
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದಲ್ಲಿ (ಜಿಬಿಎ) ರಚಿಸಲಾಗಿರುವ ಐದು ಹೊಸ ನಗರ ಪಾಲಿಕೆಗಳ ವಾರ್ಡ್‌ಗಳನ್ನು ಅಂತಿಮಗೊಳಿಸಿ, ನವೆಂಬರ್ 1ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರು ಮಂಗಳವಾರ ಹೇಳಿದ್ದಾರೆ.
ನಗರಾಭಿವೃದ್ಧಿ ಇಲಾಖೆ (ಬೆಂಗಳೂರು) ಅಡಿಯಲ್ಲಿ ಬರುವ ಅಧಿಕಾರಿಗಳೊಂದಿಗೆ ಮಂಗಳವಾರ ಪರಿಶೀಲನಾ ಸಭೆ ನಡೆಸಿದ ಬಳಿಕ ಡಿಕೆ.ಶಿವಕುಮಾರ್ ಅವರು ಮಾತನಾಡಿದರು.
ಆಗಸ್ಟ್ 18 ರವರೆಗೆ ಸಾರ್ವಜನಿಕರು ತಮ್ಮ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸಲ್ಲಿಸಬಹುದು. ಸೆಪ್ಟೆಂಬರ್ 3 ರಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಐದು ಹೊಸ ಮಹಾನಗರ ಪಾಲಿಕೆಗಳಿಗೆ ಡಿಲಿಮಿಟೇಶನ್ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಹೊಸ ಆಯೋಗವು ಡಿಲಿಮಿಟೇಶನ್, ಕರಡು ಪ್ರಕಟಣೆ ಮತ್ತು ವಾರ್ಡ್‌ಗಳ ಅಂತಿಮ ಅಧಿಸೂಚನೆ ಮತ್ತು ಇತರ ವಿಧಾನಗಳನ್ನು ರೂಪಿಸುತ್ತದೆ. ಮೀಸಲಾತಿ ಪ್ರಕ್ರಿಯೆಯನ್ನೂ ಮಾಡಿ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಲಾಗುವುದು. ಹೊಸ ನಿಗಮಗಳಿಗೆ ಚುನಾವಣೆ ನಡೆಸಲು ಈ ಎಲ್ಲಾ ಪ್ರಕ್ರಿಯೆಯನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
ಇದೇ ವೇಳೆ ಆಸ್ತಿ ತೆರಿಗೆ ಸಂಗ್ರಹವನ್ನು ಸುವ್ಯವಸ್ಥಿತಗೊಳಿಸುವುದು ಮತ್ತು ಮಾಲೀಕರಿಗೆ ಇ-ಖಾತಾ ನೀಡುವಂತಹ ಪ್ರಮುಖ ನಿರ್ಧಾರಗಳ ಬಗ್ಗೆಯೂ ಸಚಿವರು ಮಾತನಾಡಿದರು.
