ಚಿಕ್ಕಮಗಳೂರು: ಬಾಲ್ಯ ವಿವಾಹದ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಅಂಗನವಾಡಿ ಶಿಕ್ಷಕಿ ಕುಟುಂಬಕ್ಕೆ ಗ್ರಾಮಸ್ಥರಿಂದ ಬಹಿಷ್ಕಾರ!

ಗ್ರಾಮದಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ಗರ್ಭಿಣಿಯಾಗಿದ್ದಳು. ಇದರ ಬೆನ್ನಲ್ಲೇ ಮಕ್ಕಳ ಸಹಾಯವಾಣಿ ಅಧಿಕಾರಿಗಳು ಮತ್ತು ಅಂಗನವಾಡಿ ಮೇಲ್ವಿಚಾರಕರು ಗ್ರಾಮಕ್ಕೆ ಭೇಟಿ ನೀಡಿದ್ದರು. ಬಳಿಕ ಪ್ರಕರಣ ದಾಖಲಾಗಿತ್ತು. ಇದರ ಹಿಂದೆ ನಾನಿದ್ದೇನೆಂದು ಗ್ರಾಮಸ್ಥರು ಬಹಿಷ್ಕಾರ ಹಾಕಿದ್ದಾರೆ.
Tejaswini (centre) with her husband and mother-in-law
ಅಂಗನವಾಡಿ ಶಿಕ್ಷಕಿ ತೇಜಸ್ವಿನಿ ಹಾಗೂ ಅವರ ಕುಟುಂಬ.
Updated on

ಚಿಕ್ಕಮಗಳೂರು: ಬಾಲ್ಯ ವಿವಾಹದ ಕುರಿತು ಮಾಹಿತಿ ನೀಡಿದ್ದಕ್ಕೆ ಅಂಗನವಾಡಿ ಶಿಕ್ಷಕಿಯ ಕುಟುಂಬವನ್ನು ಗ್ರಾಮಸ್ಥರು ಬಹಿಷ್ಕಾರ ಹಾಕಿರುವ ಘಟನೆ ಚಿಕ್ಕಮಂಗಳೂರು ಜಿಲ್ಲೆಯ ಕಡೂರು ತಾಲೂಕಿನ ಯರೇಹಳ್ಳಿಯಲ್ಲಿ ನಡೆದಿದೆ.

ಯರೇಹಳ್ಳಿ ಗ್ರಾಮದಲ್ಲಿ ವಾಸವಾಗಿರುವ ತೇಜಸ್ವಿನಿ ಎಂಬ ಅಂಗನವಾಡಿ ಶಿಕ್ಷಕಿ ಕೆಲ ದಿನಗಳ ಹಿಂದೆ ತಮ್ಮ ಗ್ರಾಮ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯೋರ್ವಳ ವಿವಾಹದ ಬಗ್ಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಅಂಗನವಾಡಿ ಶಿಕ್ಷಕಿಯಿಂದಾಗಿ ವಿವಾಹ ನಿಂತು ಹೋಗಿದ್ದಲ್ಲದೆ, ಬಾಲ್ಯ ವಿವಾಹಕ್ಕೆ ಪ್ರೋತ್ಸಾಹ ನೀಡಿದ್ದ ಪೋಷಕರು ಮತ್ತು ವರನ ವಿರುದ್ಧ ಪ್ರಕರಣ ದಾಖಲಾಗುವಂತಾಗಿದೆ ಎಂದು ಆರೋಪಿಸಿ ಶಿಕ್ಷಕಿ ಹಾಗೂ ಆಕೆಯ ಕುಟುಂಬಸ್ಥರಿಗೆ ಗ್ರಾಮಸ್ಥರು ಪಂಚಾಯತ್ ನಡೆಸಿ ದಂಡ ವಿಧಿಸಿದ್ದಾರೆ. ಅಲ್ಲದೆ, ಸಾಮಾಜಿಕ ಬಹಿಷ್ಕಾರವನ್ನೂ ಹಾಕಿದ್ದರು ಎಂಬ ಆರೋಪ ಕೇಳಿ ಬಂದಿದೆ.

