
ಬೆಳಗಾವಿ: ಬೆಳಗಾವಿಯಲ್ಲಿ ನಡೆದಿದ್ದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ 5ಕ್ಕೇರಿಕೆಯಾಗಿದ್ದು, ಈ ಪೈಕಿ ಇಬ್ಬರು ಅಪ್ರಾಪ್ತರು ಸೇರಿದ್ದಾರೆ ಎಂದು ತಿಳಿದುಬಂದಿದೆ.
15 ವರ್ಷದ ಬಾಲಕಿ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಪೊಲೀಸರು ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದು, ಇದಲ್ಲದೆ ಇಬ್ಬರು ಅಪ್ರಾಪ್ತರನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪರಾರಿಯಾದ ಮತ್ತೊಬ್ಬ ಆರೋಪಿ ಬಂಧನಕ್ಕೆ ಜಾಲ ಬೀಸಿದ್ದೇವೆ ಎಂದು ನಗರ ಪೊಲೀಸ್ ಕಮಿಷನರ್ ಭೂಷಣ್ ಗುಲಾಬರಾವ್ ಬೊರಸೆ ಹೇಳಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಎಪಿಎಂಸಿ ಠಾಣೆಯಲ್ಲಿ 6 ಮಂದಿ ವಿರುದ್ಧ ಶನಿವಾರ ಎಫ್‌ಐಆರ್ ದಾಖಲಾಗಿತ್ತು. ಇದಾದ 24 ಗಂಟೆಗಳೊಳಗೆ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಂತ್ರಸ್ತೆ ಮತ್ತು ಆರೋಪಿಗಳು ಬೆಳಗಾವಿ ಜಿಲ್ಲೆಯವರೇ ಆಗಿದ್ದಾರೆ’ ಎಂದರು.
ಅಂತೆಯೇ 'ಆರಂಭದಲ್ಲಿ ಒಬ್ಬನು ಬಾಲಕಿ ಪರಿಚಯಿಸಿಕೊಂಡು, ಸ್ನೇಹ ಬೆಳೆಸುತ್ತಾನೆ. ಬಳಿಕ ಆತ ಮತ್ತು ಸ್ನೇಹಿತರು 2024ರ ಡಿಸೆಂಬರ್‌ನಲ್ಲಿ ಪುಸಲಾಯಿಸಿಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾರೆ. ಅತ್ಯಾಚಾರದ ದೃಶ್ಯವನ್ನು ಆರೋಪಿಗಳು ವಿಡಿಯೊ ರೆಕಾರ್ಡ್ ಮಾಡಿದ್ದಾರೆ.
ಅದನ್ನೇ ತೋರಿಸಿ ಬ್ಲ್ಯಾಕ್‌ಮೇಲ್ ಮಾಡಿ, 2025ರ ಜನವರಿಯಲ್ಲಿ ಮತ್ತೆ ಮೂವರು ಅತ್ಯಾಚಾರ ಮಾಡಿದ್ದಾರೆ. ಬೇರೆ ಬೇರೆ ಸ್ಥಳಗಳಲ್ಲಿ ಅತ್ಯಾಚಾರ ಮಾಡಲಾಗಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಪ್ರಯತ್ನಿಸಲಾಗುವುದು' ಎಂದು ತಿಳಿಸಿದರು.
Advertisement