ನಟಿ ರಮ್ಯಾಗೆ ಅಶ್ಲೀಲ ಕಾಮೆಂಟ್: ಪ್ರಮೋದ ಗೌಡ ಸೇರಿ 43 ಜನರ ವಿರುದ್ಧ FIR ದಾಖಲು
ಬೆಂಗಳೂರು: ಸಾಮಾಜಿಕ ಮಾಧ್ಯಮಗಳಲ್ಲಿ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರಿಗೆ ಅವಹೇಳನಕಾರಿ ಹಾಗೂ ಅಶ್ಲೀಲ ಸಂದೇಶ ಕಳುಹಿಸಿದ ಆರೋಪದ ಮೇಲೆ ನಟ ದರ್ಶನ್ ಅವರ 43 ಅಭಿಮಾನಿಗಳ ವಿರುದ್ಧ ಬೆಂಗಳೂರು ಪೊಲೀಸರು ಸೋಮವಾರ ರಾತ್ರಿ ಎಫ್ಐಆರ್ ದಾಖಲಿಸಿದ್ದಾರೆ.
ತಮ್ಮ ವಿರುದ್ಧ ಅಶ್ಲೀಲ ಕಾಮೆಂಟ್ ಮಾಡಿದ ದರ್ಶನ್ ಫ್ಯಾನ್ಸ್ ವಿರುದ್ಧ ಕಿಡಿಕಾರಿರುವ ನಟಿ ರಮ್ಯಾ ಅವರು, ಮಹಿಳಾ ಆಯೋಗ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು.
ರಮ್ಯಾ ನೀಡಿದ ದೂರಿನ ಆಧಾರದ ಮೇಲೆ ಪ್ರಮೋದ ಗೌಡ ಎಂಬ ವ್ಯಕ್ತಿ ಸೇರಿ 43 ಅಕೌಂಟ್ ಗಳ ವಿರುದ್ಧ ಎಫ್ಐಆರ್(FIR) ದಾಖಲಾಗಿದೆ.
ಕೇಂದ್ರ ವಿಭಾಗದ ಸೆನ್ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ 67, 66 ಹಾಗೂ ಬಿಎನ್ಎಸ್ 351(2), 351(3), 352, 75(1)(4), 79 ಅಡಿ ಪ್ರಕರಣ ದಾಖಲು ಆಗಿದೆ.
ಇಂದು ಸಂಜೆ ಪೊಲೀಸ್ ಆಯುಕ್ತರಿಗೆ ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಮ್ಯಾ, ನಾನೊಂದು ಸುಪ್ರೀಂಕೋರ್ಟ್ ಆದೇಶವನ್ನು ಶೇರ್ ಮಾಡಿದ್ದೆ. ಅದಕ್ಕೆ ಪ್ರತಿಯಾಗಿ ತುಂಬಾ ಕೆಟ್ಟದಾಗಿ ಮೆಸೇಜ್ ಹಾಕಿ, ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ. ರೇಣುಕಾಸ್ವಾಮಿ ಬದಲು ನಿಮ್ಮನ್ನು ಕೊಲೆ ಮಾಡ್ಬೇಕಿತ್ತು. ನಿಮ್ಮನ್ನು ಅತ್ಯಾಚಾರ ಮಾಡ್ತೀವಿ ಎಂದೆಲ್ಲಾ ಸಂದೇಶ ಕಳುಹಿಸಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