
ಹಂಪಿ/ಹೊಸಪೇಟೆ: ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಇದರಿಂದ ಹೊಸಪೇಟೆ ಹೊರವಲಯದಲ್ಲಿರುವ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ತುಂಗಭದ್ರಾ ಜಲಾಶಯದಿಂದ ನದಿಗೆ ನದಿಗೆ 1,00,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ಪರಿಣಾಮ ಪುರಂದರದಾಸ ಮಂಟಪ, ಚಕ್ರತೀರ್ಥ, ರಾಮ ಸೀತಾ ದೇವಸ್ಥಾನ ಸೇರಿದಂತೆ ಅನೇಕ ಹಂಪಿ ಸ್ಮಾರಕಗಳು ಮುಳುಗಡೆಯಾಗಿವೆ.
ತುಂಗಭದ್ರಾ ನದಿ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆಯಿಂದಾಗಿ, ಜಲಾಶಯಕ್ಕೆ 90,000 ಕ್ಯೂಸೆಕ್‌ಗಳಿಗೂ ಹೆಚ್ಚು ನೀರಿನ ಒಳಹರಿವು ಬಂದಿದೆ.
ಅಣೆಕಟ್ಟಿನ ಕ್ರೆಸ್ಟ್ ಗೇಟ್‌ಗಳನ್ನು ತೆರೆದು ಹೆಚ್ಚುವರಿ ನೀರನ್ನು ನದಿಗೆ ಬಿಡುವ ಮೂಲಕ ಸಂಗ್ರಹಣಾ ಸಾಮರ್ಥ್ಯವನ್ನು 105 ಟಿಎಂಸಿಯಿಂದ 70 ಟಿಎಂಸಿಗೆ ಇಳಿಸಲು ತಜ್ಞರ ತಂಡ ಸೂಚಿಸಿದೆ.
ಕಳೆದ 24 ಗಂಟೆಗಳಲ್ಲಿ, ಅಣೆಕಟ್ಟಿನ ಕ್ರೆಸ್ಟ್ ಗೇಟ್‌ಗಳಿಂದ 1,10,000 ಕ್ಯೂಸೆಕ್‌ಗಳಿಗೂ ಹೆಚ್ಚು ನೀರನ್ನು ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನದಿಗೆ ನೀರು ಬಿಡುಗಡೆ ಮಾಡಿದ ಪರಿಣಾಮ ಹಂಪಿಯ ಅನೇಕ ಸ್ಮಾರಕಗಳು ಮುಳುಗಡೆಯಾಗಿದ್ದು, ಈ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೆ ಪ್ರಸಿದ್ಧ ಹಂಪಿ ಸ್ಮಾರಕಗಳಾದ ಪುರಂದರದಾಸ ಮಂಟಪ, ಚಕ್ರತೀರ್ಥ ದೇವಸ್ಥಾನ ಮತ್ತು ಇತರ ಕೆಲವು ಸ್ಮಾರಕಗಳ ಪ್ರವೇಶಕ್ಕೆ ವಿಜಯನಗರ ಜಿಲ್ಲಾ ಅಧಿಕಾರಿಗಳು ನಿರ್ಬಂಧ ಹೇರಿದ್ದಾರೆ.
ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜಲಾನಯನ ಪ್ರದೇಶಳಿಗೆ ಪ್ರವಾಹದ ಎಚ್ಚರಿಕೆ ನೀಡಲಾಗಿದೆ ಎಂದು ತುಂಗಭದ್ರಾ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ 90,0000 ರಿಂದ 1,40,000 ಕ್ಯೂಸೆಕ್ ನೀರನ್ನು ತುಂಗಭದ್ರಾ ನದಿಗೆ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಅಣೆಕಟ್ಟಿನ ಪ್ರಸ್ತುತ ಸಂಗ್ರಹ 75.709 ಟಿಎಂಸಿ ಮತ್ತು ಒಟ್ಟು ಸಾಮರ್ಥ್ಯ 105.788 ಟಿಎಂಸಿಗೆ ಹತ್ತಿರದಲ್ಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ನೀರಿಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳನ್ನು ನಿಲ್ಲಿಸುವಂತೆ ಮಂಡಳಿಯು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಸೂಚನೆಗಳ ಪ್ರಕಾರ, ಜಲಾನಯನ ಪ್ರದೇಶದಲ್ಲಿನ ಹಂಪಿ ಸ್ಮಾರಕಗಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಇದಲ್ಲದೆ, ಮುಂದಿನ ಆದೇಶದವರೆಗೆ ಈಜು, ಮೀನುಗಾರಿಕೆ ಮತ್ತು ಇತರ ಚಟುವಟಿಕೆಗಳನ್ನು ಸಹ ನಿಷೇಧಿಸಲಾಗಿದೆ. ಪ್ರವಾಸಿಗರು ಮಾರ್ಗಸೂಚಿಗಳನ್ನು ಪಾಲಿಸುವಂತೆ ಅಧಿಕಾರಿಗಳು ವಿನಂತಿಸಿದ್ದಾರೆ.
ಪುರಂದರದಾಸ ಮಂಟಪ, ಚಕ್ರತೀರ್ಥ ಮತ್ತು ಕೋದಂಡ ರಾಮ ದೇವಾಲಯದಂತಹ ಹಂಪಿ ಸ್ಮಾರಕಗಳಿಗೆ ಪ್ರವೇಶವನ್ನು ನಿಲ್ಲಿಸಲಾಗಿದೆ ಎಂದು ಸ್ಥಳೀಯ ಪ್ರವಾಸಿ ಮಾರ್ಗದರ್ಶಿ ವಿರೂಪಾಕ್ಷಿ ವಿ ಹಂಪಿ ಹೇಳಿದ್ದಾರೆ.
ನಮ್ಮ ಮಾರ್ಗದರ್ಶಿಗಳ ಸಂಘವು ಕೆಲವು ಸ್ಥಳಗಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಪ್ರವಾಸಿಗರಿಗೆ ತಿಳಿಸಿದೆ. ಆಡಳಿತದ ಮಾರ್ಗಸೂಚಿಗಳನ್ನು ಪಾಲಿಸುವಂತೆ ಕೇಳಿಕೊಂಡಿದೆ ಎಂದು ಅವರು ಹೇಳಿದ್ದಾರೆ.
ಏತನ್ಮಧ್ಯೆ, ಬಳ್ಳಾರಿ ಜಿಲ್ಲಾಡಳಿತವು ಮುಂದಿನ ಆದೇಶಗಳನ್ನು ನೀಡುವವರೆಗೆ ಕಂಪ್ಲಿ ಮತ್ತು ಗಂಗಾವತಿ ಪಟ್ಟಣವನ್ನು ಸಂಪರ್ಕಿಸುವ ಸೇತುವೆಯನ್ನು ಬಂದ್ ಮಾಡಿದೆ.
Advertisement