ವರ್ತಕರ ಸಂಘ ಮತ್ತು FKCCI ಜೊತೆ ಸಿಎಂ ಸಿದ್ದರಾಮಯ್ಯ ನಡೆಸಿದ ಸಭೆ ಯಶಸ್ವಿಯಾಗಿದ್ದು ಜುಲೈ 25ರಂದು ಕರೆ ನೀಡಲಾಗಿದ್ದ ಬಂದ್ ವಾಪಸ್ ಪಡೆಯಲು ವರ್ತಕರು ಒಪ್ಪಿಕೊಂಡಿದ್ದಾರೆ. 40 ಲಕ್ಷಕ್ಕಿಂತ ಹೆಚ್ಚಿನ ವಹಿವಾಟು ನಡೆಸುವವರಿಗೆ ತೆರಿಗೆ ನೋಟಿಸ್ ನೀಡಲಾಗಿದ್ದು ಇದಕ್ಕೆ ಭಾರಿ ಟೀಕೆ ವ್ಯಕ್ತವಾಗಿತ್ತು. GST ನೋಟಿಸ್ ವಿರೋಧಿಸಿ ಸಣ್ಣ ವರ್ತಕರು ಜುಲೈ 25ರಂದು ಬಂದ್ ಗೆ ಕರೆ ನೀಡಿದ್ದರು. ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ವರ್ತಕರ ಜೊತೆ ಸಿದ್ದರಾಮಯ್ಯ ಸಭೆ ನಡೆಸಿದ್ದು ಸಭೆಯಲ್ಲಿ ಮೂರು ವರ್ಷಗಳ ಅರಿಯರ್ಸ್, ತೆರಿಗೆ ಪಾವತಿ ಸೇರಿದಂತೆ ಕೆಲ ಸಮಸ್ಯೆಗಳ ಕುರಿತು ಚರ್ಚೆಯಾಯಿತು. ಸದ್ಯ 3 ವರ್ಷ ಬಾಕಿ ತೆರಿಗೆ ವಸೂಲಿ ಮಾಡಲ್ಲ. ಆದರೆ ಇನ್ಮುಂದೆ ಜಿಎಸ್ ಟಿ ನೋಂದಣಿ ಕಡ್ದಾಯವಾಗಿದ್ದು, ವಿನಾಯ್ತಿ ಇದ್ದವರಿಗೆ ನೋಂದಣಿ ಅಗತ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ನಿರ್ದೇಶನದ ಮೇರೆಗೆ ರಾಜ್ಯ ಸರ್ಕಾರ ಹೊಸದಾಗಿ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯನ್ನು ಮತ್ತೊಮ್ಮೆ ನಡೆಸಲಾಗುವುದು. ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತ ಪೂರ್ವಭಾವಿ ಸಭೆಯಲ್ಲಿ ಸೆಪ್ಟಂಬರ್ 22ರಿಂದ ಅಕ್ಟೋಬರ್ 7ರವರೆಗೆ ಅಂದರೆ 15 ದಿನಗಳ ಕಾಲ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ಜಾತಿ ಗಣತಿ ಮರು ಸಮೀಕ್ಷೆ ನಡೆಸಲಿದ್ದು, ಅಕ್ಟೋಬರ್ ಅಂತ್ಯದೊಳಗೆ ವರದಿ ಸಲ್ಲಿಸುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ. ರಾಜ್ಯದ ಎಲ್ಲಾ 7 ಕೋಟಿ ಜನರ ಸಮೀಕ್ಷೆಯನ್ನು ನಡೆಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.
ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಅಕ್ರಮ ನಡೆಯುತ್ತಿದೆ ಎಂಬ ತಮ್ಮ ಆರೋಪವನ್ನು ಮತ್ತಷ್ಟು ತೀವ್ರಗೊಳಿಸಿದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, 2024 ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ ಕಳ್ಳಾಟ ನಡೆದಿದೆ ಎಂದು ಹೇಳಿದ್ದಾರೆ. ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕುರಿತು ಚರ್ಚೆಗೆ ವಿಪಕ್ಷಗಳು ಒತ್ತಾಯಿಸಿದ್ದು ಸಂಸತ್ ಭವನದ ಸಂಕೀರ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಮತಗಳ ಕಳ್ಳತನ ಹೇಗೆ ನಡೆಯುತ್ತಿದೆ ಎಂಬುದನ್ನು ಜನರ ಮುಂದೆ ಮತ್ತು ಚುನಾವಣಾ ಆಯೋಗದ ಮುಂದೆ ಶೀಘ್ರದಲ್ಲೇ ಬ್ಲ್ಯಾಕ್ ಎಂಡ್ ವೈಟ್ ಆಗಿ ಸತ್ಯವನ್ನು ತೆರೆದಿಡುತ್ತೇನೆ ಎಂದರು. ಕರ್ನಾಟಕ ಲೋಕಸಭೆ ಚುನಾವಣಾ ಪ್ರಕ್ರಿಯೆ ಬಗ್ಗೆ ಆಳವಾದ ಅಧ್ಯಯನ ನಡೆಸಿದ್ದು ಬೋಗಸ್ ವೋಟಿಂಗ್ ಬಗ್ಗೆ ಇಂಚಿಂಚು ಮಾಹಿತಿ ನಮಗೆ ಲಭ್ಯವಾಗಿದೆ. ಎಲ್ಲಾ ವಿಚಾರಗಳನ್ನು ಸದ್ಯದಲ್ಲೇ ಜನರ ಮುಂದೆ ಇಡಲಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಧರ್ಮಸ್ಥಳದಲ್ಲಿ ಮಹಿಳೆಯರ ನಾಪತ್ತೆ ಪ್ರಕರಣ, ಬಾಲಕಿಯರ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ತನಿಖೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡಕ್ಕೆ ಪೊಲೀಸ್ ವರಿಷ್ಠಾಧಿಕಾರಿಯಿಂದ ಹಿಡಿದು ಹೆಡ್ ಕಾನ್‌ಸ್ಟೆಬಲ್‌ಗಳವರೆಗೆ ವಿವಿಧ ಶ್ರೇಣಿಯ 20 ಪೊಲೀಸ್ ಅಧಿಕಾರಿಗಳನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂಎ ಸಲೀಂ ನಿಯೋಜನೆ ಮಾಡಿದ್ದಾರೆ. ಎಸ್‌ಐಟಿಯಲ್ಲಿ ಎಸ್‌ಪಿ ಶ್ರೇಣಿಯ ಅಧಿಕಾರಿ, ಇಬ್ಬರು ಉಪ ಪೊಲೀಸ್ ವರಿಷ್ಠಾಧಿಕಾರಿಗಳು, ಐದು ಪೊಲೀಸ್ ಇನ್ಸ್‌ಪೆಕ್ಟರ್‌ಗಳು, ಏಳು ಸಬ್ ಇನ್ಸ್‌ಪೆಕ್ಟರ್‌ಗಳು, ಒಬ್ಬ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಮತ್ತು ನಾಲ್ವರು ಹೆಡ್ ಕಾನ್‌ಸ್ಟೆಬಲ್‌ಗಳು ಇರಲಿದ್ದಾರೆ. ಮತ್ತೊಂದೆಡೆ, ರಹಸ್ಯ ಸಮಾಧಿ ಪ್ರಕರಣ ಸಂಬಂಧ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸಹೋದರ ಹರ್ಷೇಂದ್ರ ಕುಮಾರ್ ವಿರುದ್ಧ ವರದಿ ಮಾಡದಂತೆ ಮಾಧ್ಯಮ ಸಂಸ್ಥೆಗಳನ್ನು ನಿರ್ಬಂಧಿಸಿದ ಬೆಂಗಳೂರು ಕೋರ್ಟ್ ಆದೇಶವನ್ನು ಪ್ರಶ್ನಿಸಿ ಥರ್ಡ್ ಐ ಯುಟ್ಯೂಬರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಬೆಂಗಳೂರಿನ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಒಂದಾಗಿರುವ ಕಲಾಸಿಪಾಳ್ಯ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಸ್ಫೋಟಕಗಳು ಪತ್ತೆಯಾಗಿದೆ. ಬ್ಯಾಗ್ ನಲ್ಲಿ 6 ಜಿಲೆಟಿನ್ ಕಡ್ಡಿಗಳು ಸೇರಿದಂತೆ ಡಿಟೋನೇಟರ್‌ಗಳು ಪತ್ತೆಯಾಗಿವೆ. ಬಸ್ ನಿಲ್ದಾಣದ ಶೌಚಾಲಯದಲ್ಲಿ ಬ್ಯಾಗ್ ಪತ್ತೆಯಾಗಿದ್ದು ಸ್ಥಳಕ್ಕೆ ಪೊಲೀಸರು, ಶ್ವಾನ ದಳ, ಬಾಂಬ್ ಪತ್ತೆ ಹಾಗೂ ಬಾಂಬ್ ನಿಷ್ಕ್ರಿಯ ದಳ ದೌಡಾಯಿಸಿ ಪರಿಶೀಲನೆ ನಡೆಸಿದೆ. ಬಸ್ ನಿಲ್ದಾಣಕ್ಕೆ ಜಿಲೆಟಿನ್ ಕಡ್ಡಿ ತಂದಿಟ್ಟಿದ್ದು ಯಾರು? ಯಾವ ಉದ್ದೇಶಕ್ಕಾಗಿ ಇದನ್ನು ತರಲಾಗಿತ್ತು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
Advertisement