
ಧರ್ಮಸ್ಥಳ: ಬೆಂಗಳೂರಿನ RCB ಪಂದ್ಯದ ವೇಳೆ ವಿರಾಟ್ ಕೊಹ್ಲಿಯನ್ನು ತಬ್ಬಿಕೊಳ್ಳುವುದಾಗಿ ಸವಾಲು ಹಾಕಿ ವಿಡಿಯೋ ಮಾಡಿ ಪೊಲೀಸರಿಂದ ಎಚ್ಚರಿಕೆ ಪಡೆದಿದ್ದ ಕಬ್ಜಾ ಶರಣ್ ಇದೀಗ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ನ್ಯಾಯ ಕೋರಿ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ನಡೆಸಿದ್ದು ಈ ತಂಡವನ್ನು ಸ್ಥಳೀಯ ಗ್ರಾಮಸ್ಥರು ಮತ್ತು ಭಕ್ತರು ಧರ್ಮಸ್ಥಳದ ಮುಖ್ಯ ದ್ವಾರದಲ್ಲಿ ತಡೆಹಿಡಿದರು. ಈ ಸಂದರ್ಭದಲ್ಲಿ ಪಾದಯಾತ್ರಿಗಳು ಮತ್ತು ಗ್ರಾಮಸ್ಥರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
'ಸೌಜನ್ಯಳಿಗೆ ನ್ಯಾಯ' ಎಂಬ ಧ್ಯೆಯದೊಂದಿಗೆ ಕಲಬುರಗಿ ಜಿಲ್ಲೆಯ ಅಳಂದ ತಾಲೂಕಿನ ರುದ್ರವಾಡಿ ಗ್ರಾಮದ ಶರಣಪ್ಪ ನೇತೃತ್ವದ ತಂಡವು ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಹಮ್ಮಿಕೊಂಡಿತ್ತು. ಪಾದಯಾತ್ರೆ ಮುಗಿಸಿ ತಂಡವು ಧರ್ಮಸ್ಥಳ ಕ್ಷೇತ್ರದ ದ್ವಾರದ ಬಳಿ ಪ್ರವೇಶಿಸಲು ಮುಂದಾದಾಗ, ನೂರಾರು ಸಂಖ್ಯೆಯಲ್ಲಿ ಸೇರಿದ್ದ ಸ್ಥಳೀಯರು ಮತ್ತು ಭಕ್ತರು ಅವರನ್ನು ತಡೆದರು. ಪಾದಯಾತ್ರೆಯ ಸಂದರ್ಭದಲ್ಲಿ ಶರಣಪ್ಪ ಸಾಮಾಜಿಕ ಜಾಲತಾಣಗಳಲ್ಲಿ ಧರ್ಮಸ್ಥಳದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು 'ನಕಲಿ ದೇವಮಾನವ' ಎಂಬ ಪದ ಬಳಸಿ ನಿಂದಿಸಿದ್ದಾರೆ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಧರ್ಮಸ್ಥಳ ಪೊಲೀಸರು ನೆರೆದ ಗುಂಪನ್ನು ಚದುರಿಸಿದರು.
Advertisement