GST Tax: 2-3 ವರ್ಷ ಹಳೆಯ ತೆರಿಗೆ ಬಾಕಿ ವಸೂಲಿ ಮಾಡಲ್ಲ- ಸಿಎಂ ಸಿದ್ದರಾಮಯ್ಯ ಘೋಷಣೆ; ಪ್ರತಿಭಟನೆ ಹಿಂಪಡೆದ ಸಣ್ಣ ವರ್ತಕರು!

ತೆರಿಗೆ ಇಲಾಖೆಯ ಅಧಿಕಾರಿಗಳು, ವರ್ತಕ ಸಂಘದ ಪ್ರತಿನಿಧಿಗಳ ಜೊತೆ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನೋಟಿಸ್‌ ನೀಡಿದ ವರ್ತಕರಿಂದ ಬಾಕಿ ತೆರಿಗೆಯನ್ನು ವಸೂಲಿ ಮಾಡುವುದಿಲ್ಲ ಎಂದರು.
CM Siddaramaiah
ಸಿಎಂ ಸಿದ್ದರಾಮಯ್ಯ
Updated on

ಬೆಂಗಳೂರು: ಜಿಎಸ್ ಟಿ ನೋಟಿಸ್ ಪಡೆದ ವರ್ತಕರಿಂದ 3 ವರ್ಷದ ತೆರಿಗೆ ಬಾಕಿ ವಸೂಲಾತಿ ಮಾಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಬುಧವಾರ ಘೋಷಣೆ ಮಾಡಿದ್ದಾರೆ.ಈ ಹಿನ್ನೆಲೆಯಲ್ಲಿ ಜುಲೈ 25ರಂದು ಕರೆ ನೀಡಲಾಗಿದ್ದ ಹಿಂಪಡೆಯಲು ಸಣ್ಣ ವರ್ತಕರು ಒಪ್ಪಿಕೊಂಡಿದ್ದಾರೆ. ಯುಪಿಐ ಅಡಿ ರೂ. 40 ಲಕ್ಷಕ್ಕೂ ಅಧಿಕ ವಹಿವಾಟು ಮಾಡಿರುವವರಿಗೆ ರಾಜ್ಯ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆಯು ನೋಟಿಸ್‌ ಜಾರಿ ಮಾಡಿದ್ದಕ್ಕೆ ಭಾರೀ ಟೀಕೆ ವ್ಯಕ್ತವಾಗಿತ್ತು. ಬೆಂಗಳೂರು ನಗರದ ವರ್ತಕರು ಸೇರಿದಂತೆ ರಾಜ್ಯಾದ್ಯಂತ ಅಂದು ಯುಪಿಎ ಪಾವತಿ ಬಂದ್ ಮಾಡಲು ಕರೆ ನೀಡಲಾಗಿತ್ತು.

ವರ್ತಕ ಸಂಘದ ಪ್ರತಿನಿಧಿಗಳೊಂದಿಗೆ ಸಿಎಂ ಸಭೆ: ಇದರ ಬೆನ್ನಲ್ಲೇ ಇಂದು ತೆರಿಗೆ ಇಲಾಖೆಯ ಅಧಿಕಾರಿಗಳು, ವರ್ತಕ ಸಂಘದ ಪ್ರತಿನಿಧಿಗಳ ಜೊತೆ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನೋಟಿಸ್‌ ನೀಡಿದ ವರ್ತಕರಿಂದ ಬಾಕಿ ತೆರಿಗೆಯನ್ನು ವಸೂಲಿ ಮಾಡುವುದಿಲ್ಲ. ಆದರೆ ವರ್ತಕರು ನೋಂದಣಿ ಮಾಡಿಕೊಳ್ಳಬೇಕು. ಈಗ ಕೊಟ್ಟಿರುವ ನೋಟೀಸ್ ಮೇಲೆ ವಸೂಲಾತಿ, ಕ್ರಮ ಕೈಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಫ್ರೀಡಂ ಪಾರ್ಕ್‌ನಲ್ಲಿ ಮುಷ್ಕರ ಅಥವಾ ಪ್ರತಿಭಟನೆ ನಡೆಸದಂತೆ ವ್ಯಾಪಾರಿಗಳಿಗೆ ಹೇಳಿದ್ದೇನೆ. ತಮ್ಮ ಪ್ರತಿಭಟನೆಯನ್ನು ಹಿಂಪಡೆಯಲು ಅವರು ಒಪ್ಪಿದ್ದಾರೆ ಎಂದು ಮುಖ್ಯಮಂತ್ರಿ ಸುದ್ದಿಗಾರರಿಗೆ ತಿಳಿಸಿದರು.