ಅಂಗನವಾಡಿ ಶಿಕ್ಷಕಿ ಹಾಗೂ ಆಕೆಯ ಕುಟುಂಬಸ್ಥರು ಗ್ರಾಮದ ಯಾರೊಂದಿಗೂ ಮಾತನಾಡುವಂತಿಲ್ಲ, ಗ್ರಾಮದಲ್ಲಿರುವ ಯಾವುದೇ ದೇವಾಲಯವನ್ನೂ ಪ್ರವೇಶಿಸುವಂತಿಲ್ಲ ಎಂದು ಬಹಿಷ್ಕಾರ ಹಾಕಿರುವ ಗ್ರಾಮಸ್ಥರು, ಅಂಗನವಾಡಿ ಶಿಕ್ಷಕಿ ಗ್ರಾಮದಲ್ಲಿ ಕೆಲಸ ಮಾಡಬಾರದು, ಆಕೆ ಕೆಲಸಕ್ಕೆ ರಾಜೀನಾಮೆ ಕೊಡಬೇಕೆಂದು ಪಟ್ಟು ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.

ಅಲ್ಲದೆ ಗ್ರಾಮದಲ್ಲಿರುವ ಯಾರೊಬ್ಬರೂ ಅಂಗನವಾಡಿ ಶಿಕ್ಷಕಿಯ ಕುಟುಂಬಸ್ಥರೊಂದಿಗೆ ಮಾತನಾಡಬಾರದು. ಮಾತನಾಡಿದರೆ ಅವರಿಗೂ ದಂಡ ವಿಧಿಸಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ ಎಂದು ತಿಳಿದುಬಂದಿದೆ

Tejaswini (centre) with her husband and mother-in-law
ಅಂತರ್ಜಾತಿ ವಿವಾಹ: POCSO ಕೇಸ್ ದಾಖಲಿಸಲು ಪೊಲೀಸರು ನಕಾರ; ಠಾಣೆ ಎದುರೇ ವ್ಯಕ್ತಿ ಆತ್ಮಹತ್ಯೆಗೆ ಶರಣು; ತನಿಖೆಗೆ ಆದೇಶ

ಇದರ ಬೆನ್ನಲ್ಲೇ ಅಂಗನವಾಡಿ ಶಿಕ್ಷಕಿಯ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು. ಈ ಬಹಿಷ್ಕಾರ ಪದ್ಧತಿಯಿಂದ ನ್ಯಾಯ ಕೊಡಿಸಬೇಕೆಂದು ಮನವಿ ಮಾಡಿದ್ದಾರೆ.

ಗ್ರಾಮದಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ಗರ್ಭಿಣಿಯಾಗಿದ್ದಳು. ಬಳಿಕ ಮಕ್ಕಳ ಸಹಾಯವಾಣಿ ಅಧಿಕಾರಿಗಳು ಮತ್ತು ಅಂಗನವಾಡಿ ಮೇಲ್ವಿಚಾರಕರು ಗ್ರಾಮಕ್ಕೆ ಭೇಟಿ ನೀಡಿದ್ದರು. ಬಳಿಕ ಪ್ರಕರಣ ದಾಖಲಾಗಿದ್ದು, ಇದರ ಹಿಂದೆ ನಾನಿದ್ದೇನೆಂದು ಗ್ರಾಮಸ್ಥರು ಬಹಿಷ್ಕಾರ ಹಾಕಿದ್ದಾರೆ. 2024ರಿಂದಲೂ ಬಹಿಷ್ಕಾರ ಮಾಡಿದ್ದಾರೆ. ಅಂದಿನಿಂದ ಯಾರೂ ನನ್ನೊಂದಿಗೆ ಮಾತನಾಡುತ್ತಿಲ್ಲ. ದೇವಸ್ಥಾನ ಪ್ರವೇಶಿಸುವುದಕ್ಕೂ ನಿಷೇಧಿಸಿದ್ದಾರೆ. ರಾಜೀನಾಮೆ ನೀಡದಿದ್ದರೆ ಅಂಗನವಾಡಿ ಕೇಂದ್ರಕ್ಕೆ ಬೀಗ ಜಡಿಯುವುದಾಗಿ ಎಚ್ಚರಿಸಿದ್ದಾರೆ. ಈ ಹಿಂದೆ ಗ್ರಾಮದ ಪ್ರತೀ ಕುಟುಂಬಕ್ಕೂ ಒಂದು ಎಕರೆ ಭೂಮಿ ನೀಡಲಾಗಿತ್ತು. ನಮ್ಮಿಂದ ಆ ಭೂಮಿಯನ್ನು ಹಿಂಪಡೆದುಕೊಂಡಿದ್ದಾರೆಂದು ತೇಜಸ್ವಿನಿಯವರು ಹೇಳಿದ್ದಾರೆ.

