15 ದಿನದಲ್ಲಿ 1.35 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಸರಬರಾಜು, ಕೇಂದ್ರ ಸಚಿವರ ಭರವಸೆ: ಬೊಮ್ಮಾಯಿ

ಮುಂಗಾರು ಹಾಗೂ ಮುಂಗಾರು ಪೂರ್ವ ಮಳೆ ಈ ವರ್ಷ ಚನ್ನಾಗಿ ಬಂದಿರುವುದರಿಂದ ಬಹಳಷ್ಟು ದೊಡ್ಡ ಪ್ರಮಾಣದಲ್ಲಿ ರೈತರು ಮೆಕ್ಕೆಜೋಳ ಬೆಳೆಯುತ್ತಿದ್ದಾರೆ. ಮೆಕ್ಕೆ ಜೋಳ ಬಿತ್ತನೆ ಪ್ರದೇಶ ಈ ವರ್ಷ ಶೇ 1.5 ರಷ್ಟು ಹೆಚ್ಚಳವಾಗಿದೆ.
Basavaraj Bommai
ಬಸವರಾಜ ಬೊಮ್ಮಾಯಿ
Updated on

ನವದೆಹಲಿ: ಇನ್ನೂ ಹತ್ತು-ಹದಿನೈದು ದಿನಗಳಲ್ಲಿ ಕರ್ನಾಟಕ ರಾಜ್ಯಕ್ಕೆ ಅಗತ್ಯವಿರುವ 1.35 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಗೊಬ್ಬರವನ್ನು ಪೂರೈಸುವುದಾಗಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಜೆ.ಪಿ.ನಡ್ಡಾ ಭರವಸೆ ನೀಡಿದ್ದಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರನ್ನು ಬಿಜೆಪಿ ಸಂಸದರೊಂದಿಗೆ ಭೇಟಿ ಮಾಡಿ, ಸಮಾಲೋಚನೆ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ರೈತರಿಗೆ ಸಕಾಲಕ್ಕೆ ಯೂರಿಯಾ ಗೊಬ್ಬರ ಸಿಗುತ್ತಿಲ್ಲ. ಮುಂಗಾರು ಹಾಗೂ ಮುಂಗಾರು ಪೂರ್ವ ಮಳೆ ಬಂದಿರುವುದರಿಂದ ದೊಡ್ಡ ಪ್ರಮಾಣದಲ್ಲಿ ರೈತರು ಮೆಕ್ಕೆಜೋಳ ಬೆಳೆಯುತ್ತಿದ್ದಾರೆ ಎಂದರು.

ಕರ್ನಾಟಕದಲ್ಲಿ ರೈತರಿಗೆ ಸಕಾಲಕ್ಕೆ ಯುರಿಯಾ ಗೊಬ್ಬರ ಸಿಗುತ್ರಿಲ್ಲ. ಇದು ದಿಡೀರ್ ಉದ್ಭವಿಸಿದ ಸಮಸ್ಯೆ ಅಲ್ಲ. ಮುಂಗಾರು ಹಾಗೂ ಮುಂಗಾರು ಪೂರ್ವ ಮಳೆ ಈ ವರ್ಷ ಚನ್ನಾಗಿ ಬಂದಿರುವುದರಿಂದ ಬಹಳಷ್ಟು ದೊಡ್ಡ ಪ್ರಮಾಣದಲ್ಲಿ ರೈತರು ಮೆಕ್ಕೆಜೋಳ ಬೆಳೆಯುತ್ತಿದ್ದಾರೆ. ಮೆಕ್ಕೆ ಜೋಳ ಬಿತ್ತನೆ ಪ್ರದೇಶ ಈ ವರ್ಷ ಶೇ 1.5 ರಷ್ಟು ಹೆಚ್ಚಳವಾಗಿದೆ. ಅಷ್ಟು ಪ್ರಮಾಣದಲ್ಲಿ ಬಿತ್ತನೆಯಾಗಿರುವುದು ಕೃಷಿ ಇಲಾಖೆಗೆ ಗೊತ್ತಿದೆ. ಅದನ್ನು ಇಲಾಖೆ ಒಪ್ಪಿಕೊಂಡಿದೆ. ಸಾಮಾನ್ಯವಾಗಿ ಯುರಿಯಾ ಬಹಳ ಬೇಡಿಕೆ ಜುಲೈ ನಿಂದ ಪ್ರಾರಂಭವಾಗಿ ಆಗಸ್ಟ್ ವರೆಗೂ ಇರುತ್ತದೆ. ಆದರೆ, ಸಮಯಕ್ಕೆ ಸರಿಯಾಗಿ ಮಳೆ ಆಗಿರುವುದರಿಂದ ಜೂನ್ ಮೂರನೇ ವಾರದಿಂದಲೇ ಗೊಬ್ಬರದ ಬೇಡಿಕೆ ಪ್ರಾರಂಭವಾಗಿದೆ ಎಂದರು.