GST ನೀತಿ ನಿಯಮಗಳ ರಚನೆಯಲ್ಲಿ ರಾಜ್ಯಗಳ ಪಾತ್ರ ಇಲ್ಲ: ಸಣ್ಣ ವ್ಯಾಪಾರಿಗಳಲ್ಲಿ ಜಿಎಸ್‌ಟಿ ನೊಟೀಸ್ ಕುರಿತು ಗೊಂದಲ ಇದೆ. ಸಾಲದ ಮೊತ್ತ ಕೂಡಾ ಇದರಲ್ಲಿ ಸೇರಿಕೊಂಡಿದೆ. ವೈಯಕ್ತಿಕ ವಹಿವಾಟು ಹಣ ಸಹ ಇದರಲ್ಲಿ ಸೇರಿದೆ. ಜಿಎಸ್‌ಟಿ ಯನ್ನು ಕೇಂದ್ರ ಹಣಕಾಸು ಸಚಿವರ ಅಧ್ಯಕ್ಷತೆಯ ಜಿಎಸ್‌ಟಿ ಕೌನ್ಸಿಲ್ ನಿರ್ಧರಿಸುತ್ತದೆ. ಇದಕ್ಕೆ ಸಂಬಂಧಿಸಿದ ಎಲ್ಲ ನೀತಿ-ನಿಯಮಾವಳಿಗಳನ್ನು ಕೇಂದ್ರ ಸರ್ಕಾರವೇ ರಚಿಸಿದೆ. ಅವುಗಳ ಪಾಲನೆ ಮಾಡುವುದಷ್ಟೇ ರಾಜ್ಯ ಸರ್ಕಾರಗಳ ಕರ್ತವ್ಯವಾಗಿದೆ ಎಂದು ವಿವರಿಸಿದರು.

ಈ ನೀತಿ-ನಿಯಮಾವಳಿಗಳ ರಚನೆಯಲ್ಲಿ ರಾಜ್ಯಗಳ ಪಾತ್ರ ಇಲ್ಲ. ರಾಜ್ಯ ಸರ್ಕಾರ ಸಂಗ್ರಹಿಸುವ ಜಿಎಸ್ ಟಿಯಲ್ಲಿ ಶೇಕಡಾ 50ರಷ್ಟು ಮೊತ್ತ ಮಾತ್ರ ರಾಜ್ಯಕ್ಕೆ ನೀಡಲಾಗುತ್ತದೆ. ಕರ್ನಾಟಕ ಸರ್ಕಾರ ತೆರಿಗೆ ಸಂಗ್ರಹವನ್ನು ಉತ್ತಮ ರೀತಿಯಲ್ಲಿ ಮಾಡುತ್ತಿದೆ. ಜಿಎಸ್ ಟಿ ಸಂಗ್ರಹದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಎಂದು ಹೇಳಿದರು.

CM Siddaramaiah
ಸಣ್ಣ ವ್ಯಾಪಾರಿಗಳಿಗೆ GST ನೋಟಿಸ್: ನಮ್ಮ ಪಾತ್ರವಿಲ್ಲ; ಕೇಂದ್ರ ಸರ್ಕಾರ ಸ್ಪಷ್ಟನೆ

ಜಿಎಸ್‌ಟಿ ನೊಟೀಸ್ ಗಳನ್ನು ನಿಯಮಾನುಸಾರವಾಗಿಯೇ ನೀಡಲಾಗಿದೆ. ಆದರೆ ವ್ಯಾಪಾರಿಗಳಿಗೆ ಪರಿಹಾರ ತೆರಿಗೆ ಪಾವತಿಸಲು ಅವಕಾಶ ನೀಡಬೇಕು. ಮಧ್ಯವರ್ತಿಗಳಿಗೆ ಅವಕಾಶ ನೀಡದೆ, ವ್ಯಾಪಾರಿಗಳು ನೇರವಾಗಿ ಇಲಾಖೆ ಸಂಪರ್ಕಿಸಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಕೆಲವು ಪ್ರತಿನಿಧಿಗಳು ಮನವಿ ಮಾಡಿದ್ದಾರೆ. ಸಣ್ಣ ವ್ಯಾಪಾರಿಗಳಿಗೆ ನೆರವಾಗುವಂತೆ ಸಹಾಯವಾಣಿ ಆರಂಭಿಸಬೇಕು. ಜಿಎಸ್‌ಟಿ ಕುರಿತು ಸರಿಯಾಗಿ ಮಾಹಿತಿ ಇಲ್ಲದ ಕಾರಣ ಗೊಂದಲ ಉಂಟಾಗಿದೆ. ಜಾಗೃತಿ ಕಾರ್ಯಕ್ರಮ ಕೈಗೊಳ್ಳಬೇಕು. ಒಂದು ಬಾರಿಗೆ ಹಳೆಯ ಬಾಕಿಯನ್ನು ಮನ್ನಾ ಮಾಡಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಯುಪಿಐ ಅಡಿ ರೂ. 40 ಲಕ್ಷಕ್ಕೂ ಅಧಿಕ ವಹಿವಾಟು ಮಾಡಿರುವವರಿಗೆ ಮಾತ್ರ ಜಿಎಸ್‌ಟಿ ನೊಟೀಸ್ ನೀಡಲಾಗಿದೆ ಎಂದು ಹೇಳಿದರು.

