
ಚೆನ್ನೈ: ಬೆಂಗಳೂರು-ಸೇಲಂ ಹೆದ್ದಾರಿಯಲ್ಲಿ ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ 7 ವರ್ಷದ ಮಗು ಸೇರಿ ಮೂವರು ಸಾವನ್ನಪ್ಪಿದ್ದಾರೆ.
ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ ಸಂಭವಿಸಿದೆ. ಕುರುಬರಪಳ್ಳಿ ಬಳಿ 12ಕ್ಕೂ ಹೆಚ್ಚು ವಾಹನಗಳು ಒಂದರ ಮೇಲೊಂದರಂತೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದು, ಏಳು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.
ರಸ್ತೆ ಕಾಮಗಾರಿಯಿಂದಾಗಿ ವಾಹನಗಳು ನಿಧಾನವಾಗಿ ಸಾಗುತ್ತಿದ್ದಾಗ ಲಾರಿಯೊಂದು ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ. ಲಾರಿ, 2 ಕಾರು ಹಾಗೂ 1 ಬೈಕ್ ಒಂದಕ್ಕೊಂದು ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ 2 ಟ್ರಕ್‌ಗಳ ನಡುವೆ 2 ಕಾರು ಹಾಗೂ ಬೈಕ್ ಸಿಲುಕಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 7 ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ವೇಳೆ ಕಿಲೋಮೀಟರ್‌ಗಟ್ಟಲೆ ವಾಹನ ಸಂಚಾರ ಸ್ಥಗಿತವಾಗಿತ್ತು. ಕೂಡಲೆ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. ಭಾನುವಾರ ರಾತ್ರಿ ವೀಕೆಂಡ್ ಮುಗಿಸಿ ಬೆಂಗಳೂರಿಗೆ ಬರುತ್ತಿದ್ದ ವಾಹನಗಳ ದಟ್ಟಣೆಯೂ ಹೆಚ್ಚಾಗಿತ್ತು. ಲಾರಿ ಚಾಲಕನ ಅವಸರದಿಂದ ಅಪಘಾತ ಸಂಭವಿಸಿದೆ. ಲಾರಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
Advertisement