ಬೆಂಗಳೂರಿನಲ್ಲಿ 24 ಲಕ್ಷ ಆಸ್ತಿಗಳಿವೆ. ಎ ಮತ್ತು ಬಿ ಖಾತಾ ಎರಡೂ ಆಸ್ತಿಗಳು ಜಿಬಿಎ ಮಿತಿಯಡಿಯಲ್ಲಿ ಬರುತ್ತವೆ. ಅವುಗಳ ಆಸ್ತಿಗಳಿಗೆ ಗ್ಯಾರಂಟಿಯಾಗಿ ಇ-ಖಾತಾ ನೀಡಲಾಗುತ್ತಿದ್ದು, ಇಲ್ಲಿಯವರೆಗೆ 6.5 ಲಕ್ಷ ಮಾಲೀಕರು ಇ–ಖಾತಾ ಪಡೆದಿದ್ದಾರೆ. "ಅಕ್ಟೋಬರ್ 22 ರಿಂದ ನವೆಂಬರ್ 1 ರವರೆಗೆ ಬೃಹತ್ ಅಭಿಯಾನ ನಡೆಯಲಿದ್ದು, ಹೆಚ್ಚಿನ ಆಸ್ತಿಗಳು ಇ-ಖಾತಾ ವ್ಯಾಪ್ತಿಗೆ ಬರುವುದನ್ನು ಖಚಿತಪಡಿಸಿಕೊಳ್ಳಲು ಇತರ ಇಲಾಖೆಗಳ ಅಧಿಕಾರಿಗಳನ್ನೂ ಕೂಡ ಕರ್ತವ್ಯಕ್ಕೆ ನೇಮಿಸಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಡಿಕೆ.ಶಿವಕುಮಾರ್ ಅವರು ಸ್ವಚ್ಛ ಬೆಂಗಳೂರು ಕುರಿತಂತೆ ಮಾತನಾಡಿ, ಸ್ವಚ್ಛ ಬೆಂಗಳೂರು: ನಗರದ ರಸ್ತೆ ಹಾಗೂ ಖಾಲಿ ಸ್ಥಳಗಳಲ್ಲಿ ಕಸ ಸುರಿದಿರುವುದು ಕಂಡು ಬಂದರೆ ಬಿಬಿಎಂಪಿಗೆ ವಾಟ್ಸ್‌ಆ್ಯಪ್ ಹಾಗೂ ಇ–ಮೇಲ್‌ನಲ್ಲಿ ದೂರು ನೀಡಲು ನಾಗರಿಕರಿಗೆ ತಿಳಿಸಲಾಗಿತ್ತು. ಈ ವರೆಗೂ 10,394 ದೂರುಗಳು ಬಂದಿದ್ದು, ಅದರಲ್ಲಿ ಒಂಬತ್ತು ಸಾವಿರಕ್ಕೂ ಹೆಚ್ಚು ದೂರುಗಳಿಗೆ ಪರಿಹಾರ ನೀಡಲಾಗಿದೆ. ಸ್ವಚ್ಛತೆ ಇನ್ನೂ ಸಾಲದ್ದಾಗಿದ್ದು, ಹೆಚ್ಚಿನ ರೀತಿಯಲ್ಲಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಕೆ.ಆರ್.ಪುರ ಕಡೆಯಿಂದ ನಗರದ ಕಡೆಗೆ ಬರುವ ಹೆಬ್ಬಾಳ ಜಂಕ್ಷನ್‌ನ ಪಥವನ್ನು ಆಗಸ್ಟ್ 15ರೊಳಗೆ ಉದ್ಘಾಟಿಸಲಾಗುತ್ತದೆ. ಇದರ ಜೊತೆಗೆ ಶಿವಾನಂದ ಸರ್ಕಲ್ ಜಂಕ್ಷನ್ ಅಭಿವೃದ್ಧಿ ಹಾಗೂ ಗಾಂಧಿ ಬಜಾರ್ ಬಳಿಯ ಬಹುಮಹಡಿ ಪಾರ್ಕಿಂಗ್ ಕಟ್ಟಡವನ್ನು ಬಳಸಲು ಅನುವು ಮಾಡಿಕೊಡಲಾಗುತ್ತದೆ. ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಉದ್ಘಾಟನಾ ದಿನಾಂಕ ನಿಗದಿ ಪಡಿಸಲಾಗುತ್ತದೆ. ಆಗಸ್ಟ್ 6 ಅಥವಾ 15ರೊಳಗೆ ಈ ಉದ್ಘಾಟನಾ ಕಾರ್ಯಕ್ರಮಗಳು ನಡೆಯಲಿವೆ. ಹೆಬ್ಬಾಳದಿಂದ ಕೆ.ಆರ್. ಪುರಂ ಫ್ಲೈಓವರ್ ಯೋಜನೆಯನ್ನು ಉದ್ಘಾಟಿಸಲು ಆಗಸ್ಟ್ 6 ರಂದು ಮುಖ್ಯಮಂತ್ರಿ ಅವರಿಂದ ಸಮಯ ಕೇಳಿದ್ದೇವೆ ಎಂದು ಅವರು ಹೇಳಿದರು.
Advertisement