ಸಾಮಾನ್ಯವಾಗಿ ರೈತರು ಒಂದು ಬಾರಿ ಯೂರಿಯಾ ಗೊಬ್ಬರ ಹಾಕುತ್ತಾರೆ. ಆದರೆ, ಈ ಬಾರಿ ಒಂದು ಸಾರಿ ಹಾಕಿದ ನಂತರ ಮಳೆಯಾಗಿ ಮತ್ತೊಂದು ಸಾರಿ ಹಾಕಿದಾಗಲೂ ಮಳೆಯಾಗಿ ಮೂರು ಬಾರಿ ಗೊಬ್ಬರ ಹಾಕುವ ಪರಿಸ್ಥಿತಿ ನಿರ್ಮಾಣ ಆಗಿದೆ. ಪದೇ ಪದೇ ಯುರಿಯಾ ಹಾಕುವುದರಿಂದ ರೈತರಿಗೆ ಅರ್ಥಿಕ ಸಂಕಷ್ಟ ಬಂದೊದಗಿದೆ. ಅದಲ್ಲದೇ ಗೋವಿನ ಜೋಳದಲ್ಲಿ ಕಸ ಬೆಳೆದಿದ್ದರಿಂದ ಕೂಲಿ ಕಾರ್ಮಿಕರ ಕೊರತೆಯಿಂದ ಅದಕ್ಕೂ ಔಷಧ ಹೊಡೆಯುವ ಪರಿಸ್ಥಿತಿ ಬಂದಿದೆ. ಇದರಿಂದ ರೈತರಿಗೆ ಸಾಕಷ್ಟು ಆರ್ಥಿಕ ಹೊರೆಯಾಗುತ್ತಿದೆ. ಇದರ ಹೊರತಾಗಿ ಗೊಬ್ಬರ ಡೀಲರ್ ಅಂಗಡಿಗಳ ಮುಂದೆ ಹಗಲು ರಾತ್ರಿ ನಿಲ್ಲುವುದರಿಂದ ಬಹಳ ಕ್ಷೋಭೆ ಉಂಟಾಗಿದೆ ಇದರಿಂದ ರೈತರು ಬಹಳ ಉಗ್ರವಾಗಿ ಪ್ರತಿಭಟಿಸಿದ್ದಾರೆ. ಈ ಸಮಸ್ಯೆ ಸುಮಾರು ಎಂಟತ್ತು ಜಿಲ್ಲೆಗಳಲ್ಲಿ ತೀರ್ವವಾಗಿದೆ. ಮೂರ್ನಾಲ್ಕು ಜಿಲ್ಲೆಗಳಲ್ಲಿ ಸಾಮಾನ್ಯವಾಗಿದೆ.

ಕೃಷಿ ಇಲಾಖೆ ಹವಾಮಾನದಲ್ಲಿ ಆಗಿರುವ ಬದಾವಣೆಯನ್ನು ತಿಳಿದುಕೊಂಡು ಬಫರ್ ಸ್ಟಾಕ್ ಇಟ್ಟುಕೊಳ್ಳಬೇಕಿತ್ತು. ಕಳೆದ ವರ್ಷ ಎಷ್ಟು ಗೊಬ್ಬರ ಬಳಕೆಯಾಗಿತ್ತು ಅದನ್ನು ಲೆಕ್ಕ ಹಾಕಿ ಈ ವರ್ಷದ ಅಗತ್ಯತೆಯನ್ನು ಅರಿತುಕೊಂಡು ಶೇಖರಣೆ ಮಾಡಿಟ್ಟುಕೊಳ್ಳಬೇಕಿತ್ತು. ಕೇಂದ್ರ ಸರ್ಕಾರ ಒದಗಿಸಿರುವ ಗೊಬ್ಬರವನ್ನು ಹಂಚುವ ಕೆಲಸ ರಾಜ್ಯ ಸರ್ಕಾರದ್ದು, ಕೇಂದ್ರ ಸರ್ಕಾರ ಗೊಬ್ಬರವನ್ನೂ ರೈಲ್ಬೆ ವ್ಯಾಗನ್ ಕೊಟ್ಟು ಹತ್ತಿರದ ಯಾರ್ಡ್ ವರೆಗೂ ಎಲ್ಲ ಜವಾಬ್ದಾರಿ ಕೇಂದ್ರ ಸರ್ಕಾರ ನೋಡಿಕೊಳ್ಳುತ್ತದೆ. ಅಲ್ಲಿಂದ ರಾಜ್ಯ ಸರ್ಕಾರ ವಿತರಣೆ ಮಾಡಬೇಕು. ಗೊಬ್ಬರ ವಿತರಣೆಯಲ್ಲಿ ಅವ್ಯವಸ್ಥೆ ಆಗಿದೆ. ಕೃಷಿ ಇಲಾಖೆ ರೈತರ ಅಂದಾಜು ಬೇಡಿಕೆಯನ್ನು ಅರಿತುಕೊಳ್ಳಲು ವಿಫಲವಾಗಿದೆ.