ಅಗತ್ಯ ವಸ್ತುಗಳಿಗೆ ತೆರಿಗೆ ವಿನಾಯಿತಿ:

ಹಾಲು, ತರಕಾರಿ, ಮಾಂಸ, ಹಣ್ಣಿನಂತಹ ಅಗತ್ಯ ಆಹಾರ ವಸ್ತುಗಳಿಗೆ ತೆರಿಗೆ ವಿನಾಯಿತಿ ಇದ್ದು, ಅಂತಹ ವ್ಯಾಪಾರಿಗಳಿಗೆ ನೊಟೀಸ್ ಕೊಟ್ಟಿದ್ದರೂ, ಅವರಿಂದ ತೆರಿಗೆ ವಸೂಲು ಮಾಡುವುದಿಲ್ಲ. ಆದರೆ ಯಾರು ಕಾಯ್ದೆ ಪ್ರಕಾರ ತೆರಿಗೆ ಕಟ್ಟಬೇಕಾಗಿದೆಯೋ ಅವರು ಕಟ್ಟಬೇಕು. ಯಾರಿಗಾದರೂ ನಿಯಮಬಾಹಿರವಾಗಿ ಹಳೆಯ ತೆರಿಗೆ ಬಾಕಿಗಾಗಿ ನೀಡಿದ್ದರೆ ಆ ಹಳೆ ತೆರಿಗೆ ಬಾಕಿಯನ್ನು ಮನ್ನಾ ಮಾಡಲಾಗುವುದು. ಆದರೆ ಅವರೆಲ್ಲರೂ ಕಡ್ಡಾಯವಾಗಿ ಜಿಎಸ್ ಟಿ ನೋಂದಣಿಮಾಡಬೇಕು ಎಂದು ಹೇಳಿದರು.

CM Siddaramaiah
ಸಣ್ಣ ವರ್ತಕರಿಗೆ GST ನೋಟಿಸ್: ಸಿಎಂ ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ವಾಗ್ದಾಳಿ; ಕೂಡಲೇ ಹಿಂಪಡೆಯಲು ಒತ್ತಾಯ!

ವ್ಯಾಪಾರಿಗಳಿಗೆ ನೆರವಾಗಲು ಸಹಾಯವಾಣಿ:

ರಾಜ್ಯದಲ್ಲಿ ಕೇವಲ 9 ಸಾವಿರ ವ್ಯಾಪಾರಿಗಳಿಗೆ ಕಳೆದ 2-3 ವರ್ಷಗಳ ಅವಧಿಗೆ ಸಂಬಂಧಿಸಿದಂತೆ 18 ಸಾವಿರ ನೊಟೀಸ್ ಜಾರಿಗೊಳಿಸಲಾಗಿದೆ. ವ್ಯಾಪಾರ ವಹಿವಾಟುಗಳನ್ನು ನಡೆಸಲು ಕಾನೂನುಬದ್ಧವಾಗಿ ಸರ್ಕಾರ ಎಲ್ಲಾ ನೆರವು ನೀಡಲಿದೆ. ತೆರಿಗೆ ಸರಿಯಾಗಿ ಪಾವತಿಸಲು ಸಹಕಾರ ನೀಡಲಿದೆ. ವ್ಯಾಪಾರಿಗಳಿಗೆ ತೊಂದರೆ ನೀಡಬೇಕೆಂಬುವುದು ಸರ್ಕಾರದ ಉದ್ದೇಶವಲ್ಲ. ಸರ್ಕಾರ ಸಣ್ಣ ವ್ಯಾಪಾರಿಗಳ ಪರವಾಗಿದೆ. ಸರ್ಕಾರ ಪಾರದರ್ಶಕವಾಗಿ ಕಾರ್ಯನಿರ್ವಹಿಸಲಿದ್ದು, ಯಾರಿಗೂ ತೊಂದರೆಯಾಗದಂತೆ ಖಾತ್ರಿಪಡಿಸಲಾಗುವುದು. ವ್ಯಾಪಾರಿಗಳಿಗೆ ನೆರವು ನೀಡಲು ಈಗಲೇ ಸಹಾಯವಾಣಿ ಇದ್ದು, ಇದನ್ನು ಇನ್ನಷ್ಟು ಪರಿಣಾಮಕಾರಿ ಮಾಡಲಾಗುವುದು ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com