಧಿಕಾರಿಯೊಬ್ಬರು ಜೀವ ಉಳಿಸಿದ್ದಾರೆ.
ಜೂನ್ 21, 2025 ರಂದು, ಇದೆಗಲಿ ಗ್ರಾಮದ ನಿವಾಸಿ ತುಕಾರಾಮ್ ಗೋವಿಂದ್ ದೇಸಾಯಿ ಅವರ ಮೇಲೆ ಕರಡಿಯೊಂದು ದಾಳಿ ಮಾಡಿದ್ದು, ಈ ವೇಳೆ ಗೋವಿಂದ್ ಅವರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಗಂಭೀರವಾಗಿ ಗಾಯಗೊಂಡಿದ್ದರಿಂದ ಹೆಚ್ಚು ನಡೆಯಲು ಸಾಧ್ಯವಾಗದೆ ಅರಣ್ಯ ಪ್ರದೇಶದಲ್ಲೇ ರೋಧಿಸುತ್ತಾ ಕುಳಿತಿದ್ದಾರೆ. ಈ ವೇಳೆ ಗಸ್ತು ತಿರುಕುತ್ತಿದ್ದ ಅರಣ್ಯ ವೀಕ್ಷಕರೊಬ್ಬರು ಗೋವಿಂದ್ ದೇಸಾಯಿಯವನ್ನು ನೋಡಿದ್ದು, ಕೂಡಲೇ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಈ ವೇಳೆ ಅರಣ್ಯಾಧಿಕಾರಿ ಪ್ರವೀಣ್ ಛಲವಾದಿಯವರು ಸ್ಥಳಕ್ಕೆ ಆ್ಯಂಬುಲೆನ್ಸ್ ಕರೆಸಿದ್ದು, ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು, ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ವ್ಯಕ್ತಿಯ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಧಾರವಾಡದ ಎಸ್‌ಡಿಎಂಗೆ ಸ್ಥಳಾಂತರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ಈ ವೇಳೆ ಪ್ರವೀಣ್ ಅವರು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿ, ಗ್ರೀನ್ ಕಾರಿಡಾರ್ ಮೂಲಕ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಪರಿಣಾಮ ವೃದ್ಧ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಿಗದಿತ ಸಮಯದೊಳಗೆ ಆಸ್ಪತ್ರೆ ತಲುಪಬೇಕೆಂದು ವೈದ್ಯರು ಹೇಳಿದ್ದರು. ಅದು ಗೋಲ್ಡನ್ ಅವರ್ ಆಗಿತ್ತು 1 ಗಂಟೆಯೊಳಗೆ ರೋಗಿಯನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ಪ್ರವೀಣ್ ಅವರು ಹೇಳಿದ್ದಾರೆ.
ಇನ್ನು ವೃದ್ಧ ವ್ಯಕ್ತಿಯ ಚಿಕಿತ್ಸೆಗೆ ಅರಣ್ಯಾಧಿಕಾರಿ ತಮ್ಮ ಕೈಯಿಂದ ಬಿಲ್ ಕಟ್ಟಿದ್ದರು. ನಂತರ ಇಲಾಖೆಯಿಂದ ಮರುಪಾವತಿಸಲಾಯಿತು. ಇದೀಗ ವ್ಯಕ್ತಿ ಆರೋಗ್ಯವಾಗಿದ್ದಾರೆಂದು ವೈದ್ಯರು ಹೇಳಿದ್ದಾರೆ.
Advertisement