ರಾಜ್ಯದಲ್ಲಿ ಗೊಬ್ಬರ ವಿತರಣೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ.‌ ಕರ್ನಾಟಕದಲ್ಲಿ ಗೊಬ್ಬರ ಇದೆ. ಆದರೆ, ರೈತರಿಗೆ ಸಿಗುತ್ತಿಲ್ಲ. ಶ್ರೀಮಂತ ರೈತರು ಹೆಚ್ಚುವರಿ ದುಡ್ಡು ಕೊಟ್ಟು ಗೊಬ್ಬರ ಖರಿದಿಸುತ್ತಿದ್ದಾರೆ. ಆದರೆ, ಸಣ್ಣ ಮತ್ತು ಅತಿ ಸಣ್ಣ ರೈತರು ಅಂಗಡಿಗಳ ಮುಂದೆ ಗೊಬ್ಬರಕ್ಕಾಗಿ ಸಾಲಿನಲ್ಲಿ ನಿಂತಿದ್ದಾರೆ. ಅನಧಿಕೃತವಾಗಿ ಗೊಬ್ಬರ ದಾಸ್ತಾನು ಮಾಡಿ, ಕಾಳ ಸಂತೆ ಮೂಲಕ ಹೆಚ್ಚುವರಿ ದರಕ್ಕೆ ಗೊಬ್ಬರ ಮಾರಾಟ ಮಾಡಲಾಗುತ್ತಿದೆ. ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ. ಯಾವ ಜಿಲ್ಲೆಯಲ್ಲಿ ಎಷ್ಟು ಬೇಡಿಕೆ ಇದೆ ಎನ್ನುವ ಮಾಹಿತಿ ಅಧಿಕಾರಿಗಳಿಗಿಲ್ಲ. ಆಡಳಿತದ ಅವ್ಯವಸ್ಥೆಯಿಂದ ರೈತರಿಗೆ ಸಂಕಷ್ಟ ಎದುರಾಗಿದೆ.

Basavaraj Bommai
ರೈತರಿಗೆ ನಕಲಿ ರಸಗೊಬ್ಬರ, ಬಿತ್ತನೆ ಬೀಜ ಪೂರೈಕೆ: ಕಂಪನಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು- ಬಿಜೆಪಿ ಒತ್ತಾಯ

ಕರ್ನಾಟಕದಲ್ಲಿ 1.35 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ದಾಸ್ತಾನಿದೆ. ಅದನ್ನು ಸರಿಯಾಗಿ ನಿರ್ವಹಣೆ ಮಾಡಿದರೆ ತುರ್ತಾಗಿ ರೈತರಿಗೆ ಬೇಕಾಗಿರುವ ಗೊಬ್ಬರದ ಸಮಸ್ಯೆಗೆ ಪರಿಹಾರ ಸಿಗಲಿದೆ. ರಾಜ್ಯ ಸರ್ಕಾರ ಸೊಸೈಟಿಗಳ ಮೂಲಕ ರೈತರಿಗೆ ಹಂಚಬೇಕು. ಬೇರೆ ಗೊಬ್ಬರ ತೆಗೆದುಕೊಂಡರೆ ಮಾತ್ರ ಯೂರಿಯಾ ಗೊಬ್ಬರ ಕೊಡುತ್ತೇವೆ ಎಂದು ಯಾವುದೇ ರೀತಿಯ ಒತ್ತಡ ಮಾಡಬಾರದು ಎಂದು ಕೇಂದ್ರ ಸರ್ಕಾರದ ಆದೇಶ ಇದೆ. ಆ ರೀತಿ ಬೇರೆ ಗೊಬ್ಬರದ ಲಿಂಕ್ ಮಾಡಿ ಮಾರಾಟ ಮಾಡುವವರ ಪರವಾನಗಿ ರದ್ದು ಪಡೆಸುವಂತೆ‌ ಕೇಂದ್ರ ಸರ್ಕಾರ ಸೂಚನೆ ಕೊಟ್ಟಿದೆ. ಆದರೆ, ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ರೈತರು ಈಗಾಗಲೇ ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರ ಅವರ ಮೇಲೆ ಮತ್ತೊಂದು ಹೊರೆ ಹಾಕುತ್ತಿದೆ. ರಾಜ್ಯ ಸರ್ಕಾರ ಯಾವುದೇ ಬೇರೆ ಗೊಬ್ಬರದ ಲಿಂಕ್ ಮಾಡದೇ ರೈತರಿಗೆ ಯೂರಿಯಾ ಗೊಬ್ಬರ ಸರಬರಾಜು ಮಾಡಬೇಕು ಎಂದು ಆಗ್ರಹಿಸುತ್ತೇನೆ.

