ಸಣ್ಣ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡಿದ್ದರಿಂದ ವ್ಯಾಪಾರಸ್ಥರು ಕಂಗಾಲಾಗಿದ್ದರು. ಆದರೆ ಈಗ ವಾಣಿಜ್ಯ ತೆರಿಗೆ ಇಲಾಖೆ ಗೊಂದಲ ನಿವಾರಣೆಗೆ ಮುಂದಾಗಿದ್ದು, ತೆರಿಗೆ ನೋಟಿಸ್‌ಗೆ ಗಾಬರಿಯಾಗಬೇಡಿ, ನಿಮ್ಮ ಉತ್ತರ ಅವಲಂಬಿಸಿ ದಂಡ, ಜಿಎಸ್‌ಟಿ ನಿಗದಿಯಾಗಲಿದೆ. ನೋಟಿಸ್‌ನಲ್ಲಿ ಉಲ್ಲೇಖಿಸಿರುವಷ್ಟು ಜಿಎಸ್‌ಟಿ, ದಂಡ ಪಾವತಿ ಕಡ್ಡಾಯವಲ್ಲ ಎಂದು ಹೇಳಿದೆ. ಕೋರಮಂಗಲದಲ್ಲಿರುವ ವಾಣಿಜ್ಯ ತೆರಿಗೆ ಇಲಾಖೆ ಕಚೇರಿಯಲ್ಲಿ 'ಜಿಎಸ್ಟಿ ತಿಳಿಯಿರಿ' ಸಭೆ ನಡೆಯಿತು. ಸಭೆಯಲ್ಲಿ ವ್ಯಾಪಾರಿಗಳ ಪ್ರಶ್ನೆಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಮೀರಾ ಪಂಡಿತ್ ಉತ್ತರ ನೀಡಿದರು. ಮೊದಲ ಹಂತದಲ್ಲಿ ಯುಪಿಎನಲ್ಲಿ ಕೋಟ್ಯಂತರ ರೂಪಾಯಿ ಸ್ವೀಕರಿಸಿದ ವ್ಯಾಪಾರಿಗಳಿಗೆ ನೋಟಿಸ್ ನೀಡಲಾಗಿದೆ. ನಮ್ಮ ವ್ಯಾಪ್ತಿಯಲ್ಲಿ 850 ವ್ಯಾಪಾರಿಗಳಿಗೆ ನೋಟಿಸ್ ನೀಡಲಾಗಿದ್ದು ಜಿಎಸ್ಟಿ ವಂಚನೆ ಕುರಿತು ಬೇರೆ ಬೇರೆ ಮೂಲಗಳಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ಸಂಸ್ಥೆಗಳ ಮಾಹಿತಿ ರೇರಾದಿಂದ ಪಡೆದು ನೋಟಿಸ್ ನೀಡಲಾಗುವುದು ಎಂದು ಹೇಳಿದರು.
ಧರ್ಮಸ್ಥಳದಲ್ಲಿ ರಹಸ್ಯ ಸಮಾಧಿ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಸಹೋದರ ಹರ್ಷೇಂದ್ರ ಕುಮಾರ್ ಡಿ ವಿರುದ್ಧ ಮಾನಹಾನಿಕರ ವಿಷಯವನ್ನು ಪ್ರಕಟಿಸದಂತೆ ಮಾಧ್ಯಮಗಳು ಮತ್ತು ಯೂಟ್ಯೂಬ್ ಚಾನೆಲ್‌ಗಳ ಮೇಲೆ ಬೆಂಗಳೂರು ಕೋರ್ಟ್ ನಿರ್ಬಂಧ ಹೇರಿದೆ. ಧರ್ಮಸ್ಥಳದ ಮಾಜಿ ಸ್ವಚ್ಛತಾ ಕೆಲಸಗಾರ ತಾನೂ ದೇವಾಲಯದ ಮೇಲ್ವಿಚಾಕರ ಒತ್ತಾಯದ ಮೇರೆಗೆ ಹಲವು ಶವಗಳನ್ನು ಹೂತಿರುವುದಾಗಿ ಹೇಳಿದ್ದನು. ಇದರ ಬೆನ್ನಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿಗಳ ವಿರುದ್ಧ ಅವಹೇಳನ ವಿಡಿಯೋಗಳು ಪ್ರಸಾರವಾಗದ್ದವು. ಈ ಹಿನ್ನೆಲೆಯಲ್ಲಿ ಹರ್ಷೇಂದ್ರ ಕುಮಾರ್ ಕೋರ್ಟ್ ಮೆಟ್ಟಿಲೇರಿದ್ದು ಸ್ವಚ್ಛತ ಕೆಲಸಗಾರ ನನ್ನ ಮತ್ತು ಕುಟುಂಬದವರ ಹೆಸರನ್ನು ಎಲ್ಲೂ ಹೇಳಿಲ್ಲ. ಹೀಗಿದ್ದರೂ ನಮ್ಮ ತೇಜೋವಧೆ ಮಾಡಲಾಗುತ್ತಿದೆ ಎಂದು ಕೋರ್ಟ್ ಮುಂದೆ ಅಲವತ್ತುಕೊಂಡಿದ್ದರು. ಈ ಮಧ್ಯೆ, ಧರ್ಮಸ್ಥಳ ರಹಸ್ಯ ಸಮಾಧಿ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳಿಗೆ ದೂರುಗಳ ಆಲಿಸಲು ಸಹಾಯವಾಣಿ ಆರಂಭಿಸುವಂತೆ 2003ರಲ್ಲಿ ನಾಪತ್ತೆಯಾಗಿದ್ದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯ ಭಟ್ ಅವರ ಪರ ವಕೀಲರು ಮನವಿ ಮಾಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿಯಾಗಿರುವ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಗುರುವಾರಕ್ಕೆ ಮುಂದೂಡಿದೆ. ದರ್ಶನ್ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಇಂದು ವಾದ ಮಂಡಿಸಬೇಕಿತ್ತು. ಆದರೆ ಅವರು ಗೈರಾದ ಕಾರಣ ನಟನ ಪರ ವಕೀಲ ಸಿದ್ಧಾರ್ಥ್ ದಾವೆ ಹಾಜರಾಗಿ ಕೇಸಿನ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲು ಸಮಯ ಬೇಕೆಂದು ಕೇಳಿದ್ದಕ್ಕೆ ಗುರುವಾರಕ್ಕೆ ವಿಚಾರಣೆ ಮುಂದೂಡಲಾಯಿತು. ಕಳೆದ ಗುರುವಾರ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ನಟ ದರ್ಶನ್ ಮತ್ತು ಇತರೆ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿರುವ ಹೈಕೋರ್ಟ್ ತೀರ್ಪಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಹೀಗಾಗಿ ದರ್ಶನ್ ಗೆ ಜೈಲಾ, ಬೇಲಾ ಎಂಬುದು ಗುರುವಾರ ಸ್ಪಷ್ಟವಾಗಲಿದೆ.
ಹಣಕಾಸು ಸಚಿವಾಲಯ ಲೋಕಸಭೆಯಲ್ಲಿ ಮಂಡಿಸಿದ ಅಂಕಿ-ಅಂಶಗಳ ಪ್ರಕಾರ, 2024–25ನೇ ಸಾಲಿನಲ್ಲಿ ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು ತಲಾ ಆದಾಯ ಹೊಂದಿರುವ ರಾಜ್ಯವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿ ತಲಾದಾಯ ಪ್ರಮಾಣ 2 ಲಕ್ಷ ರೂ.ಗಳನ್ನು ದಾಟಿದೆ. ಸ್ಥಿರ ಬೆಲೆಯಲ್ಲಿ ರಾಜ್ಯದ ತಲಾ ನಿವ್ವಳ ರಾಜ್ಯ ದೇಶೀಯ ಉತ್ಪನ್ನ (ಎನ್‌ಎಸ್‌ಡಿಪಿ) ರೂ. 2,04,605 ತಲುಪಿದ್ದು, 2014–15ರ ಲ್ಲಿದ್ದ ರೂ. 1,05,697 ರಿಂದ ಶೇ. 93.6 ರಷ್ಟು ಬೆಳವಣಿಗೆ ದಾಖಲಿಸಿದೆ.
ರಾಯಚೂರಿನಲ್ಲಿ ಫುಡ್ ಪಾಯಿಸನ್ ನಿಂದಾಗಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದು ಮತ್ತಿಬ್ಬರು ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರನ್ನು ರಮೇಶ್ ಅವರ ಪುತ್ರಿಯರಾದ ನಾಗಮ್ಮ ಮತ್ತು ದೀಪಾ ಎಂದು ಗುರುತಿಸಲಾಗಿದೆ. ಇನ್ನು ತಾಯಿ ಪದ್ಮಾ ಮತ್ತು ಇಬ್ಬರು ಮಕ್ಕಳನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ರಾತ್ರಿ ತಮ್ಮ ಜಮೀನಿನಲ್ಲೇ ಬೆಳೆದಿದ್ದ ತರಕಾರಿಯಿಂದ ಆಹಾರ ತಯಾರಿಸಿ ಸೇವಿಸಿದ್ದರು. ಮೂರು ದಿನಗಳ ಹಿಂದೆಯಷ್ಟೇ ಬೆಳೆಗೆ ಕೀಟನಾಶಕ ಸಿಂಪಡಿಸಲಾಗಿದ್ದು ಇದು ವಿಷಪ್ರಾಶನಕ್ಕೆ ಕಾರಣವಾಗಿರಬಹುದು ಎಂದು ಸಂಬಂಧಿಕರು ಶಂಕಿಸಿದ್ದಾರೆ.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಕೋಳಾಲದಲ್ಲಿ ಗೊಬ್ಬರ ತುಂಬಿದ್ದ ಲಾರಿಯೊಂದು ರಸ್ತೆ ಬದಿಯ ಬೇಕರಿಗೆ ನುಗ್ಗಿದ ಪರಿಣಾಮ ಮೂವರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಲಾರಿ ರಸ್ತೆ ಬದಿಯ ಬೇಕರಿಗೆ ನುಗ್ಗಿತ್ತು. ಭೀಕರ ಅಪಘಾತದಲ್ಲಿ ರಂಗಶಾಮಯ್ಯ, ಬೈಲಪ್ಪ ಸಾವನ್ನಪ್ಪಿದ್ದಾರೆ.
Advertisement