ಭಾರೀ ಮಳೆ: ವಿರಾಜಪೇಟೆ, ಕರಡಿಗೋಡುವಿನಲ್ಲಿ ನೆರವು ಕೇಂದ್ರ ತೆರೆದ ಅಧಿಕಾರಿಗಳು
ಮಡಿಕೇರಿ: ಕೊಡಗಿನ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಮಡಿಕೇರಿಯಲ್ಲಿ ಚಳಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ವಿರಾಜಪೇಟೆ ಮತ್ತು ಕರಡಿಗೋಡು ಸೇರಿದಂತೆ ದುರ್ಬಲ ಪ್ರದೇಶಗಳಲ್ಲಿ ನೆರವು ಕೇಂದ್ರಗಳನ್ನು ತೆರೆಯಲಾಗಿದೆ.
ಕೊಡಗಿನಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು, ಹಲವಾರು ವಿದ್ಯುತ್ ಕಂಬಗಳು ಉರುಳಿಬಿದ್ದಿವೆ. ಪರಿಣಾಮ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕಳೆದ ನಾಲ್ಕು ದಿನಗಳಿಂದ ವಿದ್ಯುತ್ ಕಡಿತಗೊಂಡಿದೆ.
ಮಳೆಯ ಪರಿಣಾಮ ಸುರ್ಲಬ್ಬಿ ಸರ್ಕಾರಿ ಶಾಲೆಯ ಅಂಗಳದ ಛಾವಣಿಯ ಹೆಂಚು ಕುಸಿದುಬಿದ್ದಿದೆ. ಅದೇ ರೀತಿ, ಡಿ ಚೆನ್ನಮ್ಮ ಕಾಲೇಜು ಕಟ್ಟಡದ ಛಾವಣಿಯ ಮೇಲೆ ಮರ ಉರುಳಿಬಿದ್ದ ಪರಿಣಾಮ ಕಟ್ಟಡಕ್ಕೂ ಹಾನಿಯಾಗಿದೆ.
ಜಿಲ್ಲೆಯಾದ್ಯಂತ ಹಲವಾರು ಅಂಗನವಾಡಿಗಳು ದುರ್ಬಲ ಸ್ಥಿತಿಯಲ್ಲಿದ್ದು, ಪರಿಹಾರ ಕಾರ್ಯಗಳ ನಂತರವೇ ಅವುಗಳನ್ನು ತೆರೆಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ವಿರಾಜಪೇಟೆ ತಾಲ್ಲೂಕಿನ ಹಲವಾರು ಪ್ರದೇಶಗಳಲ್ಲಿ ಪ್ರವಾಹ ಎಚ್ಚರಿಕೆ ಘೋಷಿಸಲಾಗಿದ್ದು, ಶಾಸಕ ಎ ಎಸ್ ಪೊನ್ನಣ್ಣ ಅವರು, ಸ್ಥಳೀಯ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ವಿನಂತಿಸಿದ್ದಾರೆ. ವಿರಾಜಪೇಟೆಯಲ್ಲಿ ಪರಿಹಾರ ಕೇಂದ್ರವನ್ನು ತೆರೆಯಲಾಗಿದೆ ಎಂದೂ ತಿಳಿಸಿದ್ದಾರೆ.
ತಗ್ಗು ಪ್ರದೇಶಗಳಲ್ಲಿ ಮತ್ತು ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ವಾಸಿಸುವ ಗ್ರಾಮಸ್ಥರು ನೆರವು ಕೇಂದ್ರಕ್ಕೆ ತೆರಳುವಂತೆ ಮನವಿ ಮಾಡಿದ್ದಾರೆ. ಎಲ್ಲೆಡೆ ಮುನ್ನೆಚ್ಚರಿಕಾ ಕ್ರಮಗಳ ಕೈಗೊಳ್ಳಲಾಗುತ್ತಿದ್ದು, ಕಾರ್ಯಪಡೆಗಳು ನಿವಾಸಿಗಳ ಸುರಕ್ಷತೆಯನ್ನು ಖಚಿತಪಡಿಸುತ್ತಿವೆ ಎಂದು ಹೇಳಿದ್ದಾರೆ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