ಮುಂಗಾರು ಹಂಗಾಮಿಗೆ 11.17 ಲಕ್ಷ ಮೆಟ್ರಿಕ್ ಟನ್ ಗೊಬ್ಬರದ ಬೇಡಿಕೆ ಇದೆ. ಜುಲೈ ಅಂತ್ಯದವರೆಗೆ 6.25 ಲಕ್ಷ ಮೆಟ್ರಿಕ್ ಟನ್ ಕೊಡಬೇಕು. ಈಗಾಗಲೇ 5.35 ಲಕ್ಷ ಮೆಟ್ರಿಕ್ ಟನ್ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಇದುವರೆಗೂ 8.82 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಇದೆ. ಅದರಲ್ಲಿ ಕರ್ನಾಟಕ ಸರ್ಕಾರ 7.74 ಲಕ್ಷ ಮೆಟ್ರಿಕ್ ಟನ್ ವಿತರಣೆಯಾಗಿದೆ ಎಂದು ವರದಿ ಕಳುಹಿಸಿದೆ. ಅಂದರೆ ಅವರು 6.25 ಲಕ್ಷ ಮೆಟ್ರಿಕ್ ಟನ್ ವಿತರಣೆ ಬದಲು 7.74 ಲಕ್ಷ ಮೆಟ್ರಿಕ್ ಟನ್ ವಿತರಣೆ ಮಾಡಿದ್ದಾರೆ ಎಂದರೆ ಅವರ ಬಳಿ ಬಫರ್ ಸ್ಟಾಕ್ ಇತ್ತು ಎಂದರ್ಥ.

ಈಗ ಕೇಂದ್ರ ಸರ್ಕಾರ ಕೊಡಬೇಕಾಗಿರುವುದು 1.35 ಲಕ್ಷ ಮೆಟ್ರಿಕ್ ಟನ್.ನಾವು ಇಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಜೆ.ಪಿ. ನಡ್ಡಾ ಅವರನ್ನು ನಿಯೋಗದಲ್ಲಿ ಭೇಟಿ ಮಾಡಿ ರಾಜ್ಯದಲ್ಲಿನ‌ ಗೊಬ್ಬರದ ಸಮಸ್ಯೆ ಕುರಿತು ಚರ್ಚೆ ಮಾಡಿದ್ದೇವು. ಅವರು ತಕ್ಷಣ ಅಧಿಕಾರಿಗಳ ಜೊತೆ ಚರ್ಚಿಸಿ ಕರ್ನಾಟಕಕ್ಕೆ 1.35 ಲಕ್ಷ ಮೆಟ್ರಿಕ್ ಟನ್ ಯುರಿಯಾ ಗೊಬ್ಬರವನ್ನು ಕಳುಹಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಮೂರ್ನಾಲ್ಕು ಕಂಪನಿಗಳಿಗೆ ಸೂಚನೆ ಕೊಡುತ್ತೇನೆ ಕೋರಮಂಡಲ, ಮದ್ರಾಸ್ ಫರ್ಟಿಲೈಸರ್ ಗಳಿಗೆ ಸೂಚನೆ ಕೊಡುತ್ತೇವೆ. ಹತ್ತು ಹದಿನೈದು ದಿನಗಳಲ್ಲಿ 1.35 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಸುವುದಾಗಿ ತಿಳಿಸಿದ್ದಾರೆ. ಇವತ್ತು ಹದಿನಾರು ಸಾವಿರ ಮೆಟ್ರಿಕ್ ಟನ್ ಗೊಬ್ಬರ ಕಳುಹಿಸಲಾಗುತ್ತಿದೆ. ಪ್ರತಿ ದಿನ ಹದಿನೈದರಿಂದ ಇಪ್ಪತ್ತು ಸಾವಿರ ಮೆಟ್ರಿಕ್ ಟನ್ ಗೊಬ್ಬರ ಸರಬರಾಜು ಮಾಡಲಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com