ಈ ನಡುವೆ ಅಂಗನವಾಡಿ ಶಿಕ್ಷಕಿ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದ ಸುದ್ದಿ ತಿಳಿಯುತ್ತಿದ್ದಂತೆ ಬೀರೂರು ಪೊಲೀಸ್ ಠಾಣೆಯ ಪೊಲೀಸರು ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮಸ್ಥರೊಂದಿಗೆ ಸಭೆ ನಡೆಸಿದ್ದಾರೆ.

ಯಾವುದೇ ವ್ಯಕ್ತಿ, ಕುಟುಂಬಕ್ಕೆ ಬಹಿಷ್ಕಾರ ಹಾಕುವುದು ಕಾನೂನಿನಡಿಯಲ್ಲಿ ಅಪರಾಧವಾಗಿದೆ. ಈ ಕೃತ್ಯಕ್ಕೆ ಶಿಕ್ಷೆಯಾಗಲಿದೆ. ಬಹಿಷ್ಕಾರ ಪದ್ಧತಿ ಅನಿಷ್ಟ ಪದ್ಧತಿಯಾಗಿದ್ದು, ಇದಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಬಹಿಷ್ಕಾರ ಪದ್ಧತಿಯನ್ನು ಮುಂದುವರಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕೂಡಲೇ ಬಹಿಷ್ಕಾರ ಹಾಕಿರುವುದನ್ನು ಹಿಂಪಡೆದು ನೊಂದ ಕುಟುಂಬಸ್ಥರು ಗೌರವದಿಂದ ಬದುಕಲು ಅವಕಾಶ ನೀಡಬೇಕು. ಈ ಸಂಬಂಧ ಸಂತ್ರಸ್ತರಿಗೆ ಯಾವುದೇ ತೊಂದರೆ ನೀಡಬಾರದು ಎಂದು ತಿಳಿಸಿದ್ದಾರೆ.

ಬೀರೂರು ಪೊಲೀಸ್ ಇನ್ಸ್‌ಪೆಕ್ಟರ್ ಗುರುಪ್ರಸಾದ್ ಅವರು ಮಾತನಾಡಿ, ನಾಲ್ಕು ಎಕರೆ ಗೋಮಾಳ ಭೂಮಿ ವಿವಾದದಲ್ಲಿ ಶಿಕ್ಷಕಿಯ ಕುಟುಂಬ ಸಿಲುಕಿಕೊಂಡಿದೆ. ಇದು ದನಗಳ ಮೇಯಿಸಲು ಉದ್ದೇಶಿಸಲಾಗಿದ್ದ ಭೂಮಿಯಾಗಿತ್ತು. ಈ ವಿಚಾರವಾಗಿ ಇಡೀ ಗ್ರಾಮ ಒಗ್ಗಟ್ಟಾಗಿದೆ. ತೇಜಸ್ವಿನಿ ಅವರ ಪತಿ ಅಭಿಷೇಕ್ ವಿರುದ್ಧ ಐಪಿಸಿ ಸೆಕ್ಷನ್ 307 ರ ಅಡಿಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com