
ಬೆಂಗಳೂರು: ಕಳೆದ ಆರು ತಿಂಗಳಲ್ಲಿ ರಾಜ್ಯದಲ್ಲಿ 2.3 ಲಕ್ಷ ನಾಯಿ ಕಡಿತ ಪ್ರಕರಣಗಳು ದಾಖಲಾಗಿದ್ದು, ರೇಬಿಸ್ ನಿಂದ 19 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಈ ಸಂಬಂಧ ಅಧಿಕೃತ ಮಾಹಿತಿ ಬಿಡುಗಡೆಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗಿದೆ. 2024ರಲ್ಲಿ 3.6 ಲಕ್ಷ ನಾಯಿ ಕಡಿತ ಪ್ರಕರಣಗಳು ಮತ್ತು 42 ರೇಬಿಸ್ ನಿಂದ ಸಾವಿನ ಪ್ರಕರಣ ವರದಿಯಾಗಿತ್ತು.
ರಾಜ್ಯ ಆರೋಗ್ಯ ಇಲಾಖೆಯ ಸಮಗ್ರ ರೋಗ ಕಣ್ಗಾವಲು ಕಾರ್ಯಕ್ರಮದ (IDSP)ಮಾಹಿತಿ ಪ್ರಕಾರ, ರಾಜ್ಯದಲ್ಲಿ ಈ ವರ್ಷದ ಜನವರಿ 1 ಮತ್ತು ಜೂನ್ 30ರ ನಡುವೆ 2,31, 091 ನಾಯಿ ಕಡಿತ ಪ್ರಕರಣಗಳು ಹಾಗೂ 19 ರೇಬಿಸ್ ಸಾವಿನ ಪ್ರಕರಣ ದಾಖಲಾಗಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ 1,69,672 ನಾಯಿ ಕಡಿತ ಪ್ರಕರಣಗಳು, 18 ರೇಬಿಸ್ ಸಾವು ಪ್ರಕರಣ ದಾಖಲಾಗಿತ್ತು. 2023ರ ಇದೇ ಅವಧಿಗೆ ಹೋಲಿಸಿದರೆ ನಾಯಿ ಕಡಿತ ಪ್ರಕರಣಗಳು ಶೇ. 36.20 ರಷ್ಟು ಹೆಚ್ಚಾಗಿರುವುದು ಮಾಹಿತಿಯಿಂದ ತಿಳಿದುಬರುತ್ತದೆ.
ಇದೇ ವಾರ ಹುಬ್ಬಳ್ಳಿಯಲ್ಲಿ ಬೀದಿನಾಯಿಗಳು ಮೂರು ವರ್ಷದ ಬಾಲಕಿ ಮೇಲೆ ದಾಳಿ ಮಾಡಿ ಎಳೆದಾಡಿದ್ದ ವಿಡಿಯೋ ವೈರಲ್ ಆಗಿತ್ತು. ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿಲ್ಲ. ನಿಖರ ವರದಿಯಿಂದಾಗಿ ಈಗ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ಕಂಡುಬರುತ್ತಿವೆ. ಹಿಂದೆಯೂ ಕೂಡಾ ಇದೇ ರೀತಿಯ ಘಟನೆಗಳು ನಡೆದಿತ್ತು. ಆದರೆ ನಿಖರವಾಗಿ ವರದಿಯಾಗುತ್ತಿರಲಿಲ್ಲ. ಈಗ ಉತ್ತಮವಾಗಿ ವರದಿಯಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ಹೇಳಿದ್ದಾರೆ.
ಇಂತಹ ಪ್ರಕರಣಗಳ ನಿಯಂತ್ರಣಕ್ಕೆ ಇಲಾಖೆ ಸಾಕಷ್ಟು ಪ್ರಯತ್ನ ಮಾಡುತ್ತಿದ್ದು, ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ನಾಯಿ ಕಡಿತ ಸಂತ್ರಸ್ತರಿಗೆ ಹೇಗೆ ಚಿಕಿತ್ಸೆ ನೀಡಬೇಕು ಎಂದು ಡಾಕ್ಟರ್ ಗೆ ತರಬೇತಿ ನೀಡಲಾಗುತ್ತಿದೆ. ಬೀದಿ ನಾಯಿಗಳಿಗೆ ಕಡಿವಾಣ ಹಾಕುವಂತೆ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯಿತಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹರ್ಷ ಗುಪ್ತಾ ತಿಳಿಸಿದರು.
Advertisement