
ನವದೆಹಲಿ: ನಮ್ಮ ಮೆಟ್ರೋ ದರ ಏರಿಕೆಯನ್ನು ತೀವ್ರವಾಗಿ ಟೀಕಿಸಿರುವ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಶುಲ್ಕ ನಿಗದಿ ಸಮಿತಿ (ಎಫ್‌ಎಫ್‌ಸಿ) ವರದಿಯನ್ನು ಪ್ರಕಟಿಸದ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಲೋಕಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಬುಧವಾರ ಮಾತನಾಡಿದ ತೇಜಸ್ವಿ ಸೂರ್ಯ ಅವರು, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಮೂಲಕ ಎಫ್‌ಎಫ್‌ಸಿ ವರದಿಯನ್ನು ತಕ್ಷಣ ಪ್ರಕಟಿಸುವಂತೆ ಬಿಎಂಆರ್‌ಸಿಎಲ್‌ಗೆ ಸೂಚನೆ ನೀಡಬೇಕೆಂದು ಸ್ಪೀಕರ್ ಓಂ ಬಿರ್ಲಾ ಅವರನ್ನು ಒತ್ತಾಯಿಸಿದರು.
ಸುಮಾರು 4 ತಿಂಗಳ ಹಿಂದೆ (ಫೆಬ್ರವರಿಯಲ್ಲಿ), ಬಿಎಂಆರ್‌ಸಿಎಲ್ ಮೆಟ್ರೋ ದರವನ್ನು ಸುಮಾರು ಶೇ.130ರಷ್ಟು ಹೆಚ್ಚಿಸಿತ್ತು. ಸಾರ್ವಜನಿಕ ಸಾರಿಗೆ ಸೇವೆಗಳು ಸಾಮಾನ್ಯ ಜನರಿಗೆ ಕೈಗೆಟುಕುವಂತಿರಬೇಕು. ಈ ಹೆಚ್ಚಳವು ಪ್ರಯಾಣಿಕರ ಸಂಖ್ಯೆಯಲ್ಲಿ ತೀವ್ರ ಇಳಿಕೆಗೆ ಕಾರಣವಾಗಿದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ದರ ಏರಿಕೆಯ ಆಧಾರವನ್ನು ತಿಳಿದುಕೊಳ್ಳಲು ಜನರು ಅರ್ಹರಾಗಿದ್ದಾರೆ. ಆದರೆ, ಹಲವು ವಿನಂತಿಗಳ ಹೊರತಾಗಿಯೂ, ಬಿಎಂಆರ್‌ಸಿಎಲ್ (ಎಫ್‌ಎಫ್‌ಸಿ) ವರದಿಯನ್ನು ಇನ್ನೂ ಸಾರ್ವಜನಿಕಗೊಳಿಸಿಲ್ಲ.
ಬೆಂಗಳೂರು ಮೆಟ್ರೊದಲ್ಲಿ 25 ಕಿ.ಮೀ.ಗಿಂತ ಹೆಚ್ಚಿನ ಪ್ರಯಾಣಕ್ಕೆ ರೂ.90 ಪಾವತಿಸಬೇಕಿದೆ. ಸಾರ್ವಜನಿಕರ ಆಕ್ರೋಶದ ನಂತರ ಬಿಎಂಆರ್‌ಸಿಎಲ್ ದರವನ್ನು ಅಲ್ಪ ಕಡಿಮೆ ಮಾಡಿದೆ. ಆದರೂ, ಪ್ರಯಾಣಿಕರಿಗೆ ಹೊರೆಯಾಗಿದೆ.
ಬೆಂಗಳೂರು ದೇಶದ ಆರ್ಥಿಕತೆ ಎಂಜಿನ್ ಆಗಿದೆ. ಆದರೆ, ನಗರ ಮೂಲಸೌಕರ್ಯ ಕೊರತೆ, ಸಂಚಾರ ಸಮಸ್ಯೆಯಿಂದ ಬಳಲುತ್ತಿದೆ, ಸಂಚಾರ ದಟ್ಟಣೆಯನ್ನು ಪರಿಹರಿಸಬಹುದಾದ ಏಕೈಕ ಮಾರ್ಗವೆಂದರೆ ತ್ವರಿತ ಮೆಟ್ರೋ ವಿಸ್ತರಣೆ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವುದಾಗಿದೆ ಎಂದು ತಿಳಿಸಿದರು. ಇದೇ ವೇಳೆ ಮೆಟ್ರೋ ಹಳದಿ ಮಾರ್ಗವನ್ನು ಶೀಘ್ರವಾಗಿ ಕಾರ್ಯರೂಪಕ್ಕೆ ತರುವಂತೆ ಕರೆ ನೀಡಿದರು.
ಕೇಂದ್ರ ಸಚಿವ ಸಂಪುಟದ ಅನುಮೋದನೆಗಾಗಿ ಕಾಯುತ್ತಿರುವ ಮೆಟ್ರೋ ರೆಡ್ ಲೈನ್‌ಗೆ ಅನುಮೋದನೆಯನ್ನು ತ್ವರಿತಗೊಳಿಸುವಂತೆ ಇದೇ ವೇಳೆ ತೇಜಸ್ವಿ ಸೂರ್ಯ ಅವರು ಒತ್ತಾಯಿಸಿದರು.
Advertisement